ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡುವಂತೆ ತೀರ್ಪು ನೀಡಿ 14 ತಿಂಗಳು ಕಳೆದರೂ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಪರಿಶಿಷ್ಟ ಜಾತಿಗಳಿಗೆ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯವರು ನಗರದ ಪುರಭವನ ಆವರಣದಲ್ಲಿ ಗುರುವಾರ ಪ್ರತಿಭಟನಾ ಸಮಾವೇಶ ಆಯೋಜಿಸಿದ್ದರು.ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟಿಸಿದ ಅವರು, ಸುಪ್ರೀಂಕೋರ್ಟ್ ಒಳ ಮೀಸಲಾತಿ ಜಾರಿ ಮಾಡುವಂತೆ ತೀರ್ಪು ನೀಡಿ 14 ತಿಂಗಳು ಕಳೆದರೂ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ. ಸರ್ಕಾರ ಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಪೂರ್ಣ ಪ್ರಮಾಣದ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸೇರಿದಂತೆ ಎಲ್ಲಾ ಶೈಕ್ಷಣಿಕ ರಂಗಗಳಲ್ಲಿ ಒಳಮೀಸಲಾತಿ ಅನ್ವಯಿಸಬೇಕು. ಕಂದಾಯ ಇಲಾಖೆ ಪರಿಶಿಷ್ಟ ಜಾತಿಗಳ ಪ್ರವರ್ಗವಾರು ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಅನುದಾನಿತ ಶಾಲೆಗಳು ಸೇರಿದಂತೆ ಸರ್ಕಾರಿ, ಅರೆ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ, ಬಡ್ತಿ, ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೂ ಅನ್ವಯಿಸಿ ಆದೇಶಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪರಿಶೀಲಿಸಿಲು ಪ್ರವರ್ಗ-ಎಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು ಎಂದು ಅವರು ಆಗ್ರಹಿಸಿದರು.ಪರಿಶಿಷ್ಟ ಜಾತಿಯ ಪಟ್ಟಿಯಿಂದ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಜಾತಿಗಳನ್ನು ಪರಿಶಿಷ್ಟ ಜಾತಿಯ 101 ಜಾತಿಗಳ ಪಟ್ಟಿಯಿಂದ ತೆಗೆಯಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಮಾಜ ಕಲ್ಯಾಣ ಇಲಾಖೆಯನ್ನೇ ತಪ್ಪು ದಾರಿಗೆ ಎಳೆದು, ಒಳಮೀಸಲಾತಿ ಬಗ್ಗೆ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಇಲಾಖೆಯನ್ನು ನಿಷ್ಕ್ರಿಯಗೊಳಿಸುತ್ತಿರುವ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಇಲಾಖೆ ಆಯುಕ್ತ ರಾಕೇಶ್ ಕುಮಾರ, ಸಲಹೆಗಾರ ವೆಂಕಟಯ್ಯ ಅವರನ್ನು ಕೂಡಲೇ ವರ್ಗಾಯಿಸಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಹುದ್ದೆಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ ಗುತ್ತಿಗೆ ಕಾಮಗಾರಿ, ಗುತ್ತಿಗೆ ಕಾರ್ಮಿಕರ ನೇಮಕಾತಿ, ತಾತ್ಕಾಲಿಕ ನೇಮಕಾತಿ ಸೇರಿದಂತೆ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರು ನೇಮಕಾತಿಯಲ್ಲೂ ಅನ್ವಯಿಸಿ ಆದೇಶಿಸಬೇಕು. ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯಿಗಳಿಗೆ ಶೇ.1 ಒಳಮೀಸಲಾತಿ ಜಾರಿಗೊಳಿಸಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರತುಪಡಿಸಿ, ರಾಜ್ಯದ ವಿವಿಧ ಪಾಲಿಕೆ, ವಿವಿಧ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಯುಜಿಡಿ ಕಾರ್ಮಿಕರು, ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್ ಗಳನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಸಮಿತಿಯ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ವಕೀಲ ಎಸ್. ಮಾರಪ್ಪ, ಮುಖಂಡರಾದ ಕೇಶವಮೂರ್ತಿ, ವೆಂಕಟೇಶ್, ಕೃಷ್ಣಪ್ಪ, ಶಿವಾನಂದ, ಸೋಮು, ಭಾನುಪ್ರಸಾದ್, ಸಿದ್ದುಮಾಧು, ಮೂಗೂರು ಸಿದ್ದರಾಜು, ನರಸಿಂಹಮೂರ್ತಿ, ಸ್ವಾಮಿ, ಗಂಗಯ್ಯ, ಮೇಟಗಳ್ಳಿ ಕರಿಯಪ್ಪ, ರಾಜಣ್ಣ, ಶಿವು, ವೆಂಕಟರಾಮು, ವೆಂಕಟೇಶ್, ಸಂತೋಷ್, ದಾಸು ಮೊದಲಾದವರು ಇದ್ದರು.