ಕನಕಪುರ: ಹೊಸ ಮಾದರಿಯಲ್ಲಿ ಸರ್ವೆ ಕಾರ್ಯ ಆರಂಭಿಸುವ ಮೂಲಕ ಯಾವುದೇ ಗೊಂದಲ ಇಲ್ಲದೆ, ರೈತರು ತಾಲೂಕು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಬದಲಾವಣೆಯ ಪರ್ವ ಆರಂಭಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ "ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ " ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಯೋಗಿಕವಾಗಿ ನಮ್ಮ ಹೋಬಳಿಯಿಂದ ಹೊಸ ಸರ್ವೆ ಕಾರ್ಯವನ್ನು ಪ್ರಾರಂಭಿಸಿದ್ದು, ಅಲ್ಲದೇ ನಾನು ಡಿಸಿಎಂ ಆದ ಮೇಲೆ ನಿಮ್ಮನ್ನು ಭೇಟಿ ಮಾಡೋದು ಕಷ್ಟ ಆಗಿರುವುದರಿಂದ, ನಿಮ್ಮ ಸಮಸ್ಯೆ ಆಲಿಸಲು ನಾನೇ ನಿಮ್ಮ ಬಾಗಿಲಿಗೆ ಬಂದಿದ್ದೇನೆ ಎಂದು ಹೇಳಿದರು.ಹೋಬಳಿ ಮಟ್ಟದಲ್ಲಿ ಜನಸ್ಪಂದನಾ ಸಭೆ ಮಾಡ್ತಿದ್ದೇನೆ. ನಮ್ಮ ಹೋಬಳಿಯಲ್ಲಿ 35 ಗ್ರಾಮಗಳಿದ್ದು, ಅದರಲ್ಲಿ 33 ಗ್ರಾಮಗಳಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಸರ್ವೆ ಮಾಡಲಾಗಿದೆ. ಹಿಂದೆ ರೈತರು ಪೋಡಿ ಮಾಡಿಸಿಕೊಳ್ಳಬೇಕು. ಅಂದರೆ ಸಾಕಷ್ಟು ಹಣ ತೆರಬೇಕಾಗಿತ್ತು. ಹಾಗಾಗಿ ಈ ಹೊಸ ಸರ್ವೆ ಕಾರ್ಯದ ಮೂಲಕ ಅದನ್ನು ತಪ್ಪಿಸ್ತಿದ್ದು ಪಹಣಿ, ಸ್ಕೆಚ್ ಎಲ್ಲಾ ಒಂದೇ ದಾಖಲೆಯಲ್ಲಿ ಇರಲಿವೆ. ಬೆಂಗಳೂರಿನಲ್ಲೂ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿಸುತ್ತಿದ್ದು ಯಾವುದೇ ದಾಖಲೆಗಳು ನಾಶ ಆಗದೇ ಡಿಜಿಲೀಕರಣವಾಗಿ ಉಳಿಯಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.
ಇಡೀ ದೇಶದಲ್ಲೇ ಕನಕಪುರದಲ್ಲಿ ನರೇಗಾ ಯೋಜನೆ ಯಶಸ್ವಿಯಾಗಿದ್ದು, ತಾಲೂಕಿನ 120 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಗಿದೆ. ರೈತರಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಹೋಬಳಿ ಹೆಡ್ ಕ್ವಾಟರ್ಸ್‌ಗಳಲ್ಲಿ ಸುಸಜ್ಜಿತ ರಸ್ತೆಗಳನ್ನು ಮಾಡುವ ಮೂಲಕ ನಿಮ್ಮ ಆಸ್ತಿ ಮೌಲ್ಯಗಳನ್ನು ಹೆಚ್ಚಿಸುವ ಕೆಲಸ ಮಾಡಿದ್ದೇನೆ. ನೀವು ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿಗಳನ್ನು ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.ರಾಮನಗರ ನಗರವು ಕೇಂದ್ರಾಡಳಿತ ಒಳಗೊಂಡಂತೆ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಲು ಈಗಾಗಲೇ ಸಚಿವ ಸಂಪುಟದಲ್ಲಿ ಒಪ್ಪಿಗೆ ಆಗಿ ದೆಹಲಿಗೆ ಹೋಗಿದ್ದು, ಎಲ್ಲಾ ಕಡೆ ಎನ್‌ಓಸಿ ಸಿಕ್ಕಿದೆ. ಶೀಘ್ರದಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆ ಆಗಲಿರುವುದರಿಂದ ನಿಮ್ಮ ಜಮೀನಿನ ಬೆಲೆ ಹೆಚ್ಚಾಗಲಿದೆ. ಯಾರು ಟೀಕೆ ಮಾಡಿದ್ರೂ ತಲೆಕೆಡಿಸಿಕೊಳ್ಳಬೇಡಿ. ಟೀಕೆ ಮಾಡುವವರು ಇಲ್ಲಿ ಆಸ್ತಿ ಖರೀದಿ ಮಾಡಿದ್ದು ನಾವು ಬೆಂಗಳೂರು ಜಿಲ್ಲೆಯವರಾಗಿದ್ದು ಮುಂದಿನ ದಿನ ಗಳಲ್ಲಿ ರಾಮನಗರದ ಮೆಡಿಕಲ್ ಕಾಲೇಜು ಆರಂಭವಾಗಲಿದ್ದು ಕನಕಪುರದಲ್ಲೂ ಮೆಡಿಕಲ್ ಕಾಲೇಜು ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಸಂಸದ ಡಿ.ಕೆ.ಸುರೇಶ್, ಭೂಮಾಪನ ಇಲಾಖೆ ಆಯುಕ್ತ ಮಂಜುನಾಥ್, ಜಿಲ್ಲಾಧಿಕಾರಿ ಯಶವಂತ್.ಕೆ. ಗುರಿಕಾರ್,ಸಿ ಇ ಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ತಹಸೀಲ್ದಾರ್ ಮಂಜುನಾಥ್, ಎಡಿಎಲ್ ಆರ್ ನಂದೀಶ್, ಬಮೂಲ್ ಅಧ್ಯಕ್ಷ ಎಚ್.ಪಿ.ರಾಜಕುಮಾರ್, ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಕನಕಪುರ ನಗರಸಭಾ ಅಧ್ಯಕ್ಷೆ ಲಕ್ಮಿದೇವಮ್ಮ, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ, ದೊಡ್ಡ ಆಲಹಳ್ಳಿ ಗ್ರಾಪಂ ಅಧ್ಯಕ್ಷೆ ಸುಜಾತ, ಮುಖಂಡರಾದ ಎಚ್.ಕೆ.ರವಿ, ಮಧುಸೂದನ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ರೈತರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದಲ್ಲಿ "ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ " ಘೋಷವಾಕ್ಯದಡಿ ಹೋಬಳಿ ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಡಿ.ಕೆ.ಸುರೇಶ್ ಇತರರಿದ್ದರು.