ಕನ್ನಡಪ್ರಭ ವಾರ್ತೆ ಕುಶಾಲನಗರ
ಸಮುದಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರೋಟರಿ ಸದಸ್ಯರು ತಮ್ಮ ಯೋಜನೆಗಳ ಚಮತ್ಕಾರ ಅನಾವರಣಗೊಳಿಸಬೇಕು ಎಂದು ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಸಹಾಯಕ ರಾಜ್ಯಪಾಲರಾದ ಡಾ ಸಿ ಆರ್ ಪ್ರಶಾಂತ್ ಕರೆ ನೀಡಿದ್ದಾರೆ.ಅವರು ಕುಶಾಲನಗರ ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದರು.
ಮಹಿಳಾ ಶಕ್ತಿ ಮೂಲಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಲು ಸಾಧ್ಯ ಎಂದ ಅವರು, ರೋಟರಿಯಲ್ಲಿ ಮಹಿಳಾ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ ಎಂದರು.ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಕುಶಾಲನಗರ ರೋಟರಿ ಕಾರ್ಯ ವೈಖರಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕುಶಾಲನಗರದ ನೂತನ ಅಧ್ಯಕ್ಷರಾಗಿ ಸಿ ಬಿ ಹರೀಶ್ , ಕಾರ್ಯದರ್ಶಿಯಾಗಿ ಡಿ ಡಿ ಕಿರಣ್ ಅವರು ಆಯ್ಕೆಗೊಂಡಿದ್ದು ಅವರ ತಂಡಕ್ಕೆ ಪ್ರಮಾಣವಚನ ಬೋಧಿಸಿದರು.ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಸುನೀತಾ ಮಹೇಶ್ ಅವರಿಂದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸಹಾಯಕ ರಾಜ್ಯಪಾಲರಾದ ಡಾ. ಹರಿ ಎ. ಶೆಟ್ಟಿ ಹಿಂದಿನ ಸಾಲಿನ ಸಹಾಯಕ ರಾಜ್ಯಪಾಲ ಎಂ ಡಿ ಲಿಖಿತ್ , ವಲಯ ಸೇನಾನಿ ಉಲ್ಲಾಸ್ ಕೃಷ್ಣ, ನೂತನ ಸಾಲಿನ ವಲಯ ಸೇನಾನಿ ಎಂ ಎಂ ಪ್ರಕಾಶ್ ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಗೊಂದಿ ಬಸವನಹಳ್ಳಿಯ ಅಂಗನವಾಡಿಗೆ ಅಗತ್ಯವಿರುವ ಸಲಕರಣೆಗಳನ್ನು ವಿತರಿಸಲಾಯಿತು.
ಕುಶಾಲನಗರ ವ್ಯಾಪ್ತಿಯ ಪಿಯು ತರಗತಿಯಲ್ಲಿ ಅತಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಹಿಂದಿನ ಸಾಲಿನ ಕಾರ್ಯದರ್ಶಿ ಕೆ ಎಸ್ ಶರ್ಲಿ ಮತ್ತು ರೋಟರಿ ಕುಶಾಲನಗರ ಸೇರಿದಂತೆ ಕೊಡಗು ಜಿಲ್ಲೆ, ನೆರೆಯ ರೋಟರಿ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.