ರಾಮಮಂದಿರ ಉದ್ಘಾಟನೆ-ಕಾಂಗ್ರೆಸ್‌ಗೆ ಹೊಟ್ಟೆಯುರಿ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಸಿದ್ದರಾಮಯ್ಯ ಬೆಂಕಿ ಹಚ್ಚುವ ಅಂಬಾಸಿಡರ್‌ ಆಗಿದ್ದಾರೆ. ಹಿಂದೆ ವೀರಶೈವ- ಲಿಂಗಾಯತರ ಮಧ್ಯೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಆಗ ಜನರೇ ಪಾಠ ಕಲಿಸಿದ್ದರು. ಇದೀಗ ಹಿಂದೂ ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿಕಾರಿದ್ದಾರೆ.

- ರಾಮನ ಭಕ್ತರನ್ನು ಕೆಣಕಿದ್ದೀರಿ: ನಿಮಗೆ ಉಳಿಗಾಲವಿಲ್ಲ

- ಪ್ರತಿಭಟನೆಯಲ್ಲಿ ಆರ್‌.ಅಶೋಕ್‌

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗುತ್ತಿರುವುದು ಕಾಂಗ್ರೆಸ್‌ಗೆ ಹೊಟ್ಟೆಯುರಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಎಲ್‌ಪಿಆರ್‌ ಹೆಸರಲ್ಲಿ ಅಮಾಯಕ ರಾಮಭಕ್ತರನ್ನು ಬಂಧಿಸುತ್ತಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ- ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಕಿಡಿಕಾರಿದ್ದಾರೆ.

ಇಂತಹ ನೂರು ಸಿದ್ದರಾಮಯ್ಯ ಬಂದರೂ ಹಿಂದೂ ಕಾರ್ಯಕರ್ತರನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಗುಡುಗಿದ ಅವರು, ಶ್ರೀರಾಮನ ಭಕ್ತರನ್ನು ಕೆಣಕಿದ್ದೀರಿ. ಜೈ ಶ್ರೀರಾಮ ಎಂದವರನ್ನು ಜೈಲಿಗೆ ಹಾಕುತ್ತೀರಿ. ನಿಮಗೆ ಉಳಿಗಾಲವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಜನ್ಮಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧಿಸಿರುವುದನ್ನು ಖಂಡಿಸಿ ಇಲ್ಲಿನ ಶಹರ ಠಾಣೆಯ ಎದುರು ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ ಬೆಂಕಿ ಹಚ್ಚುವ ಅಂಬಾಸಿಡರ್‌ ಆಗಿದ್ದಾರೆ. ಹಿಂದೆ ವೀರಶೈವ- ಲಿಂಗಾಯತರ ಮಧ್ಯೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಆಗ ಜನರೇ ಪಾಠ ಕಲಿಸಿದ್ದರು. ಇದೀಗ ಹಿಂದೂ ಮುಸ್ಲಿಮರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದೆಯೂ ಶ್ರೀರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದರು. ಕಾಂಗ್ರೆಸ್‌ನವರು ಯಾವಾಗಲೂ ಶ್ರೀರಾಮಮಂದಿರವನ್ನು ವಿರೋಧಿಸುತ್ತಲೇ ಬಂದವರು. ಈಗ ಉದ್ಘಾಟನೆಯಾಗುವ ವೇಳೆ ಹೋರಾಟಗಾರರನ್ನು ಬಂಧಿಸುವ ಮೂಲಕ ಹಿಂದೂಗಳನ್ನು ಹೆದರಿಸುವ ತಂತ್ರ ಮಾಡುತ್ತಿದ್ದಾರೆ ಎಂದರು.

ಇಂತಹ ನೂರು ಸಿದ್ದರಾಮಯ್ಯ ಬಂದರೂ ಹಿಂದೂ ಕಾರ್ಯಕರ್ತರನ್ನು ಹೆದರಿಸಲು ಸಾಧ್ಯವಿಲ್ಲ. ಅದು ಆಗದ ಮಾತು ಎಂದು ಎಚ್ಚರಿಕೆ ನೀಡಿದ ಅವರು, 31 ವರ್ಷದ ಬಳಿಕ ಅದ್ಹೇಗೆ ಬಂಧಿಸಿದೀರಿ ಎಂದು ಪ್ರಶ್ನಿಸಿದರು.

ತಾಕತ್‌ ಇದ್ದರೆ ಬಂಧಿಸಿ:

ಎಲ್‌ಪಿಆರ್‌ ಕೇಸ್‌ಗಳು ನನ್ನ ಮೇಲೂ ಇವೆ. ಯಡಿಯೂರಪ್ಪ ಮೇಲೂ ಇವೆ. ನಿಮಗೆ ತಾಕತ್ತಿದ್ದರೆ ನಮ್ಮನ್ನು ಬಂಧಿಸಿ. ಜೈ ಶ್ರೀರಾಮ ಎಂದವರ ಜೈಲಿಗೆ ಹಾಕುತ್ತಿದ್ದೀರಿ. ಆದರೆ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಪೋಟ ಮಾಡಿದವರನ್ನು ಬ್ರದರ್ಸ್‌ ಎಂದು ಹೇಳುತ್ತಿರಿ. ಭಯೋತ್ಪಾದಕರು ನಿಮಗೆ ಅಣ್ಣತಮ್ಮಂದಿರು. ಆದರೆ ರಾಮನಭಕ್ತರು ಅಪರಾಧಿಗಳಾ ಎಂದು ಖಾರವಾಗಿ ಪ್ರಶ್ನಿಸಿದರು.

ನಿಮ್ಮ ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಮೇಲೂ ಕೇಸ್‌ಗಳಿವೆ. ಅದಕ್ಕೇನು ಹೇಳುತ್ತೀರಿ ಎಂದು ಪ್ರಶ್ನಿಸಿದ ಅವರು, ಹಳೇಹುಬ್ಬಳ್ಳಿಯಲ್ಲಿ ಪೊಲೀಸ್‌ ವಾಹನ ಜಖಂ ಮಾಡಿದವರಿಗೆ, ಗಲಭೆ ನಡೆಸಿದ ಮುಸ್ಲಿಮರನ್ನು ಅಮಾಯಕರು ಎಂದು ಕರೆಯುತ್ತೀರಿ. ಅವರ ಮೇಲಿನ ಕೇಸ್‌ಗಳನ್ನು ಹಿಂಪಡೆಯಬೇಕೆಂದು ಪತ್ರ ಬರೆಯುತ್ತೀರಿ ಎಂದರು.

1992ರಲ್ಲಿ ನಡೆದಿದ್ದ ಪ್ರಕರಣದಲ್ಲಿ ಪೊಲೀಸರ ಬಳಿ ಎಫ್‌ಐಆರ್‌ ಇಲ್ಲ. ಜತೆಗೆ ಬಂಧಿಸುವ ಮುನ್ನ ನೋಟಿಸ್‌ ನೀಡಬೇಕಲ್ಲಾ, ಏಕೆ ನೀಡಲಿಲ್ಲ. ದೂರು ನೀಡಿರುವ ಪ್ರತಿ ಇದೆಯಾ? ಕೋರ್ಟ್‌ ರಜೆ ಇದ್ದಾಗ ಆರೋಪಿಯನ್ನು ಬಂಧಿಸಿದ್ದು ಏಕೆ? ಬೇಕಂತಲೇ ಜಾಮೀನು ಸಿಗಬಾರದೆಂಬ ಉದ್ದೇಶದಿಂದ ಬಂಧಿಸಿರುವುದಾ ಎಂದು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಹುರಳಿಲ್ಲ. ಯಾವುದೇ ಸಾಕ್ಷಿಧಾರ ಇಲ್ಲ ಎಂದು ಕೋರ್ಟ್‌ ಹೇಳಿದೆ. ಹೀಗಿರುವ ಲೋಕಸಭಾ ಚುನಾವಣೆ ಹತ್ತಿರ ಇರುವ ಕಾರಣದಿಂದ ರಾಮಭಕ್ತರು, ಕರಸೇವಕರನ್ನು ಸರಕಾರ ಬಂಧಿಸುತ್ತಿದೆ ಎಂದರು.

ರಾಜ್ಯದಲ್ಲಿ 69 ಸಾವಿರ ಎಲ್‌ಪಿಆರ್‌ ಪ್ರಕರಣಗಳಿವೆ. ಈ ವರೆಗೆ ಎಷ್ಟು ಜನ ಆರೋಪಿಗಳನ್ನು ಬಂಧಿಸಿದ್ದೀರಿ? ಎಲ್‌ಪಿಆರ್‌ ಎನ್ನುವುದು ಬರೀ ಹುಬ್ಬಳ್ಳಿಗಷ್ಟೇ ಅದು ಕೂಡ ಕರಸೇವಕರಿಗಷ್ಟೇ ಸೀಮಿತನಾ? ಎಂದು ಪ್ರಶ್ನಿಸಿದ ಅವರು ಜೈ ಶ್ರೀರಾಮ ಎಂದರೆ ನೀವು ಬಂಧಿಸುವುದಾದರೆ ನಾವೆಲ್ಲರೂ ರೆಡಿ ಎಷ್ಟು ಜನರನ್ನಾದರೂ ಬಂಧಿಸಿ ನಾವು ನೋಡುತ್ತೇವೆ. ಹಿಂದೂ ಕಾರ್ಯಕರ್ತರನ್ನು ಎಲ್ಲಿಯೇ ಬಂಧಿಸಿದರೂ ನಾವು ಬರುತ್ತೇವೆ ಎಂದು ಗುಡುಗಿದರು.

ರಾಮಮಂದಿರ ಉದ್ಘಾಟನೆಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮನೆ ಮನೆಗೆ ಮಂತ್ರಾಕ್ಷತೆ ಹಂಚಿಕೆ, ಜ್ಯೋತಿ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಇದನ್ನು ತಡೆಯಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ರೀತಿ ಮಾಡುತ್ತಿದೆ. ಅಲ್ಲದೇ, ಮುಸ್ಲಿಂ ಓಲೈಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಪಾರ್ಲಿಮೆಂಟ್‌ ಚುನಾವಣೆ ಆದ ಬಳಿಕ ಈ ಸರ್ಕಾರ ಇರಲ್ಲ. ಅದಕ್ಕಾಗಿ ಏನೇನೋ ಕುತಂತ್ರ ನಡೆಸುತ್ತಿದೆ ಎಂದು ಟೀಕಿಸಿದ ಅವರು, ರಾಮನನ್ನು ಕೆಣಕಿದ ಯಾರನ್ನೂ ಹನುಮಂತ ಬಿಟ್ಟಿಲ್ಲ. ಇದೀಗ ರಾಮನಭಕ್ತನನ್ನು ಕೆಣಕಿದ್ದೀರಿ ನಿಮಗೆ ಉಳಿಗಾಲವಿಲ್ಲ. ಟಿಪ್ಪು ಔರಂಗಜೇಬ ರೀತಿ ಸರ್ಕಾರ ನಡೆಸಲು ಹೊರಟಿದ್ದಾರೆ. ಟಿಪ್ಪು ಹಿಂದೆ ಹೋದವರ ಕಥೆಯೆಲ್ಲ ಸರ್ವನಾಶವಾಗಿದೆ ಎಂಬುದು ಗೊತ್ತಿರಲಿ ಎಂದರು.

ಶ್ರೀಕಾಂತ ಬಂಧಿಸಿದ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ನಮಗೆ ವರ್ಗಾವಣೆ ಬೇಡ. ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

Share this article