ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ವೈವಾಹಿಕ ಬದುಕಿನ ಕರ್ತವ್ಯಗಳು, ಸಾಮಾಜಿಕ ಬದುಕಿನ ಕರ್ತವ್ಯಗಳನ್ನು ಮರೆತು ಶೋಕಿ ಬದುಕಿನತ್ತ ಆಕರ್ಷಿತರಾದ ಫಲವಾಗಿ ಇಂದು ರಾಷ್ಟ್ರದ ಆಧಾರ ಸ್ತಂಭಗಳಾದ ಮನೆಗಳು ದುರ್ಬಲವಾಗುತ್ತಿದೆ. ಎಲ್ಲ ಕಡೆಗಳಲ್ಲಿ ಮರೆಯಾಗುತ್ತಿರುವ ಸಂಸ್ಕಾರಗಳನ್ನು ಇಂದು ಶಿಶು ಮಂದಿರದಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು. ಅವರು ಶನಿವಾರ ರಾತ್ರಿ ಇಳಂತಿಲದ ಶ್ರೀ ಕೇಶವ ಶಿಶು ಮಂದಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಭಾರತೀಯರ ಪರಾಕ್ರಮದ ಇತಿಹಾಸವನ್ನು ಮರೆಮಾಚಿ ಸೋಲಿನ ಇತಿಹಾಸವನ್ನು ಪಠ್ಯಗಳಲ್ಲಿ ತುರುಕುತ್ತಿರುವುದರಿಂದ ನಮ್ಮ ಶ್ರೇಷ್ಠತೆಯ ಬಗೆಗಿನ ಅರಿವು ನಮ್ಮವರಿಗಿಲ್ಲದಂತಾಗಿದೆ. ಧರ್ಮ ಶಿಕ್ಷಣ ನೀಡಬೇಕಾದ ದೇವಾಲಯ, ಶಿಕ್ಷಣ ಸಂಸ್ಥೆಗಳೆಲ್ಲವೂ ಇಂದು ವ್ಯಾಪಾರಿಕರಣವಾಗಿದ್ದು, ಸರ್ಕಾರಗಳು ಜಾತ್ಯಾತೀತತೆಯ ಸೋಗಿನಲ್ಲಿ ಹಿಂದೂ ಧರ್ಮದ ಮೇಲೆ ಅನ್ಯಾಯವೆಸಗುತ್ತಿದೆ. ದೇಶಕ್ಕೆ ಹೊರಗಿನ ಮತ್ತು ಒಳಗಿನ ಶಕ್ತಿಗಳು ಗಂಡಾಂತರವನ್ನು ಮೂಡಿಸಲು ಸಂಚು ರೂಪಿಸಿದ್ದು, ಪ್ರತಿಯೋರ್ವ ವ್ಯಕ್ತಿಯೂ ಹಿಂದುತ್ವದ ಆಧಾರದಲ್ಲಿ ಒಗ್ಗೂಡಬೇಕಾಗಿದೆ ಎಂದು ಪ್ರತಿಪಾದಿಸಿದರು. ದೇಶದಲ್ಲಿ ಹಿಂದೂ ಜನಸಂಖ್ಯೆಯ ಕುಸಿತ ರಾಷ್ಟ್ರಹಿತಕ್ಕೆ ಮಾರಕ ಎಂದ ಅವರು, ಪ್ರತಿ ಕುಟುಂಬವೂ ಕನಿಷ್ಠ ಮೂರ್ನಾಲ್ಕು ಮಕ್ಕಳನ್ನು ಹೊಂದುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು. ಕಟ್ಟಡ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಅಣ್ಣಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘ ಚಾಲಕ್ ವಿನಯಚಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಿವಾನಂದ, ಇಳಂತಿಲ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ ಗೌಡ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್, ಕಟ್ಟಡ ಸಮಿತಿಯ ಗೌರವಾಧ್ಯಕ್ಷ ಪಲ್ಲದಕೋಡಿ ಕೇಶವ ಭಟ್ , ಶಿಶು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಭಟ್ ಮೂಡಾಜೆ, ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಯತೀಶ್ ಬಂಗೇರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೆಲಪ್ಪಾರು ವೆಂಕಟರಮಣ ಭಟ್, ಕಿರಣಚಂದ್ರ ಪುಷ್ಪಗಿರಿ, ಪ್ರಕಾಶ್ ಅಶ್ವಿನಿ, ಸುಪ್ರಿತ್ ಪಾಡೆಂಕಿ, ಕರುಣಾಕರ ಸುವರ್ಣ, ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ಕೆ ವಿ ಪ್ರಸಾದ್, ಜಯಪ್ರಕಾಶ್ ಕಡಮಾಜೆ, ವೀಣಾ ಪ್ರಸಾದ್, ಲಕ್ಷ್ಮೀಶ್ ಪಾಡೆಂಕಿ, ನವೀನ್, ಜಗದೀಶ್ ಶೆಟ್ಟಿ, ಸುಧಾಕರ್ ಶೆಟ್ಟಿ, ಮಹೇಶ್ ಬಜತ್ತೂರು, ಐ ಚಿದಾನಂದ ನಾಯಕ್, ಗಿರೀಶ್ ಅರ್ಬಿ, ರಮೇಶ್, ಗಿರೀಶ್ ಆಚಾರ್ಯ, ಅಗರ್ತ ಸುಬ್ರಹ್ಮಣ್ಯ ಕುಮಾರ್, ಮಂಜುನಾಥ್ ಬನ್ನೆಂಗಳ , ಚಂದ್ರಿಕಾ ಭಟ್ ಮೊದಲಾದವರು ಭಾಗವಹಿಸಿದ್ದರು. ಶಿಶು ಮಂದಿರದ ಕಾರ್ಯದರ್ಶಿ ರವೀಂದ್ರ ಆಚಾರ್ಯ ಸ್ವಾಗತಿಸಿದರು. ಸುಂದರಶೆಟ್ಟಿ ಎಂಜಿರಪಳಿಕೆ ವಂದಿಸಿದರು. ಪುಷ್ಪಲತಾ ತಿಲಕ್ ಕಾರ್ಯಕ್ರಮ ನಿರೂಪಿಸಿದರು. ಶಿಶು ಮಂದಿರದ ಮಾತಾಜಿಗಳಾದ ರೇವತಿ ಹಾಗೂ ಶಕುಂತಲಾ ರವರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.