ಕನ್ನಡಪ್ರಭ ವಾರ್ತೆ ಹುಣಸೂರು
ಪಾಲಕರು ಮಕ್ಕಳಲ್ಲಿ ಮಾನವೀಯ ಮೌಲ್ಯ ಮತ್ತು ತೃಪ್ತರಾಗುವ ಮನೋಭಾವನೆ ರೂಢಿಸಬೇಕಾದ ಅನಿವಾರ್ಯತೆ ಇದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.ತಾಲೂಕಿನ ಬಿಳಿಕೆರೆ ಹೋಬಳಿ ಬೋಳನಹಳ್ಳಿಯಲ್ಲಿರುವ ಶ್ರೀ ಮಾತೆ ಮಾಳಿಗೇಶ್ವರಿ ಸಪ್ತಪದಿ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಪೈಪೋಟಿಯ ಧಾವಂತದಿಂದ ಮನಃಶಾಂತಿ ಇಲ್ಲದಂತಾಗಿದೆ. ತೃಪ್ತಿ ಮತ್ತು ಮಾನವೀಯ ಮೌಲ್ಯಗಳಿಂದ ಮಾತ್ರ ಬದುಕು ಸಾರ್ಥಕವಾಗುತ್ತದೆ. ಯುವ ಸಮೂಹಕ್ಕೆ ಇದನ್ನು ಹೇಳಿಕೊಡುವವರು ಯಾರು ಎನ್ನುವುದೇ ಇಂದಿನ ಪ್ರಶ್ನೆಯಾಗಿದೆ. ನಾನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಈವರೆಗೆ 1879 ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಈ ಕುರಿತು ಸಂವಾದ ನಡೆಸಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಮಾನವೀಯತೆ ಇಲ್ಲದ ಜೀವನ ಮತ್ತು ತೃಪ್ತಿಯಿಲ್ಲದ ಬದುಕಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲವೆನ್ನುವುದನ್ನು ಅರಿಯೋಣ. ಈ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ದುಡಿಯಬೇಕಿದೆ ಎಂದರು.ದೇಶದಲ್ಲಿ ಆಗುತ್ತಿರುವ ತಪ್ಪುಗಳಿಗೆ ಕೇವಲ ಆಳುವ ವ್ಯಕ್ತಿಯಿಂದಾದ ತಪ್ಪಲ್ಲ, ಬದಲಾಗಿ ತಪ್ಪನ್ನು ಶಿಕ್ಷಿಸದ ಸಮಾಜದ್ದೇ ತಪ್ಪಾಗಿದೆ ಎಂದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಸಮಾಜದ ಜವಾಬ್ದಾರಿ ಆಗಿದೆ. ಈ ಹಿಂದೆ ಆಳುವವರು ತಪ್ಪುಮಾಡಿದಾಗ ಸಮಾಜ ಶಿಕ್ಷೆ ನೀಡುತ್ತಿತ್ತು. ಇಂದು ಅದು ಮಾಯವಾಗಿದೆ ಎಂದು ವಿಷಾದಿಸಿದರು.
ಸಂಸತ್ತು ಅಥವಾ ವಿಧಾನಸಭೆಯಿಂದ ರಾಜ್ಯಪಾಲ ಅಥವಾ ರಾಷ್ಟ್ರಪತಿಗಳಿಗೆ ಕಳುಹಿಸುವ ನಿರ್ಣಯಗಳ ಕುರಿತು ಇತ್ತೀಚಿಗೆ ದೇಶದ ಸುಪ್ರೀಂ ಕೋರ್ಟ್, ರಾಷ್ಟ್ರಪತಿಗಳು ವಿಲೇ ಮಾಡುವ ಕುರಿತು ಗಡುವು ನೀಡಿರುವುದು ಸರಿಯಾಗಿದೆ ಎನ್ನುವುದ ನನ್ನ ಅಭಿಪ್ರಾಯವಾಗಿದೆ, ದೆಹಲಿಯಲ್ಲಿ ಇತ್ತೀಚೆಗೆ ನ್ಯಾಯಾಧೀಶರ ಮನೆಯಲ್ಲಿ ರಾಶಿರಾಶಿ ಸುಟ್ಟಿ ಹೋದ ಹಣದ ಥೈಲಿ ಪತ್ತೆಯಾಗಿರುವ ಕುರಿತು ಪ್ರಶ್ನಿಸಿದಾಗ, ಈ ಪ್ರಕರಣ ಗಂಭೀರವಾದ ವಿಚಾರವಾಗಿದ್ದು, ಜನಸಾಮಾನ್ಯರ ಮನೆಯಲ್ಲಿ ಆಗಿದ್ದರೆ ಪೊಲೀಸ್ ತನಿಖೆ, ವಿಚಾರಣೆಯಂತಹ ಏನೇನು ಕಾನೂನು ಕಾನೂನು ಕ್ರಮಗಳನ್ನು ಅನುಸರಿಸುತ್ತಿದ್ದವೋ ಅದನ್ನೇ ನ್ಯಾಯಾಧೀಶರಿಗೂ ಅನ್ವಯಿಸಬೇಕು ಎಂದು ತಿಳಿಸಿದರು.ಹೈಕೋರ್ಟ್ ನ್ಯಾಯಾಧೀಶ ಕೃಷ್ಣ ದೀಕ್ಷಿತ್ ಮಾತನಾಡಿ, 1835ರಲ್ಲಿ ಬ್ರಿಟೀಷ್ ಅಧಿಕಾರಿ ಮೆಕಾಲೆ ಭಾರತ ಛಿದ್ರವಾಗಬೇಕಾದರೆ ಭಾರತದಲ್ಲಿರುವ ದೇಗುಲಗಳ ನಾಶವಾಗಬೇಕೆಂದು ತಿಳಿಸಿದ್ದ. ಅಂದರೆ ಭಾರತೀಯರ ದೇಗುಲಗಳು ಈ ನೆಲದ ಪರಂಪರೆ, ಸಂಸ್ಕೃತಿಯ ಪ್ರತೀಕವಾಗಿದೆ. ಇಂದು ಇಂತಹ ದೇಗುಲಗಳು ಕೇವಲ ಧಾರ್ಮಿಕ ಕೇಂದ್ರ, ಸಭೆ ಸಮಾರಂಭಗಳಿಗೆ ವೇದಿಕೆಯಾಗದೇ ಸುತ್ತಮುತ್ತಲ ಜನರಿಗೆ ವಿದ್ಯಾದಾನ ಮಾಡಬೇಕು. ಜ್ಞಾನದಾಸೋಹ ಕೇಂದ್ರವಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ. ಶ್ರೀನಿವಾಸೇಗೌಡ ಮಾತನಾಡಿ, ಮನುಷ್ಯ ತನ್ನಗೊಳಗಿನ ಕಲ್ಮಶಗಳನ್ನು ಹೊರಹಾಕಿ ಎಲ್ಲರ ಒಳಿತಿಗಾಗಿ ಅಪೇಕ್ಷಿಸುವ ಕೇಂದ್ರಗಳಾಗಿ ದೇವಾಲಯಗಳು ರೂಪುಗೊಳ್ಳಬೇಕಿದೆ ಎಂದರೆ, ಮತ್ತೋರ್ವ ನಿವೃತ್ತ ನ್ಯಾಯಧೀಶ ಚಂದ್ರಶೇಖರಯ್ಯ ಮಾತನಾಡಿ, ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆ ಅಸಾಧ್ಯ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಿದೆ. ಮಹಾಭಾರತ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಹಾಗಾಗಿ ಭ್ರಷ್ಟಾಚಾರ ನಿಗ್ರಹಿಸುವ ಕಾರ್ಯ ನಡೆಸಬೇಕಿದೆ ಎಂದರು.ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸತ್ಯ, ಧರ್ಮಗಳನ್ನು ನೀಡುವ ಮೂಲಕ ಸಾಮಾಜಿಕ ಸೇವೆ ನಡೆಸುತ್ತಿರುವ ನ್ಯಾಯಾಧೀಶರು ತಂಡವೇ ಇಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಹುಟ್ಟು ಸಾವಿನ ನಡುವಿನ ಅವಧಿಯಲ್ಲಿ ಎಲ್ಲರಿಗೂ ಒಳ್ಳೆಯದನ್ನೇ ಅಪೇಕ್ಷಿಸಿ ಎಲ್ಲರನ್ನೊಗಳಗೊಂಡು ಬದುಕೋಣ ಎಂದರು.
ಬಿ.ಎಸ್. ಯೋಗಾನಂದಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಣ್ಣೇಗೌಡ, ಕುಮಾರ್, ಮೋಹನ್, ಮಲ್ಲೇಶ್, ರಾಮಕೃಷ್ಣೇಗೌಡ ಸೇರಿದಂತೆ ಬೋಳನಹಳ್ಲಿ, ಹೊಸರಾಮನಹಳ್ಳಿ, ಚೋಳೇನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು ಮತ್ತು ಶ್ಯಾನುಭೋಗನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮಂದಿರ ಸ್ಥಾಪನೆಗೆ ಬೆಂಬಲವಾಗಿ ನಿಂತ ಗಣ್ಯರನ್ನು ಸನ್ಮಾನಿಸಲಾಯಿತು.
ಶ್ರೀ ಮಾತೇ ಮಾಳಿಗೇಶ್ವರಿ ಸಪ್ತಪದಿ ಮಂದಿರ ಟ್ರಸ್ಟ್ ಮುಖ್ಯಸ್ಥ ಮತ್ತು ಹೈಕೋರ್ಟ್ ವಕೀಲ ಬಿ.ಎಸ್. ನಾಗರಾಜ್ ಸ್ವಾಗತಿಸಿದರು.