ಕನ್ನಡಪ್ರಭ ವಾರ್ತೆ ಮೈಸೂರು
ಹೂಟಗಳ್ಳಿ ನಗರಸಭಾ ಕಾರ್ಯಾಲಯದ ಸಹಯೋಗದಲ್ಲಿ ಹೆಬ್ಬಾಳು ಕೈಗಾರಿಕಾ ಪ್ರದೇಶ ವಸಾಹತು ಉತ್ಪಾದಕರ ಸಂಘವು ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನೋತ್ಸವ ಮತ್ತು ಸ್ವಚ್ಛತಾ ಆಂದೋಲನವನ್ನು ಬುಧವಾರ ಹಮ್ಮಿಕೊಂಡಿತ್ತು.ಸುಧಾಕರ ಶೆಟ್ಟಿ ಮಾತನಾಡಿ, ಹಿಂದೆ ಮೈಸೂರು ನಿವೃತ್ತಿದಾರರ ಸ್ವರ್ಗ ಹಾಗೂ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಈಗ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಮೈಸೂರು ನಾಗರೀಕರ ಉದಾಸೀನದಿಂದ ಎಲ್ಲೆಂದರಲ್ಲಿ ಕಸ ಹಾಗೂ ಗಾರ್ಬೇಜ್ ಸಿಟಿಯಾಗಿ ಮಾರ್ಪಡಾಗಿದೆ. ಅದರಲ್ಲೂ ಪ್ರಮುಖ ರಸ್ತೆಗಳು ಹಾಗೂ ಮುಖ್ಯ ರಿಂಗ್ ರಸ್ತೆಗಳಲ್ಲಿ ಕಸದ ರಾಶಿಯಾಗಿ ಪ್ರವಾಸಿಗರನ್ನು ಆಹ್ವಾನಿಸುತ್ತಿದೆ ಎಂದರು.
ನಗರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಮೈಸೂರು ನಗರ ಪಾಲಿಕೆ ಹಾಗೂ ಎಂಡಿಎ ಕಾರ್ಯಲಯಗಳ ನಿರ್ಲಕ್ಷತೆ ಎದ್ದು ಕಾಣುತ್ತದೆ. ಅಂತಾರಾಷ್ಟ್ರೀಯ ಪ್ರವಾಸಿ ತಾಣವಾದ ಮೈಸೂರು ನಗರದ ಸ್ವಚ್ಛತೆಯ ಬಗ್ಗೆ ಇನ್ನು ಮುಂದಾದರೂ ಸಂಬಂಧಪಟ್ಟ ಇಲಾಖೆಗಳು ಆಸಕ್ತಿವಹಿಸಿ ಗಮನ ಹರಿಸಬೇಕು ಎಂದು ಅವರು ಹೇಳಿದರು.ಸ್ವಚ್ಛತಾ ಆಂದೋಲನ ಕಾರ್ಯಕ್ರಮವು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವಾಗಬಾರದು, ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ನುಡಿದರು.
ಹಿಂದಿಗಿಂತ, ಈಗ ಜನಸಂಖ್ಯೆಯು ಹೆಚ್ಚಿರುವುದರಿಂದ, ಕಸ ವಿಲೇವಾರಿ ಮಾಡಲು ಆಟೋ ಹಾಗೂ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕು ಎಂದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ಈಗ ವ್ಯಾಪಾರೋದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳು ಒತ್ತಡದಿಂದ ಬದುಕುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ, ಕುಂದು ಕೊರತೆ ಆಲಿಸಿ, ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಹೂಟಗಳ್ಳಿ ನಗರಸಭೆ ಆಯುಕ್ತ ಚಂದ್ರಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಕೆ. ಶಿವಲಿಂಗಯ್ಯ, ಕೆಎಸ್ಎಸ್ಐಡಿಸಿ ಸಹಾಯಕ ವ್ಯವಸ್ಥಾಪಕ ರಾಜಶೇಖರ್, ಹೆಬ್ಬಾಳು ಕೈಗಾರಿಕಾ ವಸಾಹತು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಜಿ. ಪ್ರಕಾಶ್ ಇದ್ದರು.