ಕಾರ್ಕಳ: ಕಾರ್ಕಳದ ಕ್ರಿಯೆಟಿವ್ ಗ್ಲೋಬಲ್ ಸ್ಕೂಲ್‌ನ 2026-27ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭ ಸಂಸ್ಥೆಯ ಸಪ್ತಸ್ವರ ವೇದಿಕೆಯಲ್ಲಿ ಶುಕ್ರವಾರ ನಡೆಯಿತು.
ಸಂಸ್ಥಾಪಕ ವಿಮಲ್ ರಾಜ್ ಮಾತನಾಡಿ, ಶಿಕ್ಷಣದ ಜೊತೆಗೆ ನಾಯಕತ್ವ ಹಾಗೂ ಸಾಮಾಜಿಕ ಕಳಕಳಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಾಯಕತ್ವ ಎಂದರೆ ಕೇವಲ ಅಧಿಕಾರವಲ್ಲ, ಅದು ಜವಾಬ್ದಾರಿ ಮತ್ತು ಶಿಸ್ತು ಎಂಬುದನ್ನು ಅರಿತು ಶಾಲೆಯ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.ಮತ್ತೋರ್ವ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ದೊಡ್ಡ ಕನಸುಗಳನ್ನು ಕಾಣಬೇಕು. ಸಮಾಜದ ಒಳಿತಿಗಾಗಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಪ್ರಾಂಶುಪಾಲೆ ಅಕ್ಷತಾ ಶೆಣೈ ಅವರು ನೂತನವಾಗಿ ಆಯ್ಕೆಯಾದ ಶಾಲಾ ನಾಯಕ ಪ್ರತ್ಯಕ್ಷ ನಾಯಕ್, ಶಾಲಾ ನಾಯಕಿ ಪ್ರಾಪ್ತಿ ನೆಲ್ಲಿ ಹಾಗೂ ವಿವಿಧ ಸದನಗಳ ನಾಯಕರು, ಕ್ರೀಡೆ, ಶಿಸ್ತು ಮತ್ತು ಸಾಂಸ್ಕೃತಿಕ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾವಿಧಿ ಬೋಧಿಸಿದರು.