ಕನ್ನಡಪ್ರಭ ವಾರ್ತೆ ವಿಜಯಪುರ
ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಿರ್ಮಿಸಿದ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ. ಹೆಣ್ಣು ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.
ಈ ಸುಸಜ್ಜಿತ ಶಾಲಾ ಕಟ್ಟಡವನ್ನು ₹3.25 ಕೋಟಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ 800 ಚದರ ಅಡಿಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಶಾಲೆಯಲ್ಲಿ 1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಸುಸಜ್ಜಿತ ಕೊಠಡಿ ಸಿದ್ಧಪಡಿಸಿದ್ದು, ಸ್ಟೇಮ್‌ಲ್ಯಾಬ್ ಹಾಗೂ ನಲಿಕಲಿ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ. 135 ಹೊಸ ಪೀಠೋಪಕರಣ, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣ ನಿರ್ಮಿಸಲಾಗಿದೆ ಎಂದರು.ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿ. ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಹರಿ ಮರಾರ ಮಾತನಾಡಿ, ಈ ಸುಂದರ ಕಟ್ಟಡ ವಿದ್ಯಾರ್ಥಿಗಳ ಭವಿಷ್ಯ ಬೆಳಗುವ ಜ್ಞಾನ ದೇಗುಲವಾಗಿದೆ. ನೀರಾವರಿಯಿಂದ ಈ ಭಾಗದ ರೈತರ ಬಾಳು ಸಮೃದ್ಧಗೊಳಿಸಿದ ಡಾ.ಎಂ.ಬಿ. ಪಾಟೀಲರು ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಈ ಕಟ್ಟಡ ಮೈದಳೆದಿದೆ ಎಂದರು.
ಹೊನವಾಡದಲ್ಲೂ ಹೈಸ್ಕೂಲ್ ಕಟ್ಟಡ ಕಟ್ಟಿಕೊಡುತ್ತಿದ್ದಾರೆ. ಸಿಎಸ್‌ಆರ್ ಅನುದಾನದಲ್ಲಿ ಶಾಲಾ ಕಾಲೇಜಿಗೂ ಜಿಲ್ಲಾದ್ಯಂತ ಶಾಲಾ ಕಟ್ಟಡ ಸ್ಮಾರ್ಟ್ ಕ್ಲಾಸ್ ಕಟ್ಟಡ, ಪಾಠೋಪಕರಣ, ಮೈದಾನ, ಪೀಠೋಪಕರಣ ಒದಗಿಸಲಾಗುವುದು. ಅಂಗನವಾಡಿ ಕಟ್ಟಡಗಳು, ನೀರಾವರಿ, ಕೆರೆ ಅಭಿವೃದ್ಧಿ, ಹೈನುಗಾರಿಕೆಗೆ ಒತ್ತು ನೀಡಲಾಗಿದೆ.ಹೈನುಗಾರಿಕೆ ಇಡೀ ಜಿಲ್ಲೆಗೆ ವಿಸ್ತರಣೆ ಮಾಡಲಾಗುವುದು. ಬಾಬಾನಗರದಲ್ಲಿ ಡ್ಯಾಂ ನಿರ್ಮಾಣ ಮಾಡಿ, ಮಳೆಗಾಲದಲ್ಲಿ ತುಂಬಿಸಿ ಬೇಸಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲು ಅನುಕೂಲವಾಗಲಿದೆ.