ನಾಳೆ ಸಂಚಾರಿ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ

KannadaprabhaNewsNetwork | Published : Dec 14, 2024 12:46 AM

ಸಾರಾಂಶ

ನೂತನ ಸಂಚಾರಿ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡ ಡಿ. 15ರಂದು ಮುಂಜಾನೆ 11ಕ್ಕೆ ಉದ್ಘಾಟನೆಯಾಗಲಿದೆ.

ರಟ್ಟೀಹಳ್ಳಿ: ತಾಲೂಕಿನ ಬಹು ದಿನಗಳ ಬೇಡಿಕೆಯಾದ ಪಟ್ಟಣದಲ್ಲಿ ನೂತನ ಸಂಚಾರಿ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯದ ಕಟ್ಟಡ ಡಿ. 15ರಂದು ಮುಂಜಾನೆ 11ಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿಂದ ಉದ್ಘಾಟನೆಗೊಳ್ಳಲಿದೆ.ಪಟ್ಟಣದ ಮಾಸೂರ ರಸ್ತೆಯಲ್ಲಿರುವ ತೋಟಗಾರಿಕೆ ಕಟ್ಟಡವನ್ನು ತಾತ್ಕಾಲಿಕವಾಗಿ ಲೋಕೊಪಯೋಗಿ ಇಲಾಖೆಯಿಂದ ₹30 ಲಕ್ಷ ವೆಚ್ಚದಲ್ಲಿ ಕೋರ್ಟ್ ಕಲಾಪಕ್ಕೆ ಅನಕೂಲವಾಗುವಂತೆ ಮಾರ್ಪಾಡು ಮಾಡಲಾಗಿದ್ದು, ಎಲ್ಲ ಸೌಕರ್ಯಗಳನ್ನೊಳಗೊಂಡ ನೂತನ ಕೋರ್ಟ್ ಕಟ್ಟಡ ಉದ್ಘಾಟನೆಗೆ ಸಜ್ಜುಗೊಂಡಿದೆ. ತಾಲೂಕಿನ 63 ಹಳ್ಳಿಗಳ ಸಾವಿರಕ್ಕೂ ಹೆಚ್ಚು ಕ್ರಿಮಿನಲ್ ಹಾಗೂ ಸಿವಿಲ್ ವ್ಯಾಜ್ಯಗಳ ನ್ಯಾಯಕ್ಕಾಗಿ ತಾಲೂಕಿನ ದೂರದ ಹಳ್ಳಿಗಳ ಕಕ್ಷಿದಾರರು, ವಕೀಲರು ಹಿರೇಕೆರೂರು ನ್ಯಾಯಾಲಯಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಈಗ ನೂತನ ಕೋರ್ಟ್ ಉದ್ಘಾಟನೆಯಿಂದಾಗಿ ರೈತರು, ಸಾರ್ವಜನಿಕರಿಗೆ ಸಮಯ ವ್ಯರ್ಥವಾಗುವುದು ತಪ್ಪುವುದಲ್ಲದೇ ತ್ವರಿತಗತಿಯಲ್ಲಿ ನ್ಯಾಯ ಸಿಗುವಂತಾಗುವುದು ಎಂದು ಈ ಭಾಗದ ಜನತೆ ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ.

ನೂತನ ವಕೀಲರ ಸಂಘ ರಚನೆ

ಪಟ್ಟಣದಲ್ಲಿ ನೂತನ ಕೋರ್ಟ್‌ ಕಲಾಪಗಳು ಆರಂಭವಾಗುವ ಹಿನ್ನೆಲೆಯಲ್ಲಿ ಈಗಾಗಲೇ ರಟ್ಟೀಹಳ್ಳಿ ತಾಲೂಕಿನ ನೂತನ ವಕೀಲರ ಸಂಘ ರಚನೆಯಾಗಿದ್ದು, ಸಂಘದ ತಾಲೂಕಾಧ್ಯಕ್ಷರಾಗಿ ಹಿರಿಯ ವಕೀಲರು ಹಾಗೂ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಎಸ್.ವಿ ತೊಗರ್ಸಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಬಿ. ಜೋಕನಾಳ ಮತ್ತು ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಮೂಲಕ ನೂತನ ಕೋರ್ಟಿಗೆ ಅಡಿಪಾಯ ಹಾಕಲಾಗಿದೆ.

ಸಾರ್ವಜನಿಕರ ಆಗ್ರಹ

ತಾಲೂಕಿನಲ್ಲಿ ಪ್ರಮುಖವಾಗಿ ಉಪ ನೊಂದಣಾಧಿಕಾರಿ ಕಚೇರಿ ಕೆಎಸ್ಆರ್‌ಟಿಸಿ ಡಿಪೋ, ಖಾಯಂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಿಪಿಐ ಕಚೇರಿ, ತಾಲೂಕು ಕ್ರೀಡಾಂಗಣ ಸೇರಿದಂತೆ ಉಳಿದ ಎಲ್ಲ ಸರಕಾರಿ ಸೌಲಭ್ಯಗಳು ಪಟ್ಟಣದಲ್ಲೇ ಸಿಗುವಂತಾಗಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಜಮೀನು ಮಂಜೂರು

ಪ್ರಸ್ತುತ ಪಟ್ಟಣದಲ್ಲಿ ಹಳೇಯ ತೋಟಗಾರಿಕೆ ಕಟ್ಟಡದಲ್ಲಿ ಕೋರ್ಟ್‌ ಪ್ರಾರಂಭವಾಗುತ್ತಿದ್ದು, ಕಾಯಂ ಕೋರ್ಟ್ ಕಟ್ಟಡ ಹಾಗೂ ನ್ಯಾಯಾದೀಶರ ವಸತಿ ಗೃಹಕ್ಕಾಗಿ ಕೆ.ಇ.ಬಿ. ಎದುರಿನ ಸರಕಾರಿ ಜಾಗದಲ್ಲಿ 3ಎಕರೆ 30.ಗುಂಟೆ ಜಮೀನು ಮಂಜೂರಾಗಿದ್ದು, ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಹಾಗೂ ವಕೀಲರ ಆಶಯವಾಗಿದೆ.

ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಎಚ್.ಕೆ. ಪಾಟೀಲ್ ವಹಿಸುವರು. ಮುಖ್ಯ ಅಥಿತಿಗಳಾಗಿ ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಯು.ಬಿ. ಬಣಕಾರ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಲೋಕೋಪಯೋಗಿ ಎಂಜೀನಿಯರ್ ಎನ್.ಎನ್. ಪಾಟೀಲ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಎಲ್ಲ ನ್ಯಾಯವಾದಿಗಳು, ವಕೀಲರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು, ಕೋರ್ಟ್ ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮ ತರಳಬಾಳು ಲಯನ್ಸ್‌ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಬೇಡಿಕೆ ಈಡೇರಿಕೆ

ಡಿ. 15ರಂದು ಕೋರ್ಟ್ ಉದ್ಘಾಟನೆ ಸಮಾರಂಭ ನಡೆಯಲಿದೆ. ಹಳೆಯ ತೋಟಗಾರಿಕೆ ಕಟ್ಟಡವನ್ನು ₹30 ಲಕ್ಷ ಹಾಗೂ ಹೆಚ್ಚುವರಿಯಾಗಿ ₹10 ಲಕ್ಷ ಹಣ ಮಂಜೂರು ಮಾಡಿ ಕಲಾಪಗಳ ಅನುಗುಣವಾಗಿ ನವೀಕರಣಗೊಳಿಸಲಾಗಿದೆ. ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ.

ಯು.ಬಿ ಬಣಕಾರ ಶಾಸಕ

ತಾಲೂಕು ಅಭಿವೃದ್ಧಿ

ಕೋರ್ಟ್ ಉದ್ಘಾಟನೆಯಿಂದಾಗಿ ಪಟ್ಟಣ ಹಾಗೂ ತಾಲೂಕು ಅಭಿವೃದ್ಧಿಗೊಳ್ಳಲಿದೆ. ಪ್ರಸ್ತುತ ನ್ಯಾಯಾಲಯದ ಕಾರ್ಯ ಕಲಾಪ ಆರಂಭದಲ್ಲಿ ವಾರದ 3 ದಿನ ನಡೆಯಲಿದೆ. ವಾರದ ಪೂರ್ತಿ ಕೋರ್ಟ್ ಕಲಾಪ ನಡೆಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದು, ಅದಕ್ಕೆ ಪೂರಕ ಸ್ಪಂದನೆ ಸಿಕ್ಕಿದೆ.

ಬಿ.ಎಚ್. ಬನ್ನಿಕೋಡ ಮಾಜಿ ಶಾಸಕ, ವಕೀಲರ ಸಂಘದ ಅಧ್ಯಕ್ಷ

Share this article