ದರ ಏರಿಕೆ ಇದ್ರೂ ಬಸ್‌ ಪ್ರಯಾಣಿಕರ ಸಂಖ್ಯೆ ಹೆಚ್ಚಳ

KannadaprabhaNewsNetwork |  
Published : Nov 07, 2026, 02:00 AM IST
Majestic | Kannada Prabha

ಸಾರಾಂಶ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು.

ಭಾನುವಾರದಿಂದ ಮಂಗಳವಾರವರೆಗೆ ದೀಪಾವಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ದೀರ್ಘ ರಜೆ ಇರುವುದರಿಂದ ಬೆಂಗಳೂರಿನ ಹೆಚ್ಚಿನ ಜನರು ತಮ್ಮ ಊರುಗಳಿಗೆ ತೆರಳಿದರು. ಶುಕ್ರವಾರ ಸಂಜೆಯಿಂದಲೇ ಜನರು ಮೆಜೆಸ್ಟಿಕ್‌, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಇನ್ನಿತರ ಕಡೆಗಳ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಗಳಿಗೆದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಬಸ್‌ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.

ಪ್ರಯಾಣಿಕರ ಒತ್ತಡ ನಿವಾರಣೆಗಾಗಿ ಕೆಎಸ್ಸಾರ್ಟಿಸಿ ಶುಕ್ರವಾರದಿಂದ 2600 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಆರಂಭಿಸಿದೆ. ಆದರೂ, ಜನರ ಸಂಖ್ಯೆ ಹೆಚ್ಚಾದ ಕಾರಣ ಬಸ್‌ಗಳು ಸಾಲದಂತಾಗಿತ್ತು. ಅದರ ಲಾಭ ಪಡೆದ ಖಾಸಗಿ ಬಸ್‌ಗಳು ದುಬಾರಿ ಪ್ರಯಾಣವನ್ನು ಪ್ರಯಾಣಿಕರಿಂದ ಪಡೆದು ಬಸ್‌ ಸೇವೆ ನೀಡುತ್ತಿದ್ದವು. ಇನ್ನು, ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರ ಭಾರೀ ಹೆಚ್ಚಳವಾಗಿದ್ದರೂ ಪ್ರಯಾಣಿಕರು ಮಾತ್ರ ಅದನ್ನು ಲೆಕ್ಕಿಸದೆ ಊರಿಗೆ ತೆರಳಲು ಮುಗಿಬಿದ್ದರು.

ಸಂಜೆ ವೇಳೆ ಸುರಿದ ಮಳೆ, ಪ್ರಯಾಣಿಕರು ಏಕಾಏಕಿ ಬಸ್‌ ನಿಲ್ದಾಣಗಳತ್ತ ಬಂದ ಕಾರಣದಿಂದಾಗಿ ಮೆಜೆಸ್ಟಿಕ್‌, ಶಾಂತಿನಗರ, ಮೈಸೂರು ರಸ್ತೆ, ಯಶವಂತಪುರ, ಕನಕಪುರ ರಸ್ತೆ, ಮಲ್ಲೇಶ್ವರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶುಕ್ರವಾರ ಸಂಜೆ ಬಳಿಕ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಅಲ್ಲದೆ, ತಡರಾತ್ರಿವರೆಗೆ ಬಸ್‌ಗಳು ಮತ್ತು ಖಾಸಗಿ ವಾಹನಗಳು ನಗರದಿಂದ ಹೊರಭಾಗಕ್ಕೆ ತೆರಳಿದ ಕಾರಣ ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಮಧ್ಯರಾತ್ರಿವರೆಗೆ ಸಂಚಾರ ದಟ್ಟಣೆ ಉಂಟಾಗಿ ಜನರು ಪರದಾಡಿದರು.

ಬಸ್‌ ಹುಡುಕಲು ಪರದಾಟ:

ಮುಂಗಡ ಟಿಕೆಟ್‌ ಕಾದಿರಿಸಿದವರು ತಮ್ಮ ಬಸ್‌ಗಳನ್ನು ಹುಡುಕಲು ಪರದಾಡಿದರು. ಟ್ರಾಫಿಕ್‌ ಜಾಮ್‌ನಿಂದಾಗಿ ಬೇರೆ ಬೇರೆ ಕಡೆಗೆ ತೆರಳುವ ಅನೇಕ ಬಸ್‌ಗಳು ನಿಗದಿತ ವೇಳೆಗಿಂತ ತಡವಾಗಿ ಹೊರಟವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ