ಕಾಂಗ್ರೆಸ್‌ ಆಡಳಿತದಲ್ಲಿ ಅಪರಾಧ ಚಟುವಟಿಕೆ ಹೆಚ್ಚಳ : ಆಂದೋಲಾ ಸಿದ್ದಲಿಂಗ ಶ್ರೀಗಳು

KannadaprabhaNewsNetwork | Updated : Dec 29 2024, 11:25 AM IST

ಸಾರಾಂಶ

  ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಒಂದು ಘಟನೆ ಮಾಸುವಷ್ಟರಲ್ಲಿಯೇ ಮತ್ತೊಂದು ಪ್ರಕರಣಗಳು ವರದಿಯಾಗುತ್ತಿವೆ ಎಂದು ದೂರಿರುವ ಆಂದೋಲಾ ಸಿದ್ದಲಿಂಗ ಶ್ರೀಗಳು 

 ಕಲಬುರಗಿ : ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಒಂದು ಘಟನೆ ಮಾಸುವಷ್ಟರಲ್ಲಿಯೇ ಮತ್ತೊಂದು ಪ್ರಕರಣಗಳು ವರದಿಯಾಗುತ್ತಿವೆ ಎಂದು ದೂರಿರುವ ಆಂದೋಲಾ ಸಿದ್ದಲಿಂಗ ಶ್ರೀಗಳು ಬೀದರ್ ಜಿಲ್ಲೆಯ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಉಲ್ಲೇಖಿಸಿ ರಾಜ್ಯ ಹಾಗೂ ದೇಶವೇ ಜಿಲ್ಲೆಯನ್ನು ನೋಡುವಂತಾಗಿದೆ. ಬೀದರ್ ಘಟನೆ ಮನಕಲಕುವ ಘಟನೆಯಾಗಿದೆಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಮುನಿರತ್ನ ಬಂಧನ ಸಹ ಅಕ್ಷಮ್ಯ ಅಪರಾಧವಾಗಿದೆ. ನಾವು ಹೋರಾಟ ಮಾಡಿದಾಗ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕವನ್ನು ಬಿಹಾರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸುತ್ತಿದ್ದರು. ಈಗ ಕರ್ನಾಟಕ ಬಿಹಾರಕ್ಕಿಂತಲೂ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಜೇವರ್ಗಿಯಲ್ಲಿ ರೈತನ ಮೇಲೆ ನಕಲಿ ಫೈರಿಂಗ್ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಆ ತನಿಖೆ ಏನಾಗಿದೆ? ಎಂದು ಪ್ರಶ್ನಿಸಿದ ಅವರು, ಗಲ್ಲಾ ಚೋರ್, ಚಾವಲ್ ಚೋರ್ ಅವರ ವಿರುದ್ಧ ಕ್ರಮವಾಗಲಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡವು. ಆ ಕುರಿತು ತನಿಖೆ ಎಲ್ಲಿಗೆ ಬಂತು? ಎಂದು ಪ್ರಶ್ನಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ಅಕ್ರಮದ ಕುರಿತು ತನಿಖೆ ಕೈಗೊಳ್ಳುವುದಾಗಿ ಹೇಳಿದರೂ ಸಹ ಅದೂ ಆಗಲಿಲ್ಲ. ಪಿಎಸ್‍ಐ ಹಗರಣದ ಕುರಿತು ಸಹ ತನಿಖೆ ಸಮರ್ಪಕವಾಗಿ ಆಗಲಿಲ್ಲ. ಈ ಮಧ್ಯೆ, ಸಚಿನ್ ಪ್ರಕರಣದಲ್ಲಿ ಆರೋಪಿ ತನಗೆ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾನೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಪಿಗೆ ಸಿಹಿ ತಿನ್ನಿಸಿರುವುದೇಕೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಇತ್ತೀಚೆಗೆ ಖಾಸಗಿ ರಕ್ತನಿಧಿ ಕೇಂದ್ರದಲ್ಲಿ ಸಿಗರೇಟ್ ಪ್ಯಾಕೆಟ್‍ಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ದಲಿತ ಯುವಕನ ಕೊಲೆ ಮಾಡಲಾಯಿತು. ಆರೋಪಿ ಸಚಿವರಿಗೆ ಆಪ್ತ. ಆದಾಗ್ಯೂ, ಆತನಿಗೆ ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದ ಅವರು, ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ದು ಹಿರೇಮಠ್ ಅವರ ವಿರುದ್ಧ ಸುಳ್ಳು ದೂರು ಸಲ್ಲಿಸಿದ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸಂಜಯ್ ಪಾಟೀಲ್ ವಿರುದ್ಧ ಪ್ರಕರಣಗಳು ಇದ್ದರೂ ಸಹ ಆತನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಗಳು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಭಾವಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಇದೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಪಿಎಸ್‍ಐ ಹಗರಣದಲ್ಲಿ ಅರಗ ಜ್ಞಾನೇಂದ್ರ ಅವರು ಶ್ರೀಮತಿ ದಿವ್ಯಾ ಹಾಗರಗಿ ಅವರೊಂದಿಗೆ ಇರುವ ಭಾವಚಿತ್ರವನ್ನು ನೋಡಿ ಅವರ ಮೇಲೆ ಆರೋಪ ಮಾಡಿದ್ದರು.

 ಈಗ ಆರೋಪಿಗಳೊಂದಿಗೆ ಅವರ ಭಾವಚಿತ್ರಗಳು ಬಹಿರಂಗಗೊಂಡಿವೆ. ಈ ಕುರಿತು ಬಾಯಿಬಿಡುತ್ತಿಲ್ಲ ಎಂದು ಅವರು ದೂರಿದರು.ಇಡೀ ಪ್ರಕರಣದ ಆರೋಪಿಗಳನ್ನು ತಿಹಾರ್ ಜೈಲಿಗೆ ಕಳಿಸಬೇಕು. ಹಾಗಾಗಿ ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಮಾತನಾಡಿ, ಸಚಿನ್ ನನಗೆ ಪರಿಚಯವಿಲ್ಲ. ಆತನ ಕೊಲೆಗೆ ಸುಪಾರಿ ಕೊಟ್ಟವರ ಹೆಸರು ಮರಣಪತ್ರದಲ್ಲಿ ಉಲ್ಲೇಖವಾಗಿದ್ದು, ಅವರನ್ನು ವಿಚಾರಣೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

Share this article