ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ಭೂಮಿ ತಾಪಮಾನ ಹೆಚ್ಚಳದಿಂದ ಜೀವ ಸಂಕುಲ ಸಂಕಷ್ಟದಲ್ಲಿವೆ. ಹಸಿರೀಕರಣ ಹೆಚ್ಚಳಿಂದ ತಾಪಮಾನವನ್ನು ತಗ್ಗಿಸಬಹುದು ಎಂದು ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಹೇಳಿದರು.ತಾಲೂಕಿನ ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಸೋಸಿಯೇಷನ್ ಆಫ್ ಲಯನ್ಸ್ ಸಂಸ್ಥೆ ಇಂಟರ್ ನ್ಯಾಷನಲ್ , ಸರ್ಕಾರಿ ಪ್ರೌಢಶಾಲೆ ಹಾಗೂ ಗ್ರಾಪಂ ವತಿಯಿಂದ ಆಯೋಜಿಸಿದ್ದ ವಿಶ್ವ ಭೂಮಿ ದಿನ ಪ್ರಯುಕ್ತ ಪ್ರಬಂಧ ಸ್ಪರ್ಧೆ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಮಿ ಬಿಟ್ಟರೆ ಅನ್ಯ ಗ್ರಹಗಳಲ್ಲಿ ಜೀವಸಂಕುಲ ಬದುಕಲು ಸಾಧ್ಯವಿಲ್ಲ. ಸಂಶೋಧನೆ ಪ್ರಕಾರ ಯಾವುದೇ ಪ್ರಾಣಿ-ಪಕ್ಷಿಗಳು ಬೇರೆ ಗ್ರಹಗಳಲ್ಲಿ ವಾಸಿಸಲು ಯೋಗವಿಲ್ಲ ಎನ್ನುವುದು ಗೊತ್ತಾಗಿದೆ. ಆದ್ದರಿಂದ ಭೂಮಿಯನ್ನು ಹಸಿರೀಕರಣ ಮಾಡುವ ಮೂಲಕ ಮುಂದಿನ ಪೀಳಿಗೆ ಬದುಕಲು ಇಂದಿನ ಪೀಳಿಗೆ ಕೊಡುಗೆ ನೀಡಬೇಕಿದೆ ಎಂದು ಹೇಳಿದರು.ನೈಸರ್ಗಿಕ ವಿಕೋಪಗಳಿಂದ ಭೂಮಿಯನ್ನು ರಕ್ಷಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಉತ್ತಮ ಸ್ಥಳವನ್ನು ಒದಗಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಭೂಮಿ ರಕ್ಷಣೆಗಾಗಿ ಮರ ನೆಡುವುದು, ಮಣ್ಣಿನ ಫಲವತ್ತೆತೆಯನ್ನು ಹೆಚ್ಚಿಸಲು ರಾಸಾಯನಿಕ ಗೊಬ್ಬರ ಬಳಕೆ ನಿಲ್ಲಿಸುವುದು, ಮಣ್ಣು ಸವಕಳಿಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮಿಮ್ಸ್ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ.ಯೋಗೇಂದ್ರ ಕುಮಾರ್ ಮಾತನಾಡಿ, ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಆಹಾರ ಪದ್ಧತಿಗೆ ಮಾರುಹೋಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ವಯಸ್ಸಿಗೆ ಮುಂಚೆ ಋತುಮತಿಯಾಗುವುದು, ಬಂಜೆತನ ಹೆಚ್ಚಳ, ಹೆರಿಗೆ ನೋವು ಸಲಹಿಕೊಳ್ಳದಷ್ಟು ದುರ್ಬಲತೆ, ಸಹಜ ಹೆರಿಗೆ ಇಲ್ಲದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು, ಪ್ರಬಂಧ ಸ್ಫರ್ದೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು. ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ, ಮುಖ್ಯ ಶಿಕ್ಷಕ ನಾಗರಾಜು, ಬಿಆರ್ ಪಿ ಉತ್ತರವಲಯ ಇಂಗ್ಲಿಷ್ ಶಿಕ್ಷಕ ಮೋಹನ್, ಗ್ರಂಥಪಾಲಕ ಯೋಗೇಶ್ ಮತ್ತಿತರರು ಇದ್ದರು.