ಗ್ಯಾರಂಟಿ ಹೆಸರಿನಲ್ಲಿ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಹೆಚ್ಚಳ: ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Jun 17, 2024, 01:39 AM ISTUpdated : Jun 17, 2024, 10:00 AM IST
CC patil

ಸಾರಾಂಶ

ಗ್ಯಾರೆಂಟಿ ಯೋಜನೆ ಉಳಿಸಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

 ಗದಗ :  ನಮ್ಮ ಸರ್ಕಾರದ ಮೇಲೆ ವ್ಯಾಪಕ ಆರೋಪಗಳನ್ನು ಮಾಡಿ, ಬಿಜೆಪಿ 40% ಸರ್ಕಾರ ಕಮಿಷನ್ ಎನ್ನುವ ಸುಳ್ಳು ಸೃಷ್ಟಿಸಿ, ಜನರಿಗೆ ಗ್ಯಾರೆಂಟಿ ಎನ್ನುವ ಆಸೆ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ತೀವ್ರ ಹೊರೆ ಹೊರೆಸುತ್ತಿದೆ ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಭಾನುವಾರ ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ಸರಕಾರದ 40 ಪ್ರತಿಶತ ಕಮಿಷನ್ ಉಳಿಸಿಕೊಂಡು ಗ್ಯಾರೆಂಟಿ ಯೋಜನೆ‌ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು.‌ ಈಗ ಅದೇ ಗ್ಯಾರೆಂಟಿ ಯೋಜನೆ ಉಳಿಸಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ.‌ ಹಾಗಿದ್ದರೆ 40 ಪ್ರತಿಶತ ಕಮಿಷನ್ ಎನ್ನುವುದು ಸುಳ್ಳು ಎನ್ನುವುದು ಈಗಾಲಾದರೂ ಸ್ಪಷ್ಟವಾಯಿತೇ ಎಂದು ಸಿ.ಸಿ. ಪಾಟೀಲ ಪ್ರಸ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ರೀತಿಯ ಬೆಲೆ ಏರಿಕೆ ಮಾಡುವುದಿಲ್ಲ ಎಂದವರು ಆರು ತಿಂಗಳಲ್ಲಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದಾರೆ. ಹಾಲು, ಬಸ್ ದರ, ತೆರಿಗೆ, ಮುದ್ರಾಂಕ ಶುಲ್ಕ, ನೀರಿನ ದರವನ್ನೂ ಏರಿಸಿದ್ದಾರೆ.

ಗ್ಯಾರೆಂಟಿ ಯೋಜನೆಗಳ ಬಗ್ಗೆ ಯಾರಾದರೂ ಮಾತನಾಡಿದರೆ ಅವರು ಬಡವರ ವಿರೋಧಿಗಳು ಎನ್ನುವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಬಡವರ ಪರವಾಗಿ ಮಾಡುವ ಕಾರ್ಯಕ್ರಮಗಳ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಬಡವರಿಗೆ ಕಾರ್ಯಕ್ರಮಗಳನ್ನು ಮಾಡಬೇಕು. ಆದರೆ, ಯೋಜನೆ ಜಾರಿಗೆ ಮುನ್ನ ಭವಿಷ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. 12 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಆರ್ಥಿಕ ಶಿಸ್ತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಗ್ಯಾರೆಂಟಿ ಯೋಜನೆಗಳಿಂದ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿ, ಗ್ಯಾರೆಂಟಿ ಯೋಜನೆಗಳನ್ನು ಬಂದ ಮಾಡಿಸಲು ಸಿದ್ದರಾಮಯ್ಯ ಅವರ ಶಾಸಕರ ಮೂಲಕ ಒತ್ತಡ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಇಬ್ಬರು ಹಿರಿಯ ಕಾಂಗ್ರೆಸ್ ಶಾಸಕರು ಗ್ಯಾರೆಂಟಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆಪಾದಿಸಿದರು.

ರಾಜ್ಯ ಸರ್ಕಾರ ಮಾಡಿರುವ ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಮತ್ತು ಬಸ್ ದರ ಏರಿಕೆಯಾಗಲಿದೆ. ಈ ಹಿಂದೆ ಶಕ್ತಿ ಯೋಜನೆಯನ್ನು ಜಾರಿಗೆ ತಂದಾಗ, ಈ ಯೋಜನೆಗೆ ಬೇಕಾದ ಹಣವನ್ನು ಬೆಲೆ ಏರಿಕೆ ಮೂಲಕ ಭರಿಸಿಕೊಳ್ಳಲು ಸರ್ಕಾರ ಮುಂದಾಗುತ್ತಿದೆ. ಇನ್ನುಳಿದ ನಾಲ್ಕು ಗ್ಯಾರೆಂಟಿ ಯೋಜನೆಗಳಿಗೆ ಸರಕಾರ ಮತ್ತೆ ಯಾವ ರೀತಿ ಬೆಲೆ ಏರಿಕೆ ಮಾಡಲಿದೆ ಎಂದು ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.

ರಾಜ್ಯ ಸರಕಾರದ ಬೆಲೆ ಏರಿಕೆ ಕ್ರಮವನ್ನು ರಾಜ್ಯ ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಇದೊಂದು ಜನವಿರೋಧಿ ಕ್ರಮವಾಗಿದೆ. ಲೋಕಸಭಾ ಚುನಾವಣೆಯ ವೇಳೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬರಲಿಲ್ಲ, ಗ್ಯಾರೆಂಟಿ ಯೋಜನೆಗಳೇ ನಮ್ಮ ಶ್ರೀರಕ್ಷೆ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಹಿನ್ನಡೆಯಾಗಿದ್ದು, ಅದಕ್ಕಾಗಿ ಜನರ ಮೇಲೆ ಈ ರೀತಿಯ ತೆರಿಗೆ ಹೊರೆಯನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಅನಿಲ ಅಬ್ಬಿಗೇರಿ, ಎಂ.ಎಸ್. ಕರಿಗೌಡ್ರ, ಜಗನ್ನಾಥಸಾ ಭಾಂಡಗೆ, ದತ್ತಣ್ಣ ಜೋಶಿ, ಎಂ.ಎಂ. ಹಿರೇಮಠ, ಸಿದ್ದು ಪಲ್ಲೇದ ಸೇರಿದಂತೆ ಅನೇಕರ ಹಾಜರಿದ್ದರು. 

ನಾಳೆ ಪ್ರತಿಭಟನೆ

ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜೂನ್ 17ರಂದು ಸೋಮವಾರ ಬೆಳಗ್ಗೆ 11ಕ್ಕೆ ಗದಗ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು.

ರಾಜು ಕುರುಡಗಿ. ಜಿಲ್ಲಾ ಬಿಜೆಪಿ ಅಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ