ಮೀಸಲಾತಿ ಹೆಚ್ಚಳ: ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ತೆರಳಲು ಆಗ್ರಹ

KannadaprabhaNewsNetwork |  
Published : May 09, 2026, 01:15 AM IST
ವಿ | Kannada Prabha

ಸಾರಾಂಶ

ಚಿಕ್ಕಮಗಳೂರುಎಸ್ಸಿ,ಎಸ್ಟಿ, ಒಬಿಸಿ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೆ ಸಾಲದು ಕೇವಲ ಪತ್ರಗಳಿಗೆ ಮಾವಿನ ಕಾಯಿ ಉದುರುವುದಿಲ್ಲ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಪಕ್ಷ ನಿಯೋಗದೊಂದಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಡ ಹಾಕಿ ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುವ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಾಲ್ಮೀಕಿ ಸಮುದಾಯ ಮುಖಂಡ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದ್ದಾರೆ.

ಕೆಪಿಸಿಸಿ ಉಪಾಧ್ಯಕ್ಷ ವಾಲ್ಮೀಕಿ ಸಮುದಾಯ ಮುಖಂಡ ವಿ.ಎಸ್‌. ಉಗ್ರಪ್ಪ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಎಸ್ಸಿ,ಎಸ್ಟಿ, ಒಬಿಸಿ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೆ ಸಾಲದು ಕೇವಲ ಪತ್ರಗಳಿಗೆ ಮಾವಿನ ಕಾಯಿ ಉದುರುವುದಿಲ್ಲ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವ ಪಕ್ಷ ನಿಯೋಗದೊಂದಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಡ ಹಾಕಿ ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುವ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಾಲ್ಮೀಕಿ ಸಮುದಾಯ ಮುಖಂಡ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮೀಸಲಾತಿ ಪ್ರಮಾಣ ಶೇ.56ಕ್ಕೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ 2023ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈ ಕಾಯ್ದೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದೆ. ಮೀಸಲಾತಿ ಹೆಚ್ಚಳವಾಗಬೇಕಾದರೆ ಕೇಂದ್ರ ಸರ್ಕಾರ ಇದನ್ನು ಸಂವಿಧಾನದ 9ನೇ ಷೆಡ್ಯೂಲ್‌ನಲ್ಲಿ ಸೇರಿಸಿ ಊರ್ಜಿತಗೊಳಿಸಬೇಕು. ಆಗ ಮೀಸಲಾತಿ ಸೌಲಭ್ಯ ದೊರೆಯಲಿದೆ. ಆದರೆ, ಕಳೆದ 3 ವರ್ಷದಿಂದ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ.

ಮೀಸಲಾತಿ ಹೆಚ್ಚಳವನ್ನು ಕೇಂದ್ರ ಸರ್ಕಾರ ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುತ್ತಿಲ್ಲ. ಮತ್ತೊಂದು ಕಡೆ ಕಾಯ್ದೆ ಜಾರಿಗೆ ಹೈಕೋರ್ಟ್‌ನ ತಡೆಯಾಜ್ಞೆ ತೆರವಿಗೆ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿಲ್ಲ. ಈ ಸರ್ಕಾರಗಳ ಆಲಸ್ಯಕ್ಕೆ ಎಸ್ಸಿ,ಎಸ್ಟಿ, ಒಬಿಸಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದರು.

ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದರೂ ಕೇಂದ್ರ ಸರ್ಕಾರ ಪರಿಗಣಿಸಿಲ್ಲ. ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕು. ಜತೆಗೆ, ಸರ್ವ ಪಕ್ಷದ ನಿಯೋಗ ಕೊಂಡೊಯ್ಯುಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು ಪರಿಶಿಷ್ಟ ಪಂಗಡದ 50 ಲಕ್ಷ, ಪರಿಶಿಷ್ಟ ಜಾತಿಯ 1.25 ಕೋಟಿ ಮತ್ತು ಹಿಂದುಳಿದ ವರ್ಗಗಳ 2.25 ಕೋಟಿ ಜನರು ಇದ್ದಾರೆ. ಮೀಸಲಾತಿ ಭಿಕ್ಷೆಯಲ್ಲ. ಹಾಗೆಂದರೆ ಅದು ಮೂರ್ಖತನದ ಪರಮಾವಧಿ. ಇದು ಪ್ರತಿ ಪ್ರಜೆಯ ಮೂಲಭೂತ ಹಕ್ಕು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲರೂ ಮೀಸಲಾತಿ ಪಡೆಯುತ್ತಿದ್ದಾರೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಿತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನಾವು ಈ ಹೆಚ್ಚಳ ಊರ್ಜಿತ ಆಗಬೇಕಾದರೆ ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರಿಸಬೇಕು ಎಂದು ಕೋರಿ ದ್ದೆವು. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರ ಈ ವಿಚಾರವಾಗಿ ಪತ್ರ ಬರೆದರು. ಕೇಂದ್ರ ಸರ್ಕಾರ ಈ ವಿಚಾರ ಗೃಹ ಇಲಾಖೆಗೆ ಬರುವುದಿಲ್ಲ. ಬುಡಕಟ್ಟು ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಈ ವಿಚಾರ ಬರುತ್ತದೆ ಎಂದು ಪ್ರತಿಕ್ರಿಯಿಸಿತು. ಆದರೆ ಬೊಮ್ಮಾಯಿ ಸರ್ಕಾರ ಮತ್ತು ಇಂದಿನ ಸಿದ್ದರಾಮಯ್ಯ ಸರ್ಕಾರ ಕೇಂದ್ರದ ಪತ್ರಕ್ಕೆ ಪ್ರತಿಕ್ರಿಯಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಕೋಲಿ, ಕುರುಬ, ಗೊಲ್ಲ ಸಮಾಜವನ್ನು ಎಸ್‌ಟಿಗೆ ಸೇರುತ್ತೇವೆ ಎನ್ನುತ್ತಾರೆ. ನಾವು ಯಾವ ಸಮಾಜದ ವಿರೋಧಿಗಳೂ ಅಲ್ಲ. ಆದರೆ ಕುಲಶಾಸ್ತ್ರಿಯ ಅಧ್ಯಯನ ಮಾಡಿಸಿ ಸೇರಿಸಬೇಕು. ನಂತರ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಜನರು ಒಳಮೀಸಲಾತಿ ಕಿತ್ತಾಡುವ ಬದಲು ನಾವೆಲ್ಲರೂ ಸೇರಿ ಪರಿಶಿಷ್ಟ ಜಾತಿ ಜನರ ಮೀಸಲಾತಿ ಶೇ.17ಕ್ಕೆ, ಪಂಗಡ ಮೀಸಲಾತಿ ಶೇ 7ಕ್ಕೆ ಹೆಚ್ಚಿಸಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಶೇ 7.5ರಷ್ಟಿರುವ ಜನರಿಗೆ ತರಾತುರಿಯಲ್ಲಿ ಶೇ.10 ಮೀಸಲಾತಿ ಕೊಡುವಿರಿ. ಆದರೆ, ಈ ದೇಶದ ಮೂಲ ನಿವಾಸಿ ಗಳಾದ ನಮಗೆ ಮೀಸಲಾತಿ ಹೆಚ್ಚಳ ಮಾಡುತ್ತಿಲ್ಲ. 9ನೇ ಷೆಡ್ಯೂಲ್‌ಗೆ ಏಕೆ ಸೇರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಚೆಲ್ಲಾಟವಾಡಬೇಡಿ. ರಾಜಕೀಯವಲ್ಲ, ಬದುಕಿನ ಪ್ರಶ್ನೆ. ಸಾಮಾಜಿಕ ಬದ್ಧತೆ ತೋರಬೇಕು. ಮೀಸಲಾತಿ ಹೆಚ್ಚಳದ ವಿಚಾರವಾಗಿ ಹೈಕೋರ್ಟ್‌ನಲ್ಲಿರುವ ತಡೆಯಾಜ್ಞೆ ತೆರವಿಗೆ ಕ್ರಮವಹಿಸಬೇಕು ಎಂದು ಕೋರಿದರು.

-- ಬಾಕ್ಸ್‌ --

ವೋಟ್‌ ಬ್ಯಾಂಕ್‌ಗಾಗಿ ಸುಳ್ಳು ಜಾತಿ ಪತ್ರ :ರಾಜ್ಯದಲ್ಲಿ ಸುಮಾರು 3.5 ಲಕ್ಷ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ವಿತರಣೆ ಮಾಡಿದವರು ಹಾಗೂ ಪಡೆದವರು ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಾಗಲೇ ರಾಜ್ಯ ಸರ್ಕಾರ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಬೇಡಿ ಎಂದು ಸೂಚಿಸಿದೆ. ಆದರೆ, ರಾಜ್ಯದಲ್ಲಿ ಮತ ಬ್ಯಾಂಕ್‌ಗಾಗಿ, ರಾಜಕಾರಣಿಗಳಿಂದಲೇ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಉಗ್ರಪ್ಪ ಆರೋಪಿಸಿದರು.

---ಬಾಕ್ಸ್‌----

ತಕ್ಕಪಾಠ ಕಲಿಸುತ್ತೇವೆ

ಸಚಿವ ಕೆ.ಜೆ.ಜಾರ್ಜ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ, ಶಾಸಕ ತಮ್ಮಯ್ಯ ಹಾಗೂ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಸೇರಿದಂತೆ ಎಲ್ಲ ರಾಜಕಾರಣಿಗಳು ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು. ಇಲ್ಲವಾದರೆ ಮುಂದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗಲಿದೆ.----ಕೋಟ್‌---

ತಾಳ್ಮೆ ಪರೀಕ್ಷೆ ಮಾಡಬೇಡಿ

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಸ್ಸಿ,ಎಸ್ಟಿ, ಒಬಿಸಿ ವರ್ಗದ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಕೇವಲ ಪತ್ರ ಬರೆವ ಮೂಲಕ ಸಮಸ್ಯೆ ಪರಿಹಾರವಾಗಲ್ಲ. ಈ ಸಮಸ್ಯೆಗೆ ಶೀಘ್ರ ಪರಿಹಾರ ರೂಪಿಸಲಿಲ್ಲ ಎಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ, ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡಬೇಕಾಗಲಿದೆ.

- ವಿ.ಎಸ್‌.ಉಗ್ರಪ್ಪ, ಉಪಾಧ್ಯಕ್ಷ, ಕೆಪಿಸಿಸಿ

-- ಬಾಕ್ಸ್‌ --ಒಳಮೀಸಲಾತಿ ಪರಿಹಾರವಲ್ಲ: ಉಗ್ರಪ್ಪ

ಒಳಮೀಸಲಾತಿಯಿಂದ ಶಾಶ್ವತ ಪರಿಹಾರ ನೀಡಲು ಸಾಧ್ಯವಿಲ್ಲ. ಯಾವುದೇ ಜಾತಿ ಹಿಂದುಳಿದೆ ಎಂಬುದನ್ನು ಗುರುತಿಸಿ ಅವರಿಗೆ ಹೆಚ್ಚಿನ ಒತ್ತು ಕೊಡಿ. ತರಬೇತಿ ನೀಡಬೇಕು. ಆ ಮೀಸಲಾತಿಯಡಿ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡಬೇಕು. ಆ ಮೂಲಕ ಮುಖ್ಯವಾಹಿನಿಗೆ ತರಬೇಕು. ಸೌಲಭ್ಯ ನೀಡುವ ಕೆಲಸ ಮಾಡಿದಾಗ ಮಾತ್ರ ಪರಿಹಾರವಾಗಲಿದೆ ಎಂದು ವಿ.ಎಸ್‌.ಉಗ್ರಪ್ಪ ಹೇಳಿದರು.

--

ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಂಚೆ ಮತ ಟ್ಯಾಂಪರಿಂಗ್‌: ಉಗ್ರಪ್ಪ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚುನಾವಣಾ ಆಯೋಗ ಮತ್ತು ಆಯೋಗದ ಅಧಿಕಾರಿಗಳು ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲಿ ಟ್ಯಾಂಪರಿಂಗ್‌ ಮಾಡಿ ತಮ್ಮ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌.ಉಗ್ರಪ್ಪ ಆರೋಪಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುತಂತ್ರ ಮತ್ತು ಷಡ್ಯಂತ್ರ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವ ಕೆಲಸ ಮಾಡಲಾಗಿದೆ ಎಂದರು.ಕಳೆದ 2023ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇತ್ತು. ಚುನಾವಣೆ ಸಂದರ್ಭದಲ್ಲಿ ಯಾವುದೇ ಲೋಪ ಉಂಟಾದರೆ, ಆಯೋಗಕ್ಕೆ ದೂರು ನೀಡಬೇಕಾಗಿತ್ತು. ಆದರೆ, ಯಾವುದೇ ದೂರು ನೀಡಿಲ್ಲ. ಜತೆಗೆ, ಅಂಚೆ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಎಲ್ಲ ಚುನಾವಣಾ ಅಭ್ಯರ್ಥಿಗಳು ಮತ ಎಣಿಕೆ ಸರಿಯಾಗಿದೆ ಎಂದು ಒಪ್ಪಿ ಸಹಿ ಮಾಡಿದ್ದಾರೆ. ಆಗ ಯಾಕೆ ಡಬ್ಬಲ್‌ ಎಂಟ್ರಿ ಕಾಣಿಸಲಿಲ್ಲ? ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

ಮತ ಎಣಿಕೆ ನಂತರ ಮತ ಪತ್ರ ಹಾಗೂ ಇವಿಎಂಗಳನ್ನು ಸೀಲ್‌ ಮಾಡಿ ಚುನಾವಣಾ ಆಯೋಗ ತನ್ನ ಭದ್ರತೆಯಲ್ಲಿ ಸಂರಕ್ಷಣೆ ಮಾಡಿಕೊಳ್ಳುತ್ತದೆ. ಹಾಗಾದರೆ, 2023ರಲ್ಲಿ ಸಿಂಧು ಆಗಿದ್ದ ಮತಗಳು ಮರು ಎಣಿಕೆಯಲ್ಲಿ ಹೇಗೆ ಅಸಿಂಧು ಆಗಿವೆ. ಇದರಲ್ಲ ಸ್ಪಷ್ಟವಾಗಿ ಅಂಚೆ ಮತ ಪತ್ರ ಟ್ಯಾಂಪರಿಂಗ್‌ ಆಗಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.ಫೋಟೋ: ಉಗ್ರಪ್ಪ ಫೋಟೋ ಬಳಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ