ಗೇರದಡ ಗ್ರಾಮದಲ್ಲಿ ಮಾರಮ್ಮ, ಬಸವೇಶ್ವರ ಸ್ವಾಮಿ ಉತ್ಸವ

KannadaprabhaNewsNetwork |  
Published : May 09, 2026, 01:15 AM IST
50 | Kannada Prabha

ಸಾರಾಂಶ

ಸಾಲಿಗ್ರಾಮ ತಾಲೂಕಿನ ಗೇರದಡ ಗ್ರಾಮದಲ್ಲಿ ಗ್ರಾಮದೇವತೆ ಹಬ್ಬದ ಅಂಗವಾಗಿ ಮಾರಮ್ಮ ಮತ್ತು ಬಸವೇಶ್ವರ ಸ್ವಾಮಿ ಉತ್ಸವದ ಮೆರವಣಿಗೆ ಬುಧವಾರದಂದು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಭಕ್ತಿ, ಶ್ರದ್ಧೆ ಮತ್ತು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಸಾಲಿಗ್ರಾಮ ತಾಲೂಕಿನ ಗೇರದಡ ಗ್ರಾಮದಲ್ಲಿ ಗ್ರಾಮದೇವತೆ ಹಬ್ಬದ ಅಂಗವಾಗಿ ಮಾರಮ್ಮ ಮತ್ತು ಬಸವೇಶ್ವರ ಸ್ವಾಮಿ ಉತ್ಸವದ ಮೆರವಣಿಗೆ ಬುಧವಾರದಂದು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಭಕ್ತಿ, ಶ್ರದ್ಧೆ ಮತ್ತು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಹಬ್ಬದ ಅಂಗವಾಗಿ ಗ್ರಾಮ ದೇವತೆ ಮಾರಮ್ಮ ತಾಯಿ ದೇವಾಲಯ ಹಾಗೂ ಪ್ರಮುಖ ಬೀದಿಗಳನ್ನು ತಳಿರು ತೋರಣ ಮತ್ತು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಮಂಗಳವಾರ ತಾಯಿಗೆ ಹೋಮ, ಹವನ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು.

ಮಂಗಳವಾರ ಬೆಳಗ್ಗೆ ಮಾರಮ್ಮ ತಾಯಿಯ ಉತ್ಸವ ಮೂರ್ತಿಯನ್ನು ಕೆ.ಆರ್. ಪೇಟೆ ತಾಲೂಕಿನ ಸಂಗಾಪುರದ ಬಳಿಯಿರುವ ಸಂಗಮ ಸ್ಥಳದಲ್ಲಿ ಪುಣ್ಯಸ್ನಾನ, ಹೋಮ, ಹವನ ನೆರವೇರಿಸಿ ಸಂಜೆಯ ವೇಳೆಗೆ ಗ್ರಾಮಕ್ಕೆ ಕರೆತರಲಾಯಿತು. ರಾತ್ರಿ ಗ್ರಾಮದ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ತಂಬಿಟ್ಟು ಆರತಿಯೊಂದಿಗೆ ತಾಯಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ, ನೈವೇದ್ಯ ಸಲ್ಲಿಸಲಾಯಿತು.

ಬುಧವಾರ ಬೆಳಗ್ಗೆ ತಾಲೂಕಿನ ಅರಕೆರೆ ಗ್ರಾಮಕ್ಕೆ ತಮಟೆ ಮತ್ತು ಮಂಗಳವಾದ್ಯಗಳ ಸಮೇತ ಗ್ರಾಮದ ನೂರಾರು ಮಂದಿ ತೆರಳಿ ಬಸವೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಶೃಂಗರಿಸಿಕೊಂಡು ಅಲಂಕೃತಗೊಂಡ ತೆರೆದ ವಾಹನದಲ್ಲಿ ಕರೆತರಲಾಯಿತು. ಉತ್ಸವ ಮೂರ್ತಿಗಳ ಮೆರವಣಿಗೆ ಹಿನ್ನೆಲೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಮ್ಮ ತಮ್ಮ ಮನೆಗಳ ಮುಂಭಾಗ ಗುಡಿಸಿ ನೀರು ಹಾಕಿ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿದರು.

ಆನಂತರ ಮಧ್ಯಾಹ್ನ 12.30ರಿಂದ ಸಂಜೆಯವರೆಗೆ ಮಾರಮ್ಮ ಮತ್ತು ಬಸವೇಶ್ವರಸ್ವಾಮಿ ಉತ್ಸವ ಮೂರ್ತಿಗಳ ಮೆರವಣಿಗೆ ಗ್ರಾಮದ ಎಲ್ಲ ಬೀದಿಗಳಲ್ಲಿ ನಡೆಯಿತು. ಉತ್ಸವಮೂರ್ತಿ ತಮ್ಮ ಮನೆಗಳ ಬಳಿ ಆಗಮಿಸುತ್ತಿದ್ದಂತೆ ಕುಟುಂಬದ ಸದಸ್ಯರೆಲ್ಲರೂ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ಗ್ರಾಮದ ಜತೆಗೆ ತಾಲೂಕಿನ ನಾನಾ ಭಾಗಗಳಿಂದ ಆಗಮಿಸಿದ್ದ ನವ ವಧು-ವರರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರೀಕರು ಆಗಮಿಸಿ ಪಾಲ್ಗೊಂಡಿದ್ದರು. ಮೆರವಣಿಗೆಯ ವೇಳೆ ಕೆಲವರು ಮಜ್ಜಿಗೆ, ಪಾನಕ, ವಿವಿಧ ಹಣ್ಣುಗಳ ರಸಾಯನ ಮತ್ತು ಪ್ರಸಾದ ತಯಾರಿಸಿ ನೆರೆದಿದ್ದ ಭಕ್ತ ಸಮೂಹಕ್ಕೆ ವಿತರಿಸಿ ತಮ್ಮ ಭಕ್ತಿ ಮೆರೆದರು.

ಆನಂತರ ಎರಡೂ ಉತ್ಸವ ಮೂರ್ತಿಗಳನ್ನು ದೇವಾಲಯದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ, ಕುರಿಗಳ ಹಿಂಡನ್ನು ಸುತ್ತು ಹಾಕಿಸಿ, ಬಸವೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಅರಕೆರೆ ಗ್ರಾಮಕ್ಕೆ ತೆರೆದ ವಾಹನದಲ್ಲಿ ಕಳುಹಿಸಿಕೊಡಲಾಯಿತು. ಈ ವೇಳೆ ನೆರೆದಿದ್ದ ಭಕ್ತರು ಮಾರಮ್ಮ ಮತ್ತು ಬಸವೇಶ್ವರಸ್ವಾಮಿಗೆ ಜಯಕಾರದ ಘೋಷಣೆಗಳನ್ನು ಮೊಳಗಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮಶಿವಣ್ಣ, ಮಾಜಿ ಉಪಾಧ್ಯಕ್ಷೆ ತಾಯಮ್ಮ ಜವರಯ್ಯ, ಮಾಜಿ ಸದಸ್ಯರಾದ ಸಣ್ಣಸ್ವಾಮಿಗೌಡ, ಶಶಿಕಲಾ ರವಿಕುಮಾರ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಸಿ. ಪ್ರಕಾಶ್, ನಂಜೇಗೌಡ, ಯಜಮಾನರಾದ ಜಯರಾಮೇಗೌಡ, ರಾಮೇಗೌಡ, ಜಿ.ಬಿ.ಸ್ವಾಮಿ, ಜವರಯ್ಯ, ಜಿ.ಸಿ.ಸ್ವಾಮಿ, ಶಿಕ್ಷಕ ಜಿ.ಕೆ.ಕೃಷ್ಣಕುಮಾರ್, ನಿವೃತ್ತ ಶಿಕ್ಷಕರಾದ ರಾಜಯ್ಯ, ಕೆ. ಸ್ವಾಮಿ, ಮುಖಂಡರಾದ ಮಹದೇವ, ಜಿ.ಎಸ್. ಸುನಿಲ್‌ ಕುಮಾರ್, ಚಂದ್ರಶೆಟ್ಟಿ, ಮಂಜುನಾಥ್, ಗಣೇಶ್, ಜಿ.ಪಿ. ಮಹದೇವ್, ಜಿ.ಕೆ. ಮಹೇಶ್, ಸುರೇಶ, ಜಿ.ಕೆ. ಸಂತೋಷ್‌ ಕುಮಾರ್, ಜಿ.ಎಸ್. ನಾಗರಾಜ, ಸೋಮಶೇಖರ, ಜಿ.ಎಸ್. ಕೃಷ್ಣ, ಜಿ.ಕೆ. ನಾಗರಾಜು, ಅರ್ಚಕರಾದ ರಾಜನಾಯಕ, ಶಿವಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ಸಾಧನೆಗೆ ಶ್ರಮ, ಸಮಯ ಅಗತ್ಯ: ಡಾಲಿ ಧನಂಜಯ್
ಪೂರ್ಣಕುಂಭ ಹೊತ್ತು ಸಾಗಿದ ಸೌಭಾಗ್ಯ