ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುನಗರದಲ್ಲಿ ದಿನೇ ದಿನೆ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ, ಭಯದ ವಾತಾವರಣದಲ್ಲಿ ಬದುಕುತ್ತಿರುವ ಜನರು ನಗರಸಭೆ, ಜಿಲ್ಲಾಡಳಿತವು ಯಾವುದೇ ಕ್ರಮ ಜಗಿಸದೇ ನಿರ್ಲಕ್ಷ್ಯ ಧೋರಣೆ ತಾಳಿರುವುದಕ್ಕೆ ಬೇಸತ್ತು ಹೋಗಿದ್ದಾರೆ. ಇತ್ತ ಬೀದಿ ನಾಯಿಗಳ ಹಾವಳಿಯಿಂದಾಗಿ ನಾಗರಿಕರು ತೊಂದರೆ ಅನುಭವಿಸುತ್ತಿರುವ ಸಂಗತಿ ಗಮನಕ್ಕಿದ್ದರೂ ಸಹ ಆಡಳಿತ ವರ್ಗವು ಮೌನಕ್ಕೆ ಜಾರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದಲ್ಲಿ ಬೀದಿ ನಾಯಿಗಳಿಲ್ಲದಿರುವ ವಾರ್ಡ್‌ಗಳಿಲ್ಲ, ಅದರಲ್ಲಿಯೂ ಒಂದೆರಡು ಅಲ್ಲ ನೂರಾರು ನಾಯಿಗಳು ಪ್ರತಿ ವಾರ್ಡ್, ಬಡಾವಣೆ, ಓಣಿ, ಗಲ್ಲಿಗಳಲ್ಲಿ ಕಾಣುತ್ತವೆ. ಸ್ಲಂ, ಸೆಮಿ ಸ್ಲಂ ಹಾಗೂ ಮಧ್ಯಮ ವರ್ಗದ ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದ್ದು, ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ನಾಯಿಗಳಿಂದ ಜನಸಾಮಾನ್ಯರಿಗೆ ಕಿರಿಕಿರಿ ಜರುಗುತ್ತಿವೆ.ವಾರದಲ್ಲಿ 4 ಮಕ್ಕಳ ಮೇಲೆ ದಾಳಿಕಳೆದ ಒಂದು ವಾರದಲ್ಲಿ ವಿವಿಧ ಬಡಾವಣೆಗಳಲ್ಲಿ ನಾಲ್ಕು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆಗಳು ಪ್ರತ್ಯೇಕವಾಗಿ ನಡೆದಿದೆ. ಸ್ಥಳೀಯ ಮಂಗಳವಾರ ಪೇಟೆ, ತಿಮ್ಮಾಪುರ ಪೇಟೆ ಬಡಾವಣೆಯಲ್ಲಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿದ್ದು, ಗಾಯಗೊಂಡ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಿರಂತರವಾಗಿ ದಾಳಿಗಳು ನಡೆಯುತ್ತಿರುವುದು ಮಕ್ಕಳ ಪಾಲಕರು ಸೇರಿ ನಿವಾಸಿಗಳಲ್ಲಿ ತೀವ್ರ ಆತಂಕ ಉಂಟು ಮಾಡಿದೆ.ರಾತ್ರಿ ಸಂಚಾರ ನರಕವೆ ಸರಿ
ಹಗಲಿನಲ್ಲಿ ಮನೆಗಳು, ಅಂಗಡಿ-ಮುಂಗಟ್ಟುಗಳ ಮುಂದೆ ಸಾಮಾನ್ಯವಾಗಿ ಕಂಡುಬರುವ ನಾಯಿಗಳು, ಚರಂಡಿ, ತ್ಯಾಜ್ಯದ ಗುಂಡಿಗಳು, ಮಾಂಸದ ಅಂಗಡಿಗಳ ಅಕ್ಕ-ಪಕ್ಕ ಹೆಚ್ಚಾಗಿ ಕಂಡುಬರುತ್ತವೆ. ರಾತ್ರಿಯಾಗುತ್ತಿದ್ದಂತೆ ಮುಖ್ಯರಸ್ತೆ, ವೃತ್ತ ಹಾಗೂ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ಕಂಡುಬರುವ ನಾಯಿಗಳು ಜನ, ವಾಹನ ಸಂಚಾರಕ್ಕೆ ಅಡ್ಡಿ ಪಡಿಸುವುದು, ಹಿಂದೆ ಬೀಳುವುದು, ಕಚ್ಚಲು ಮುಂದಾಗುವ ಪ್ರಕರಣಗಳು ನಡೆದಿವೆ.ನಾಯಿಗಳ ಕಾಟ ಹೆಚ್ಚಾಗುತ್ತಿದ್ದರು ಸಹ ನಗರಸಭೆ ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೀದಿ ನಾಯಿಗಳ ಸಮಸ್ಯೆ ಕುರಿತು ಚರ್ಚೆ ನಡೆದರೂ ಸಹ ಪ್ರಾಣಿ ದಯಾ ಸಂಘ-ಸಂಸ್ಥೆಗಳು ಹಾಗೂ ಸಾಕು ಪ್ರಾಣಿಗಳ ಸಂರಕ್ಷಣೆ ಕುರಿತ ಇರುವ ಕಾನೂನುಗಳಿಂದಾಗಿ ಅವುಗಳ ನಿಯಂತ್ರಣ ಮಾಡಲು ಆಗುವುದಿಲ್ಲ ಎನ್ನುವಂತಹ ರೀತಿಯಲ್ಲಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದರು.
ಇತ್ತೀಚೆಗೆ ಸಿಂಧನೂರಿನಲ್ಲಿ ಬುಧವಾರ ರಾಯಚೂರು ನಗರದಲ್ಲಿ ಬೀದಿ ನಾಯಿ ಮಕ್ಕಳ ಮೇಲೆ ದಾಳಿ ಮಾಡಿರುವ ಘಟನೆ ಜರುಗಿದ್ದು, ಇನ್ನು ಮುಂದೆಯಾದರೂ ಆಡಳಿತ ವರ್ಗದವರು ಸಮಸ್ಯೆ ಗಂಭೀರತೆ ಅರಿತು ಬೀದಿ ನಾಯಿಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಮಕ್ಕಳು ಸೇರಿ ಜನರ ಮೇಲೆ ನಾಯಿಗಳ ದಾಳಿ ನಡೆಸುತ್ತಿರುವ ಘಟನೆಗಳು ಸಂಭವಿಸುತ್ತಿವೆ. ನಾಯಿಗಳ ಹಾವಳಿಯಿಂದಾಗಿ ಜನಸಾಮಾನ್ಯರು ಭೀತಿಯಿಂದ ಬದುಕುವಂತಾಗಿದೆ. ಭಾರಿ ಅನಾಹುತ ಸಂಭವಿಸುವುದಕ್ಕಿಂತ ಮುಂಚೆಯೇ ನಗರಸಭೆ, ಜಿಲ್ಲಾಡಳಿತ ಸಮಸ್ಯೆಯ ಗಂಭೀರತೆಯನ್ನು ಅರಿತು, ಸೂಕ್ತ ಕ್ರಮಕ್ಕೆ ಮುಂದಾಗಬೇಕು.ಮೊಹಮ್ಮದ್ ರಸೂಲ್, ನಾಗೇಂದ್ರ.ವಿ, ರಮೇಶ ಸೂರಿ, ಸ್ಥಳೀಯ ನಿವಾಸಿಗಳು