ಕಿಡ್ನಿ ಸಮಸ್ಯೆಗೆ ತುತ್ತಾದವರ ಸಂಖ್ಯೆ ಹೆಚ್ಚಳ: ಎಚ್.ಡಿ.ಕುಮಾರಸ್ವಾಮಿ ಆತಂಕ

KannadaprabhaNewsNetwork | Published : Sep 7, 2024 1:38 AM

ಸಾರಾಂಶ

ಶಿವಮೊಗ್ಗದ ಹೊರವಲಯದಲ್ಲಿರುವ ಮಾಚೇನಹಳ್ಳಿಯಲ್ಲಿರುವ ಎನ್‍ಯು ಆಸ್ಪತ್ರೆಯಲ್ಲಿ ಪ್ರಥಮ ಕಿಡ್ನಿ ಟ್ರಾನ್ಸ್‌ಪ್ಲೆಂಟೇಷನ್ ಯಶಸ್ವಿ ಶಸ್ತ್ರಚಿಕಿತ್ಸೆಯ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮೂತ್ರಪಿಂಡ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕಿಡ್ನಿ ಟ್ರಾನ್ಸ್‌ಪ್ಲೆಂಟ್‍ಟೇಷನ್ ಬಗ್ಗೆ ಅವರಲ್ಲಿ ಆತಂಕ ಹೆಚ್ಚಾಗುತ್ತಿದ್ದು, ಎನ್‍ಯು ಆಸ್ಪತ್ರೆಯು ಆ ಎಲ್ಲಾ ಆತಂಕಗಳನ್ನು ದೂರು ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಇಲಾಖೆಯ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಹೊರವಲಯದಲ್ಲಿರುವ ಮಾಚೇನಹಳ್ಳಿಯಲ್ಲಿರುವ ಎನ್‍ಯು ಆಸ್ಪತ್ರೆಯಲ್ಲಿ ಪ್ರಥಮ ಕಿಡ್ನಿ ಟ್ರಾನ್ಸ್‌ಪ್ಲೆಂಟ್‍ಟೇಷನ್ ಯಶಸ್ವಿ ಶಸ್ತ್ರ ಚಿಕಿತ್ಸೆಯ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಲೆನಾಡಿನಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಎನ್‍ಯು ಸಮೂಹ ಸಂಸ್ಥೆಯ ಆಸ್ಪತ್ರೆಯು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತಿದೆ ಎಂದರು.

ಶಿವಮೊಗ್ಗದ ಜನರು ಕಿಡ್ನಿ ಟ್ರಾನ್ಸ್‍ಪ್ಲೆಂಟ್‍ಟೇಷನ್ ಶಸ್ತ್ರ ಚಿಕಿತ್ಸೆಗೆ ದೂರದ ಬೆಂಗಳೂರು, ಮಣಿಪಾಲ್‍ನಂತರ ನಗರಕ್ಕೆ ಹೋಗಬೇಕಾಗಿತ್ತು. ಆದರೆ ಈ ಆಸ್ಪತ್ರೆಯು ಇಲ್ಲಿ ಸ್ಥಾಪನೆಯಾಗಿದ್ದರಿಂದ ಈ ಭಾಗದ ಜನರಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.

ನಾಡಿನ ಹಲವಾರು ಕುಟುಂಬಗಳ ಬದುಕಿಗೆ ಆಶ್ರಯ ನೀಡುತ್ತಿರುವ ಈ ಆಸ್ಪತ್ರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವಂತಾಗಲಿ ಎಂದು ಅವರು ಆಶಿಸಿದರು.

ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಬಡ ಕುಟುಂಬಗಳ ರೋಗಿಗಳ ಅಂಗಾಂಗ ಕಸಿಗೆ 30 ಕೋಟಿ ರು. ಹಣವನ್ನು ತೆಗೆದಿಟ್ಟಿದ್ದು, ತದನಂತರ ಆ ಹಣ ಏನಾಯಿತು ಎಂಬುವುದರ ಬಗ್ಗೆ ತಮಗೆ ಮಾಹಿತಿ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಇಂತಹ ಟ್ರಾನ್ಸ್‌ಪ್ಲೆಂಟೇಷನ್ ಶಸ್ತ್ರ ಚಿಕಿತ್ಸೆಗೆ ಸುಮಾರು 25 ರಿಂದ 30ಲಕ್ಷದವರೆಗೆ ಖರ್ಚು ಮಾಡಬೇಕಾದ ಸಂದರ್ಭ ಎದುರಾ ಗುತ್ತದೆ. ಬಡವರಿಗೆ ಸಹಯವಾಗಲಿ ಎಂದು ತಾವು ಈ ಹಣವನ್ನು ಮೀಸಲಿಟ್ಟಿದ್ದಾಗಿ ತಿಳಿಸಿದರು.

ಬಂಜೆತನ ನಿವಾರಣೆ, ಮೂತ್ರಪಿಂಡ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಇತ್ಯಾದಿಗಳು ಈ ಭಾಗದ ಜನರಿಗೆ ಅವಶ್ಯಕವಾಗಿದ್ದು, ಅವು ಗಳನ್ನು ಪೂರೈಸುವಲ್ಲಿ ಎನ್‍ಯು ಆಸ್ಪತ್ರೆ ಮುಂಚೂಣಿಯಲ್ಲಿದೆ ಎಂದವರು ಶ್ಲಾಘಿಸಿದರು.

ಮೂತ್ರಪಿಂಡ ಅಂಗಾಂಗ ಕಸಿಯ ತಜ್ಞ ಡಾ. ಪ್ರವೀಣ್ ಮಾಳವದೆ ಮಾತನಾಡಿ, 2020ರಲ್ಲಿ ಶಿವಮೊಗ್ಗದಲ್ಲಿ ಎನ್‍ಯು ಆಸ್ಪತ್ರೆಯ ಶಾಖೆ ಆರಂಭವಾಗಿದೆ. 2023 ರ ಏಪಿಲ್‍ನಲ್ಲಿ ಪ್ರಥಮ ಕಿಡ್ನಿ ಟ್ರಾನ್ಸ್‍ಪ್ಲೆಂಟ್‍ಟೇಷನ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ಪೂರೈಸಲಾಗಿದೆ. ರಕ್ತಗುಂಪು ಹೊಂದಾಣಿಕೆಯಾದ ಸಂದರ್ಭದಲ್ಲಿಯೂ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ ಹೆಗ್ಗಳಿಕೆ ತಮ್ಮ ಆಸ್ಪತ್ರೆಯದ್ದಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದ ಅವರು, ಎಲ್ಲಾ ಶಾಲೆಗಳಲ್ಲಿ ಅಂಗಾಂಗ ದಾನದ ಬಗ್ಗೆ ತಿಳುವಳಿಕೆ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಇದೇ ಸಂದರ್ಭದಲ್ಲಿ ಮೂತ್ರಪಿಂಡ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದ ಪೂರ್ಯನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಶಾರದ ಅಪ್ಪಾಜಿ ಗೌಡ, ಡಾ.ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

Share this article