ಡಂಬಳದಲ್ಲಿ ತರಕಾರಿ ಬೆಲೆ ಗಗನಮುಖಿ, ಗ್ರಾಹಕರಿಗೆ ಹೊರೆ

KannadaprabhaNewsNetwork |  
Published : Jun 30, 2024, 12:49 AM IST
ಡಂಬಳ ಸಂತೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು. | Kannada Prabha

ಸಾರಾಂಶ

ಡಂಬಳ ಹಾಗೂ ಜಂತ್ಲಿ ಶಿರೂರ ಗ್ರಾಮದಲ್ಲಿ ಈ ವಾರ ನಡೆದ ಸಂತೆಯಲ್ಲಿ ಎಲ್ಲ ತರಕಾರಿ ಬೆಲೆ ವಿಪರೀತ ಹೆಚ್ಚಳವಾಗಿದ್ದು, ಸಾರ್ವಜನಿಕರು ತರಕಾರಿ ಖರೀದಿಗೆ ಹಿಂದೇಟು ಹಾಕಿದ್ದಾರೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಡಂಬಳ ಹಾಗೂ ಜಂತ್ಲಿ ಶಿರೂರ ಗ್ರಾಮದಲ್ಲಿ ಈ ವಾರ ನಡೆದ ಸಂತೆಯಲ್ಲಿ ಗ್ರಾಹಕರು ತರಕಾರಿ ಬೆಲೆ ಕೇಳಿ ಹೌಹಾರಿದ್ದಾರೆ.

ಸಂತೆಯಲ್ಲಿ ಟೊಮೊಟೋ ಕೆಜಿಗೆ ₹80 ಇದ್ದರೆ, ಹಸಿಮೆಣಸಿನಕಾಯಿ ₹100 ಆಗಿತ್ತು. ವಾರದ ಸಂತೆಗೆ ಬಂದ ಗ್ರಾಹಕರು ತರಕಾರಿ ಕೊಳ್ಳಲು ಹಿಂದೇಟು ಹಾಕಿದರು. ಸಂತೆ ಮಾರುಕಟ್ಟೆಗೆ ಹೋದ ಪ್ರತಿಯೊಬ್ಬ ಗ್ರಾಹಕರಿಗೆ ಎಲ್ಲ ತರಕಾರಿಗಳು ಬಿಸಿ ಮುಟ್ಟಿಸಿವೆ.

ದೊಣ್ಣಮೆಣಸಿನಕಾಯಿ (ಕ್ಯಾಪ್ಸಿಕಂ) ಮತ್ತು ಕ್ಯಾರೆಟ್ ಬೆಲೆ ಕೆಜಿಗೆ ₹80, ಬೆಂಡೆಕಾಯಿ ₹100 ಮತ್ತು ಆಲೂಗಡ್ಡೆ ₹50-60ಗೆ ಏರಿಕೆಯಾಗಿದ್ದವು.

ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅಧಿಕ ತಾಪಮಾನ ಒಂದೆಡೆಯಾದರೆ, ಮತ್ತೊಂದೆಡೆ ಬರದ ಬೇಗೆಯಿಂದ ನೀರಿನ ಸಮಸ್ಯೆ ಎದುರಾಗಿ ತರಕಾರಿ ಬೆಲೆ ಹೆಚ್ಚಾಗಿತ್ತು. ಜೂನ್ ಆರಂಭದಿಂದ ಮಳೆ ಸುರಿದು ಕೆಲವು ತರಕಾರಿ ಬೆಲೆ ಇನ್ನಷ್ಟು ಏರಿಕೆ ಕಂಡಿತು. ಬೀನ್ಸ್, ಮೆಣಸಿನಕಾಯಿ ಮತ್ತು ಹೀರೇಕಾಯಿ, ಸೊಪ್ಪಿನ ದರ ಹೆಚ್ಚಳವಾಗಲು ಕಾರಣವಾಯಿತು ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಜಿಲ್ಲೆಯಲ್ಲಿ ಕೆಲವೆಡೆ ಮಳೆ ಆಧಾರಿತ ಬೆಳೆ ಇದ್ದರೆ, ಹೆಚ್ಚುಭಾಗ ನೀರಾವರಿ, ಕೆರೆ ಅವಲಂಬಿಸಿ ತರಕಾರಿ ಬೆಳೆಯುತ್ತಾರೆ. ಆದರೆ ಕೆರೆಗೆ ನೀರು ತುಂಬಿಸದ ಕಾರಣ ರೈತರಿಗೆ ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ ಹೊರಜಿಲ್ಲೆಗಳಿಂದ ತರಕಾರಿ ತರಿಸಲಾಗುತ್ತಿದೆ.

ಪ್ರತಿಯೊಂದು ತರಕಾರಿ ಬೆಲೆ ಗಗನಮುಖಿಯಾಗಿದ್ದು, ಜನರಿಗೆ ಹೊರೆ ಆಗುತ್ತಿದೆ. ಜಿಲ್ಲೆಯಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲು ನೀರಿನ ಕೊರತೆ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಕೆರೆಗಳಿಗೆ ನೀರು ಹರಿಸಿ, ತರಕಾರಿ ಬೆಳೆಗಳನ್ನು ಬೆಳೆಯಲು ಅನುಕೂಲ ಕಲ್ಪಿಸಿಕೊಡಬೇಕು ಎಂದು ಡಂಬಳ ಗ್ರಾಮದ ಯುವ ರೈತ ರಮೇಶ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಲಿ ಬ್ಯಾನರ್ ತೆಗಿಸಿದ್ದೇ ಬಳ್ಳಾರಿ ಫೈಟ್‌ ಮೂಲ?
ಕಸಾಪ ಸಿಬ್ಬಂದಿಗಿಲ್ಲ 3 ತಿಂಗಳ ವೇತನ