ಗದಗ: ಕಳೆದ 10 ವರ್ಷದ ಬಿಜೆಪಿ ಆಡಳಿತದಲ್ಲಿ ದೇವದಾಸಿ ಮಹಿಳೆಯರಿಗೆ ಯಾವುದೇ ಕೊಡುಗೆ ನೀಡಿಲ್ಲ. ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗಿವೆ ಎಂದು ದೇವದಾಸಿ ಮಹಿಳಾ ವಿಮೋಚನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಈ ಬಾರಿ ಸೋಲಿಸಲು ನಾವು ಪಣ ತೋಟ್ಟಿದ್ದೇವೆ. ದಲಿತರಿಗೆ, ದೇವದಾಸಿ ಮಹಿಳೆಯರಿಗೆ ಹಾಗೂ ಶೂದ್ರರಿಗೆ ಏನೂ ನೀಡಿಲ್ಲ, ದೇವದಾಸಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಇದುವರೆಗೂ ಒಂದು ಎಕರೆ ಜಮೀನು ನೀಡಿಲ್ಲ. ಜತೆಗೆ ಸಾಲವನ್ನು ದೇವದಾಸಿ ಮಹಿಳೆಯರಿಗೆ ನೀಡುತ್ತಿಲ್ಲ. ದೊಡ್ಡ ಬಂಡವಾಳ ಶಾಹಿಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡುತ್ತದೆ. ಬಡವರ ಸಾಲ ಯಾಕೆ ಮನ್ನಾ ಮಾಡುತ್ತಿಲ್ಲ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ದಲಿತರ ಮೇಲೆ ಅತ್ಯಾಚಾರ ನಡೆಯುತ್ತಿವೆ. ಭೂ ಸುಧಾರಣಾ ಕಾಯ್ದೆ, ಗೋ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೂಲಿ ಕಾರ್ಮಿಕರನ್ನು ಬೀದಿಗೆ ತಂದಿದ್ದಾರೆ. ಬ್ಯಾಂಕ್, ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ಮಾರಿದ್ದಾರೆ. ಶ್ರೀಮಂತರ ವಿದೇಶದಲ್ಲಿನ ಹಣ ತಂದು ₹15 ಲಕ್ಷ ಕೊಡ್ತಿನಿ ಅಂತ ಹೇಳಿ ಒಂದೂ ರೂ ಕೊಟ್ಟಿಲ್ಲ. ವರ್ಷಕ್ಕೆ 2ಕೋಟಿ ಉದ್ಯೋಗ ಕೊಡ್ತಿನಿ ಅಂತ ಹೇಳಿ ಇದ್ದ ಉದ್ಯೋಗ ಕಸಿದುಕೊಳ್ಳುವಂತೆ ಮಾಡಿದ್ದಾರೆ ಎಂದರು.ರಸ್ತೆ ಅಗಲೀಕರಣ, ಮೆಟ್ರೋ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ, ರಸ್ತೆ ಅಗಲಿಕರಣ ಹಾಗೂ ಮೆಟ್ರೋದಿಂದ ಶ್ರೀಮಂತರಿಗೆ ಅನುಕೂಲವಾಗಿದೆ. ವಿನಃ ಬಡವರಿಗೆ ಆಗಿಲ್ಲ ಅಚ್ಚೆ ದಿನ್ ಆಯೆಗೆ ಅಂತಾರೆ, ಯಾರಿಗೆ ಅಚ್ಚೆ ದಿನ್ ಆಗಿದೆ, ಮಹಿಳೆಯರ ಗೌರವದ ಬಗ್ಗೆ ಮಾತನಾಡುವ ಬಿಜೆಪಿಯವರು ಪ್ರಜ್ವಲ್ ರೇವಣ್ಣನವರ ಪ್ರಕರಣದ ಬಗ್ಗೆ ಯಾಕೆ ಮೌನವಾಗಿದ್ದಾರೆ, ಮಹಿಳಾ ಆಯೋಗಕ್ಕೆ ದೂರು ನೀಡಿದರೂ ರೇವಣ್ಣರನ್ನು ಯಾಕೆ ಬಂಧಿಸುತ್ತಿಲ್ಲ, ಇದೇನಾ ನೀವು ಮಹಿಳೆಯರಿಗೆ ಕೊಡುವ ಗೌರವ ಅಂತ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹುಲಗೆಮ್ಮ ಮಾತೆಮ್ಮನವರ, ಬಾಳು ರಾಥೋಡ್, ಫಕ್ಕಿರಮ್ಮ ಪೂಜಾರ, ದೇವಮ್ಮ ಜೋಗಮ್ಮನವರ ಉಪಸ್ಥಿತರಿದ್ದರು.