ಪತ್ರಿಕೆ ಜಾಹೀರಾತು ದರ ಶೇ.12 ಹೆಚ್ಚಳಗೊಳಿಸಿ: ತಿಪ್ಪೇಸ್ವಾಮಿ

KannadaprabhaNewsNetwork | Published : Mar 27, 2024 1:04 AM

ಸಾರಾಂಶ

ಜಿಲ್ಲಾ, ಪ್ರಾದೇಶಿಕ ದಿನಪತ್ರಿಕೆಗಳ ಹಾಲಿ ಜಾಹೀರಾತು ದರಕ್ಕಿಂತ ಶೇ.12ರಷ್ಟು ಹೆಚ್ಚಳ, ದಿನಪತ್ರಿಕೆಗಳ ಸಮಸ್ಯೆಗಳನ್ನು ಪರಿಹರಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಗಮನಹರಿಸಲಿ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲಾ, ಪ್ರಾದೇಶಿಕ ದಿನಪತ್ರಿಕೆಗಳ ಹಾಲಿ ಜಾಹೀರಾತು ದರಕ್ಕಿಂತ ಶೇ.12ರಷ್ಟು ಹೆಚ್ಚಳ, ದಿನಪತ್ರಿಕೆಗಳ ಸಮಸ್ಯೆಗಳನ್ನು ಪರಿಹರಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಗಮನಹರಿಸಲಿ ಎಂದು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 503 ದಿನಪತ್ರಿಕೆ, ಪ್ರಾದೇಶಿಕ ಪತ್ರಿಕೆಗಳು ಇದ್ದು, ಹಾಲಿ ಇರುವ ಜಾಹೀರಾತು ದರ ಶೇ.12ರಷ್ಟು ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಜ.9ರಂದು ಸಂಘವನ್ನು ಸ್ಥಾಪಿಸಿದ್ದೇವೆ ಎಂದರು.

ವಾರ್ತಾ ಇಲಾಖೆ ಮುಖಾಂತರವೇ ನೀಡಿ:

ಪ್ರತಿ 2 ವರ್ಷಕ್ಕೊಮ್ಮೆ ಜಾಹೀರಾತು ದರ ಶೇ.12 ಹೆಚ್ಚಿಸಬೇಕು. ವಾರ್ತಾ ಇಲಾಖೆ ಮುಖಾಂತರವೇ ಜಾಹೀರಾತುಗಳನ್ನು ಆಯಾ ಪತ್ರಿಕೆಗಳಿಗೆ ನೀಡಲು ಸಂಘದಿಂದ ಹೋರಾಟ ನಡೆಸಲಾಗುವುದು. ಏಜೆನ್ಸಿಗಳು ಬಿಡುಗಡೆ ಮಾಡುವ ಜಾಹೀರಾತುಗಳಿಗೆ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೆ ಕಡಿತಗೊಳಿಸುವ ಶೇ.15 ಕಮೀಷನ್ ಹಣವನ್ನು ಪತ್ರಿಕೆಗಳಿಂದ ಕಡಿತಗೊಳಿಸುವ ವ್ಯವಸ್ಥೆ ನಿಲ್ಲಿಸಬೇಕು ಎಂದು ವಿವರಿಸಿದರು.

ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಪಾರದರ್ಶಕವಾದ ಜಾಹೀರಾತು, ಟೆಂಡರ್ ಜಾಹೀರಾತು ನೀಡುವ ಮೂಲಕ ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೆ ಉಸಿರಾಡುವ ಅವಕಾಶ ನೀಡಬೇಕು. ಜಿ.ಪಂ.ನಿಂದ ಕೈಗೊಳ್ಳುವ ಯಾವುದೇ ಟೆಂಡರ್ ಜಾಹೀರಾತು ಸಹ ನೀಡುವಂತೆ ಒತ್ತಾಯಿಸಲಾಗುವುದು. ಶೀಘ್ರವೇ ಜಿಪಂ ಸಿಇಒ ಅವರಿಗೆ ಭೇಟಿ ಮಾಡಿ, ಮನವಿ ಅರ್ಪಿಸಲಾಗುವುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ಎನ್.ರವಿ, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೀರೇಶ, ಸುಧಾಕರ, ಕುಣೆಬೆಳಕೆರೆ ಸುರೇಶ, ಎಸ್.ಗೋವಿಂದರಾಜ ಇತರರು ಇದ್ದರು.

- - - ಬಾಕ್ಸ್‌ ನೂತನ ಪದಾಧಿಕಾರಿಗಳುಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಎನ್.ರವಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎಸ್.ವೀರೇಶ, ಉಪಾಧ್ಯಕ್ಷರಾಗಿ ಬಿ.ಎನ್.ಮಲ್ಲೇಶ, ಕೆ.ಏಕಾಂತಪ್ಪ, ಕೆ.ಚಂದ್ರಣ್ಣ, ಎ.ಫಕೃದ್ದೀನ್, ಕೆ.ಉಮೇಶ, ಮಲ್ಲಿಕಾರ್ಜುನ ಕಬ್ಬೂರು, ಖಜಾಂಚಿಯಾಗಿ ಕುಣೆಬೆಳಕೆರೆ ಸುರೇಶ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎ.ಸಿ.ತಿಪ್ಪೇಸ್ವಾಮಿ ಈ ಸಂದರ್ಭ ತಿಳಿಸಿದರು.

- - -

-26ಕೆಡಿವಿಜಿ63:

ದಾವಣಗೆರೆಯಲ್ಲಿ ಮಂಗಳವಾರ ಕರ್ನಾಟಕ ಕಾರ್ಯ ನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article