ಗದಗ: ಹಲವಾರು ದಿನಗಳಿಂದ ನಮ್ಮ ಬಡಾವಣೆಗೆ ನೀರು ಪೂರೈಕೆ ಮಾಡುತ್ತಿಲ್ಲ, ನಾವೆಲ್ಲ ಬಡವರು ಮನೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಿಲ್ಲದಂತ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ, ಕೂಡಲೇ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಸಂಭಾಪುರ ರಸ್ತೆಯಲ್ಲಿರುವ ಸಿದ್ಧಾರ್ಥ ಕಾಲನಿ ನಿವಾಸಿಗಳು, ನಗರದ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ತಮಟೆ ಬಾರಿಗೆ, ಖಾಲಿ ಕೊಡ ಹಿಡಿದುಕೊಂಡು ಬಾಯಿ ಬಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ದಿನಗಳಿಂದ ಉಂಟಾಗಿದ್ದ ನೀರಿನ ಕೊರತೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಮಂಗಳವಾರ ಏಕಾಏಕಿ ಅವಳಿ ನಗರದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೆದ್ದಾರಿ ತಡೆ ಪ್ರಾರಂಭಿಸಿದರು. ನಡು ರಸ್ತೆಯಲ್ಲಿಯೇ ಮಹಿಳೆಯರು, ಯುವಕರು ಕುಳಿತು ಆಕ್ರೋಶ ವ್ಯಕ್ತ ಪಡಿಸುತ್ತಾ, ಒಂದೇ ಒಂದು ವಾಹನ ಸಂಚಾರಕ್ಕೂ ಅವಕಾಶ ನೀಡಲಿಲ್ಲ. ಇದರಿಂದ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಯಿತು.ಪ್ರತಿಭಟನೆ ಲೆಕ್ಕಿಸದೇ ದ್ವಿಚಕ್ರ ಸವಾರನೋರ್ವ ದಾಟಲು ಪ್ರಯತ್ನಿಸುತ್ತಿದ್ದಂತೆ ಕುಪಿತಗೊಂಡ ಮಹಿಳೆಯರು ನಮ್ಮ ಸಮಸ್ಯೆ ಯಾರೂ ಕೇಳದೇ ಇರುವದಕ್ಕಾಗಿಯೇ ರಸ್ತೆಗೆ ಬಂದಿದ್ದೇವೆ. ಸವಾರನೊಂದಿಗೆ ವಾಗ್ವಾದ ನಡೆಸಿದರು. ನಂತರ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತ ಪಡಿಸಿದರು. ಪ್ರತಿಭಟನೆಯಲ್ಲಿ ಬಡವಾಣೆಯ ನೂರಾರು ಜನರು ಪಾಲ್ಗೊಂಡಿದ್ದರು.
ಖಾಲಿ ಕೊಡ ಹಿಡಿದು ನೃತ್ಯ: ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಹಲಗೆ ಸದ್ದಿಗೆ ಖಾಲಿ ಕೊಡಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುವ ಮೂಲಕ ಬೇಸರ ವ್ಯಕ್ತ ಪಡಿಸಿದ್ದಲ್ಲದೇ ಎಲ್ಲ ಮಹಿಳೆಯರು ಒಟ್ಟಿಗೆ ಬಾಯಿ ಬಡಿದುಕೊಂಡು, ನಮ್ಮ ಸಮಸ್ಯೆ ಕೇಳುವವರು ಯಾರೂ ಇಲ್ಲ ಎಂದು ಕೆಲವರು ರೋದಿಸಿದರು. ಇದರಲ್ಲಿಯೂ ಕೆಲವು ಮಹಿಳೆಯರು ತಾವೇ ತಮಟೆ ಬಾರಿಸುವ ಮೂಲಕ ಪ್ರತಿಭಟನೆಯ ಕೇಂದ್ರ ಬಿಂದುವಾಗಿದ್ದರು.12 ವರ್ಷದಿಂದ ನಮಗೆ ಉತ್ತಮವಾದ ಕುಡಿವ ನೀರು ಪೂರೈಸುತ್ತಿಲ್ಲ, ಫ್ಲೋರೈಡ್ ನೀರನ್ನೇ ಬಳಸಬೇಕಾದ ಪರಿಸ್ಥಿತಿ ಇದೆ, ಆ ನೀರನ್ನು ಕುಡಿದು ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇನ್ನು ಬಡಾವಣೆಯಲ್ಲಿರುವ ಗರ್ಭಿಣಿಯರು, ಮಹಿಳೆಯರು, ಮಕ್ಕಳು ದೂರದಿಂದಾದರೂ ನೀರನ್ನು ಹೊತ್ತು ತರುತ್ತೇವೆ ಎಂದರೂ ಹನಿ ನೀರು ಸಿಗುತ್ತಿಲ್ಲ. ನಮ್ಮ ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಎಚ್.ಕೆ. ಪಾಟೀಲರೇ ಬರಬೇಕು ಎಂದು ಪ್ರತಿಭಟನಾ ಮಹಿಳೆಯರು ಒತ್ತಾಯಿಸಿದರು.
ಪ್ರತಿಭಟನೆ ಹಿಂದಕ್ಕೆ: ಸ್ಥಳಕ್ಕೆ ಆಗಮಿಸಿದ ನಗರಸಭೆಯ ಪ್ರಭಾರ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಹಾಗೂ ಅಭಿಯಂತರ ಬಂಡಿವಡ್ಡರ ಸಾಧ್ಯವಾದಷ್ಟು ಬೇಗನೇ ಸಮಸ್ಯೆಗೆ ಪರಿಹಾರ ನೀಡಲಾಗುವುದು, ದಯವಿಟ್ಟು ಪ್ರತಿಭಟನೆಯನ್ನು ಕೈ ಬಿಡಿ ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಕೆಲವು ಗಂಟೆಗಳ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.