ಆತ್ಮನಿರ್ಭರಕ್ಕೆ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸಿ

KannadaprabhaNewsNetwork |  
Published : Jun 28, 2026, 03:15 AM IST
ಅಖಿಲ ಭಾರತ ಗಾಣಿಗರ ಸಂಘದ ಕೇಂದ್ರ ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು. | Kannada Prabha

ಸಾರಾಂಶ

ಒಂದು ಕಾಲದಲ್ಲಿ ಭಾರತದಿಂದ ಎಳ್ಳಿನ ಎಣ್ಣೆ ಸೇರಿದಂತೆ ವಿವಿಧ ತೈಲ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಇಂದು ದೇಶದ ಶೇ. 60ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಗಾಣಿಗ ಸಮಾಜವು ದೇಶದ ಆರ್ಥಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಗೆ ನೀಡಿರುವ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಸಮಾಜದ ಸೇವೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸುವ ಅಗತ್ಯವಿದ್ದು, ರೈತರು ಎಣ್ಣೆಕಾಳು ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಗಾಣಿಗರ ಸಂಘದ ಕೇಂದ್ರ ಘಟಕದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಈ‌ ಸಮುದಾಯದ ಇತಿಹಾಸ ಸಾವಿರಾರು ವರ್ಷಗಳಷ್ಟು ಹಳೆಯದು. ಹರಪ್ಪ-ಮೊಹೆಂಜೋದಾರೊ ನಾಗರಿಕತೆಯಲ್ಲಿಯೇ ಎಣ್ಣೆ ಉತ್ಪಾದನೆ ಮತ್ತು ಗಾಣಿಗರ ವೃತ್ತಿಯ ಉಲ್ಲೇಖಗಳು ದೊರೆಯುತ್ತವೆ. ಒಂದು ಕಾಲದಲ್ಲಿ ಭಾರತದಿಂದ ಎಳ್ಳಿನ ಎಣ್ಣೆ ಸೇರಿದಂತೆ ವಿವಿಧ ತೈಲ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಇಂದು ದೇಶದ ಶೇ. 60ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸುವ ಅಗತ್ಯವಿದ್ದು, ರೈತರು ಎಣ್ಣೆಕಾಳು ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಭಾರತ ಆತ್ಮನಿರ್ಭರವಾಗಬೇಕಾದರೆ ಈ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದರು.

ಒಬಿಸಿ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ. ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇ. 27ರಷ್ಟು ಮೀಸಲಾತಿ ನೀಡಲಾಗಿದ್ದು, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯ ಒದಗಿಸಲಾಗುತ್ತಿದೆ. ಆದರೆ, ಕೆಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದ್ದು, ಎಲ್ಲರೂ ಒಟ್ಟಾಗಿ ಒತ್ತಡ ಹೇರಿದರೆ ಇನ್ನಷ್ಟು ಸೌಲಭ್ಯ ಪಡೆಯಲು ಸಾಧ್ಯ ಎಂದು ಹೇಳಿದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಗಾಣಿಗ ಸಮಾಜ ವಿಭಿನ್ನವಾಗಿದ್ದು, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ಹಾಗೂ ಎಲ್ಲರ ಜತೆ ಬೆರೆತು ಕೆಲಸ ಮಾಡುವ ಗುಣ ಇರುವುದರಿಂದ ಸಜ್ಜನರು ಎನ್ನುತ್ತಾರೆ. ಪರಿಸ್ಥಿತಿ ಬದಲಾಗಿದೆ, ವೃತ್ತಿ ಸಂಕಷ್ಟದಲ್ಲಿದೆ, ಗಾಣದ ಕೆಲಸವಿಲ್ಲ. ಕಾಲಕ್ಕೆ ತಕ್ಕ ಹಾಗೆ ಶಿಕ್ಷಣ, ಕೌಶಲ್ಯ ಸಂಪಾದಿಸಿ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಬೇಕು. ಗಾಣಿಗರ ಅಭಿವೃದ್ಧಿ ನಿಗಮದ ಹೋರಾಟ ಅರ್ಧಕ್ಕೆ ನಿಂತಿದ್ದು, ಅದನ್ನು ಮುಂದುವರಿಸಬೇಕು ಎಂದರು.

ಸಂಸದ ಪಿ.ಸಿ. ಗದ್ದಿಗೌಡ್ರ, ಶಾಸಕ ಮಹೇಶ ಟೆಂಗಿನಕಾಯಿ, ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಡಾ. ಶೇಖರ ಸಜ್ಜನ ಮಾತನಾಡಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಪ‌ ಮಾಜಿ ಸದಸ್ಯ ನಾಗರಾಜ ಛಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಗಾಣಿಗ ನೌಕರರ ಸಂಘದ ಮಹಾಪೋಷಕ ತಿಪ್ಪಣ್ಣ ಮಜ್ಜಗಿ, ಸಂಘದ ಅಧ್ಯಕ್ಷ ಗುರಣ್ಣ ಗೋಡಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಪ್ರಧಾನ ಕಾರ್ಯದರ್ಶಿ ಪಿ.ಎಂ. ತಟ್ಟಿಮನಿ, ಹುಬ್ಬಳ್ಳಿ ಗಾಣಿಗ ನೌಕರರ ಸಂಘದ ಅಧ್ಯಕ್ಷ ಆರ್.ಜಿ. ಪಾಟೀಲ, ಸಮಾಜದ ಹಿರಿಯರಾದ ಜಿ.ಎಸ್. ಛಬ್ಬಿ, ಬಿ.ಜಿ. ಪಾಟೀಲ, ಜಿ.ಎಸ್. ಜಂಬಗಿ ಸೇರಿದಂತೆ ಜಿಲ್ಲೆಗಳ ಅಧ್ಯಕ್ಷರು, ಗಣ್ಯರು, ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಂಘದ ಸದಸ್ಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರಂಡಿ ಸಮಸ್ಯೆಗೆ ರಸ್ತೆ ತಡೆ ಪ್ರತಿಭಟನೆ
ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಕಲಾಪ ಸ್ಥಗಿತ, ತಪಾಸಣೆ ನಡೆಸಿದ ಪೊಲೀಸರು