ಕುಕನೂರು: ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ ಎಂದು ಶಿಕ್ಷಕ ರಂಗಪ್ಪ ಓಲೇಕಾರ ಹೇಳಿದರು.
ಪ್ರತಿ ವರ್ಷ ಜೂ.೨೭ ರಂದು ನಾಡಪ್ರಭು ಕೆಂಪೇಗೌಡರ ಜನ್ಮದಿನವನ್ನು ಕೆಂಪೇಗೌಡ ಜಯಂತಿಯಾಗಿ ಆಚರಿಸಲಾಗುತ್ತದೆ. ಬೆಂಗಳೂರು ನಗರದ ನಿರ್ಮಾತೃ ಹಾಗೂ ದೂರದೃಷ್ಟಿಯ ಆಡಳಿತಗಾರನಾಗಿದ್ದ ಅವರ ಸಾಧನೆ ಸ್ಮರಿಸಲು, ಅವರು ನಾಡಿಗೆ ನೀಡಿದ ಕೊಡುಗೆ ಹಾಗೂ ಆದರ್ಶ ಈಗಿನ ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ನಾಡಪ್ರಭು ಕೆಂಪೇಗೌಡರು ೧೬ನೇ ಶತಮಾನದಲ್ಲಿ ಯಲಹಂಕದ ಪಾಳೇಗಾರರಾಗಿದ್ದು, ೪೬ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಅವರು ಹಂಪಿಯ ವೈಭವದಿಂದ ಪ್ರೇರಿತರಾಗಿ ೧೫೩೭ರಲ್ಲಿ ಬೆಂಗಳೂರು ನಗರ ನಿರ್ಮಿಸಿದರು. ಜತೆಗೆ, ಕೆರೆಗಳು, ದೇವಸ್ಥಾನ ಮತ್ತು ಕೋಟೆ ನಿರ್ಮಿಸಿ ಈ ಪ್ರದೇಶದ ಅಭಿವೃದ್ಧಿಗೆ ಬುನಾದಿ ಹಾಕಿದರು ಎಂದು ಹೇಳಿದರು.ಶಿಕ್ಷಕಿ ರೋಹಿಣಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಹಂಪಿಯ ವೈಭವದಿಂದ ಪ್ರೇರಿತರಾಗಿ ೧೫೩೭ರಲ್ಲಿ ಮಣ್ಣಿನ ಕೋಟೆ ನಿರ್ಮಿಸಿ ಬೆಂಗಳೂರು ನಗರಕ್ಕೆ ಅಡಿಪಾಯ ಹಾಕಿದರು, ನಗರದ ರಕ್ಷಣೆಗಾಗಿ ನಾಲ್ಕು ದಿಕ್ಕುಗಳಲ್ಲಿ ಗೋಪುರ ನಿರ್ಮಿಸಿದರು. ಕೆರೆ ನಿರ್ಮಿಸಿ, ಮರ ಬೆಳೆಸಿ ಎಂಬುದು ಇವರ ಮುಖ್ಯ ಮಂತ್ರವಾಗಿತ್ತು. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಲವು ಕೆರೆಗಳನ್ನು ನಿರ್ಮಿಸಿದರು, ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯ, ಗವಿಗಂಗಾಧರೇಶ್ವರ ದೇವಾಲಯ ಕಟ್ಟಿಸಿದರು ಎಂದರು.