ನೂತನ ತಾಂತ್ರಿಕತೆಗಳಿಂದ ಆದಾಯ ವೃದ್ಧಿಸಿಕೊಳ್ಳಿ

KannadaprabhaNewsNetwork |  
Published : Jun 09, 2025, 01:19 AM IST
ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಜರುಗಿದ ರಾಜ್ಯ ಮಟ್ಟದ ತೊಗರಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆಯಿಂದ ಹೊರತಂದ ತೊಗರಿಯ ಉತ್ತಮ ಬೇಸಾಯ ತಾಂತ್ರಿಕತೆಗಳು ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ತೊಗರಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತೊಗರಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರು ನೂತನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕು ಎಂದು ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ ಹೇಳಿದರು.

ನಗರದ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಇಲಾಖೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ರಾಯಚೂರ ಕೃಷಿ ತಂತ್ರಜ್ಞರ ಸಂಸ್ಥೆ, ವಿಜಯಪುರ ಘಟಕ ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ತೊಗರಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿಜಯಪುರ ಜಿಲ್ಲೆ ಉತ್ಕೃಷ್ಟ ಮಣ್ಣು ಹಾಗೂ ಹವಾಮಾನ ಗುಣ ಹೊಂದಿದ್ದು, ಎಲ್ಲಾ ಬೆಳೆಗಳ ಜೊತೆಗೆ ತೊಗರಿ ಬೆಳೆ ಬೆಳೆಯಲು ಸಹ ಉತ್ತಮ ವಾತಾವರಣವಿದೆ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಹೆಚ್ಚು ಅವಧಿಯ ತೊಗರಿ ಬೆಳೆಯನ್ನು ಕಡಿಮೆ ಆಳವಿರುವ ಮಣ್ಣಿನಲ್ಲಿ ಬೆಳೆಯುವದು ಸೂಕ್ತವಲ್ಲ. ಇವೆಲ್ಲವನ್ನು ಮನಗಂಡು ರಾಜ್ಯ ಸರ್ಕಾರ ಈ ಸಲ ಬಿತ್ತನೆ ಮುಂಚೆ ರೈತರಿಗೆ ಸಮಗ್ರ ಮಾಹಿತಿ ನೀಡಲು ಕಾರ್ಯಾಗಾರ ಏರ್ಪಡಿಸಿದೆ ಎಂದರು.

ಕಲಬುರಗಿ ಜಿಲ್ಲೆಗೆ ಹೋಲಿಸಿದಾಗ ವಿಜಯಪುರ ಜಿಲ್ಲೆಯಲ್ಲಿ ಇಳುವರಿ ಕಡಿಮೆ ಬರುತ್ತಿದೆ. ಹೀಗಾಗಿ ರೈತರು ಮೊದಲು ಸೂಕ್ತ ತಳಿಯನ್ನು ಆಯ್ಕೆ ಮಾಡಿಕೊಂಡು, ಅಗಲ ಸಾಲು ಪದ್ದತಿಯಲ್ಲಿ ಸಸಿಯಿಂದ ಸಸಿಗೆ ಸೂಕ್ತ ಅಂತರ ಕಾಯ್ದುಕೊಳ್ಳಬೇಕು. ಕುಡಿ ಚಿವುಟಬೇಕು, ಸೂಕ್ತ ಸಸ್ಯ ಸಂರಕ್ಷಣೆ ಕೈಗೊಳ್ಳಬೇಕು ಎಂದರು.

ಕಲಬುರಗಿ ತೊಗರಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಡಾ.ಅಂಥೋನಿ.ಎಂ ಮಾತನಾಡಿ, ಕಲಬುರಗಿ ತೊಗರಿ ಬೆಳೆಗೆ ಜಾಗತಿಕ ಸ್ಥಾನಮಾನ ದೊರೆತಿದ್ದು, ಅದರ ಗುಣಮಟ್ಟದ ಉತ್ಪಾದನೆಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ. ಕಲಬುರಗಿ ಹಾಗೆ ವಿಜಯಪುರದಲ್ಲಿಯೂ ಸಹ ತೊಗರಿ ಇಳುವರಿ ಹೆಚ್ಚಿಸುವ ತಾಂತ್ರಿಕತೆಗಳನ್ನು ರೈತರಿಗೆ ತಿಳಿಸುವ ನಿಟ್ಟಿನಲ್ಲಿ ವಿಜ್ಞಾನಿಗಳಿಂ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕಿ ಡಾ.ರೂಪ.ಎಲ್ ಮಾತನಾಡಿ, ಕಳೆದ ವರ್ಷ ದೀರ್ಘಾವಧಿ ತೊಗರಿ ತಳಿ ಬೆಳೆದ ರೈತರಿಗೆ ಮಾತ್ರ ಇಳುವರಿ ಕಡಿಮೆ ಬಂದಿದೆ. ಈ ವರ್ಷ ಕಡಿಮೆ ಅವಧಿಯ ತೊಗರಿ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ ಹಾಗೂ ಪರಿಕರಗಳು ತಾಂತ್ರಿಕ ಮಾಹಿತಿ ಕುರಿತು ವ್ಯಾಪಕ ಪ್ರಚಾರವನ್ನು ಇಲಾಖೆಯ ಮೂಲಕ ಮಾಡುತ್ತಿರುವ ಬಗ್ಗೆ ತಿಳಿಸಿದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವನಗೌಡ ಬಿರಾದಾರ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಕೆ.ಎಚ್.ಮುಂಬಾರೆಡ್ಡಿ ಮಾತನಾಡಿದರು. ಈ ವೇಳೆ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ತೊಗರಿಯ ಉತ್ತಮ ಬೇಸಾಯ ತಾಂತ್ರಿಕತೆಗಳು ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ವಿಜ್ಞಾನಿಗಳಾದ ಡಾ.ಅಶೋಕ ಸಜ್ಜನ, ಡಾ.ಸಿ.ಡಿ.ಸೋರೆಗಾಂವಿ, ಡಾ.ಎಂ.ಪಿ.ಪೋತದಾರ, ಡಾ.ರಾಜು ತೆಗ್ಗೆಳ್ಳಿ, ಡಾ.ಮಲ್ಲಿಕಾರ್ಜುನ ಕೆಂಗನಾಳ, ಡಾ.ಆರ್.ಸಿ.ಗುಂಡಪ್ಪಗೋಳ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಉಪ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ, ಉಪ ಕೃಷಿ ನಿರ್ದೇಶಕ ಡಾ.ಬಾಲರಾಜ ರಂಗರಾವ್, ಡಾ.ಚಂದ್ರಕಾಂತ ಪವಾರ, ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ, ಡಾ.ಆರ್.ಬಿ.ಜೊಳ್ಳಿ, ಡಾ.ಶಿವನಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಸಹಾಯಕ ಕೃಷಿ ನಿರ್ದೇಶಕ ಡಾ.ಹೆಚ್.ವೈ.ಸಿಂಗೆಗೋಳ, ಡಾ.ಎಸ್.ಡಿ.ಭಾವಿಕಟ್ಟಿ, ಡಾ.ಎಮ್.ಹೆಚ್.ಯರಝರಿ, ಡಾ.ಮಹಾದೇವಪ್ಪ ಏವೂರ, ವಿಜಯಲಕ್ಷ್ಮೀ ಚವ್ಹಾಣ, ಪಾರ್ವತಿ ಪಾಟೀಲ, ಮೈದರಗಿ, ಲಕ್ಷ್ಮೀ ಕಾಮಗೊಂಡ, ಲಿಂಗರಾಜ ತಾಳಿಕೋಟಿ ಸೇರಿ ಮುಂತಾದವರು ಉಪಸ್ಥಿತರಿದ್ದರು. ಡಾ.ಲಿಂಗರಾಜ ತಾಳಿಕೋಟಿ ನಿರೂಪಿಸಿದರು. ಡಾ.ಚಂದ್ರಕಾಂತ ಪವಾರ ವಂದಿಸಿದರು.

-----

ಕೋಟ್‌ರೈತರು ದ್ವಿದಳ ಧಾನ್ಯ ಬೆಳೆಗಳನ್ನು ಹೆಚ್ಚೆಚ್ಚು ಬೆಳೆಯಲು ಪ್ರೋತ್ಸಾಹ ನೀಡುತ್ತಿರುವುದು ಅದರಲ್ಲಿರುವ ಅಧಿಕ ಪ್ರೋಟೀನ್ ಅಂಶವೇ ಕಾರಣ. ಪ್ರತಿ ಊಟದಲ್ಲಿ ಬೇಳೆಕಾಳು ಬೆಳೆ ಇರಲೇಬೇಕು. ಈಗಿನ ಆಹಾರದಲ್ಲಿ ಪೌಷ್ಠಿಕಾಂಶ ಕೊರತೆ ಇದೆ. ಭತ್ತ, ಗೋಧಿ, ಬೆಳೆಯುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ದ್ವಿದಳ ಧಾನ್ಯಗಳಲ್ಲಿ ತೊಗರಿ ಬೆಳೆಗೆ ಹೆಚ್ಚಿನ ಮಹತ್ವವಿದ್ದು, ರೈತರು ದಿರ್ಘಾವಧಿ ತಳಿಗಳನ್ನು ಬೆಳೆಯದೇ ಅಲ್ಪಾವಧಿ ತಳಿ ಬೆಳೆಯಬೇಕು. ಬಿತ್ತನೆಗೆ ಮುನ್ನ ಬೀಜೋಪಚಾರ ಮಾಡಿ.ಡಾ.ಬಿ.ಡಿ.ಬಿರಾದಾರ, ಸಂಶೋಧನಾ ನಿರ್ದೇಶಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು