ಆಲಮಟ್ಟಿ: ಬಕ್ರೀದ್ ಹಬ್ಬದ ಮಾರನೆಯ ದಿನವಾದ ರವಿವಾರ ಆಲಮಟ್ಟಿಯ ಉದ್ಯಾನವನಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಭಾನುವಾರ ಉದ್ಯಾನಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ರಾಕ್ ಉದ್ಯಾನ ವನದಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬಿದ್ದರು.ಪ್ರತಿ ವರ್ಷ ಬಕ್ರೀದ್ ಹಬ್ಬದ ಮರುದಿನ ಮುಸ್ಲಿಂರು ಆಲಮಟ್ಟಿಯ ವಿವಿಧ ಉದ್ಯಾನವನಕ್ಕೆ ಭೇಟಿ ನೀಡುವುದು ಹೆಚ್ಚು. ಬೆಳಿಗ್ಗೆಯಿಂದಲೇ ಕಾರು, ಟಂಟಂ, ಬಸ್ ಹಾಗೂ ರೈಲಿನ ಮೂಲಕ ಆಗಮಿಸಿದ ಸಹಸ್ರಾರು ಪ್ರವಾಸಿಗರು ರಾಕ್ ಉದ್ಯಾನದ ಮುಂದೆ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.
ಪ್ರವಾಸಿಗರು ರಾಕ್ ಉದ್ಯಾನದಲ್ಲಿಯೇ ಹೆಚ್ಚು ಕಾಲ ಕಳೆದರು. ಸಂಜೆಯ ವೇಳೆಗೆ ಮೊಘಲ್ ಉದ್ಯಾನದ ಬಳಿ ಜನರು ಹೆಚ್ಚಾಗಿ ಕಂಡು ಬಂದರು. ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ಗಳನ್ನು ವೀಕ್ಷಿಸಿ ಪ್ರವಾಸಿಗರು ಸಂತಸ ಅನುಭವಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಡ್ಯಾಂನ ಆಯ್ದ ಸ್ಥಳಗಳಲ್ಲಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.