ಹಿರಿಯ ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

KannadaprabhaNewsNetwork |  
Published : Jun 09, 2025, 01:16 AM IST
32 | Kannada Prabha

ಸಾರಾಂಶ

ರಾಮಯ್ಯ ಶೆಟ್ಟಿ-ತುಂಗಮ್ಮ ದಂಪತಿ ಪುತ್ರನಾಗಿ ಮುಂಡಾಜೆಯಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿಯೇ ಯಕ್ಷಲೋಕಕ್ಕೆ ಬಂದಿದ್ದು ತಮ್ಮ 11ನೇ ವರ್ಷದಲ್ಲೇ ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ತಂಡದ ಕಲಾವಿದನಾಗಿ ಸೇರಿದರು. ದಿ. ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ಅವರಲ್ಲಿ ನಾಟ್ಯಾಭ್ಯಾಸ ಕಲಿತು ಧರ್ಮಸ್ಥಳ ಮೇಳದ ಮೂಲಕ ತಿರುಗಾಟ ಆರಂಭಿಸಿದ್ದರು.

ಕನ್ನಡಪ್ರಭ ವಾರ್ತೆ ಮೂಲ್ಕಿಹಿರಿಯ ಯಕ್ಷಗಾನ ಕಲಾವಿದ, ಕಟೀಲು 3ನೇ ಮೇಳದ ಪ್ರಬಂಧಕ ಮುಂಡಾಜೆ ಸದಾಶಿವ ಶೆಟ್ಟಿ (67) ಹೃದಯಾಘಾತದಿಂದ ಭಾನುವಾರ ಮುಂಜಾನೆ ನಿಧನ ಹೊಂದಿದರು.

ರಾಮಯ್ಯ ಶೆಟ್ಟಿ-ತುಂಗಮ್ಮ ದಂಪತಿ ಪುತ್ರನಾಗಿ ಮುಂಡಾಜೆಯಲ್ಲಿ ಜನಿಸಿದ ಅವರು ಸಣ್ಣ ಪ್ರಾಯದಲ್ಲಿಯೇ ಯಕ್ಷಲೋಕಕ್ಕೆ ಬಂದಿದ್ದು ತಮ್ಮ 11ನೇ ವರ್ಷದಲ್ಲೇ ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರದ ಪ್ರಥಮ ತಂಡದ ಕಲಾವಿದನಾಗಿ ಸೇರಿದರು. ದಿ. ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ಅವರಲ್ಲಿ ನಾಟ್ಯಾಭ್ಯಾಸ ಕಲಿತು ಧರ್ಮಸ್ಥಳ ಮೇಳದ ಮೂಲಕ ತಿರುಗಾಟ ಆರಂಭಿಸಿದ್ದರು.

ಧರ್ಮಸ್ಥಳ ಮೇಳದಲ್ಲಿ ಹಂತ ಹಂತವಾಗಿ ಬೆಳೆದು ಪುಂಡು, ಸ್ತ್ರೀ, ರಾಜವೇಷ , ಎದುರು ವೇಷಗಳಲ್ಲಿ ಪ್ರಬುದ್ಧತೆ ಸಾಧಿಸಿ, ಕದ್ರಿ, ಕುಂಬ್ಳೆ, ಮಧೂರು, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತುಳು ಕನ್ನಡ ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಮೆರೆದಿದ್ದರು. ಮಾನಿಷಾದ ಪ್ರಸಂಗದಲ್ಲಿ ಸದಾಶಿವ ಶೆಟ್ಟಿ ವಾಲ್ಮೀಕಿ ಪಾತ್ರ, ಸುಧನ್ವ ಅರ್ಜುನ ಪ್ರಸಂಗದಲ್ಲಿ ಅರ್ಜುನ ಪಾತ್ರ, ಮಧು ಕೈಟಭ ಪ್ರಸಂಗ, ಕಂಸ ವಧೆಯಲ್ಲಿ ಕಂಸನ ಪಾತ್ರ, ಜಾಂಬವತಿ ಕಲ್ಯಾಣದಲ್ಲಿ ಜಾಂಬವ ಪಾತ್ರ ಹೀಗೆ ಹಲವು ಪಾತ್ರಗಳ ಮೂಲಕ ಸದಾಶಿವ ಶೆಟ್ಟಿ ಜನಾನುರಾಗಿದ್ದರು.ಕಟೀಲಿನ ಐದನೇ ಮೇಳ ಆರಂಭಗೊಂಡಾಗ ಮೇಳದ ಮೆನೇಜರ್ ಆಗಿ, ಈ ವರ್ಷ ಮೂರನೇ ಮೇಳದಲ್ಲಿ ಪ್ರಬಂಧಕರಾಗಿದ್ದರು.ತನ್ನ ಸಂದರ್ಭೋಚಿತ ಮಾತುಗಾರಿಕೆ, ನಾಟ್ಯದ ಮೂಲಕ ಪಾತ್ರಕ್ಕೆ ಘನತೆ ಒದಗಿಸುತ್ತ, ಕಂಸ, ಮಾಗಧ, ಕರ್ಣ, ಶಿಶುಪಾಲ, ಹರಿಶ್ಚಂದ್ರ, ಅರುಣಾಸುರ, ಕೌರವ, ರಕ್ತಬೀಜನ ಪಾತ್ರಗಳಿಗೆ ಜೀವ ತುಂಬಿದವರು. ಪುಂಡು ವೇಷ, ರಾಜ ವೇಷ, ನಾಟಕೀಯ, ಅಲ್ಲದೆ ಸ್ತ್ರೀವೇಷವನ್ನೂ ಮಾಡುತ್ತಿದ್ದ ಪರಿಪೂರ್ಣ ಕಲಾವಿದರಾಗಿದ್ದರು.ಮುಂಡಾಜೆಯವರು ರಾಜವೇಷ, ಎದುರುವೇಷ, ಪುಂಡು ವೇಷ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು. ಮುಂಡಾಜೆ ಸದಾಶಿವ ಶೆಟ್ಟಿ ಹಾಗೂ ಮುಂಡಾಜೆ ಬಾಲಕೃಷ್ಣ ಶೆಟ್ಟಿ ಸಹೋದರರಾಗಿದ್ದು, ಇಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿ ಅಮೋಘ ವಾಕ್ ಚಾತುರ್ಯ ಹಾಗೂ ನಟನೆಯ ಮೂಲಕ ಗುರುತಿಸಿಕೊಂಡಿದ್ದರು. ಕೋಟಿ ಚೆನ್ನಯ ಪಾತ್ರಗಳಲ್ಲಿ ಮಿಂಚಿ, ಅದ್ಬುತ ನಟನೆಯ ಮೂಲಕ ಇಬ್ಬರೂ ಸಹೋದರರು ಕಥೆಗೆ ಜೀವ ತುಂಬಿದ್ದರು.ಸದಾಶಿವ ಶೆಟ್ಟಿ ಅವರಿಗೆ ಕಳೆದ ವರ್ಷದ ತಿರುಗಾಟದಲ್ಲಿ ಮೇಳದಲ್ಲಿದ್ದ ಸಂದರ್ಭದಲ್ಲಿಯೇ ಎದೆ ನೋವು ಕಾಣಿಸಿಕೊಂಡಿತ್ತು. ಆ ನೋವಿನಲ್ಲೂ ಅವರು ಪುಣ್ಯಕ್ಷೇತ್ರ ತಿರುಪತಿಗೂ ತೆರಳಿ ಬಂದಿದ್ದರು. ಇದೇ ವೇಳೆ ಎರಡು ಮೈನರ್ ಅಟ್ಯಾಕ್ ಆಗಿದ್ದು, ಹಾರ್ಟ್ ಬ್ಲಾಕ್ ಆಗಿತ್ತು. ಹೃದಯ ಸಂಬಂಧಿ ಅನಾರೋಗ್ಯ ನಿಮಿತ್ತ ಇತ್ತೀಚೆಗೆ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆದಿತ್ತು. ಚಿಕಿತ್ಸೆಯ ಬಳಿಕ ಆಸ್ಪತ್ರೆಯಲ್ಲಿ ಚೇತರಿಸಿ ಮನೆಗೆ ಮರಳಿದ್ದರು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿನ ದಿನವಷ್ಟೇ ಡಿಸ್ಚಾರ್ಜ್ ಮನೆಗೆ ಬಂದಿದ್ದ ಮುಂಡಾಜೆ ಶನಿವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಈ ವರ್ಷದ ಕಟೀಲಿನ ತಿರುಗಾಟದ ಕೊನೆಯ ಯಕ್ಷಗಾನ ಸೇವೆಯಲ್ಲಿ ಸದಾಶಿವ ಶೆಟ್ಟಿ ಅವರೇ ಮಂಗಳ ಹಾಡಿ ಬಂದಿದ್ದರು. ಅದೇ ಅವರ ಯಕ್ಷಗಾನ ಪಯಣದ ಕೊನೆಯ ವೇದಿಕೆಯಾಗಿತ್ತು. ಇವರಿಗೆ ಯಕ್ಷಗಾನ ಕಲಾರಂಗದ ಪ್ರಶಸ್ತಿ, ಕದ್ರಿ ಕಂಬಳ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ಸೇರಿದಂತೆ ನೂರಾರು ವೇದಿಕೆಗಳಲ್ಲಿ ಸಂಮಾನಗಳು ಸಂದಿದ್ದವು.ಅವರು ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ. ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಪ್ರಭಾಕರ ಜೋಷಿ, ಕಟೀಲಿನ ಅರ್ಚಕರಾದ ಆಸ್ರಣ್ಣ ಬಂಧುಗಳು, ಉಡುಪಿ ಕಲಾರಂಗ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ