ಹೆಚ್ಚಿದ ಬ್ಲಾಕ್ ಥ್ರಿಪ್ಸ್ ಹಾವಳಿ: ಮೆಣಸಿನಕಾಯಿಗೆ ಮುಟುರು ರೋಗ

KannadaprabhaNewsNetwork |  
Published : Oct 27, 2025, 12:30 AM IST
ಕುರುಗೋಡು 01 ತಾಲೂಕಿನಲ್ಲಿ ಬಾದನಹಟ್ಟಿ ಗ್ರಾಮದಲ್ಲಿ ಮೆಣಸಿನಕಾಯಿ ಬೆಳೆಗೆ ಬ್ಲಾಕ್ ಥ್ರಿಪ್ಸ್ ದಾಳಿಯಿಂದ ಮುಟುರು ರೋಗಕ್ಕೆ ತಿರುಗಿರುವುದು | Kannada Prabha

ಸಾರಾಂಶ

ವಾಣಿಜ್ಯ ಬೆಳೆಯಲ್ಲಿ ಒಂದಾದ ಮೆಣಸಿನಕಾಯಿಯನ್ನು ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ.

ಬಾದನಹಟ್ಟಿ ಪಂಪನಗೌಡ

ಕುರುಗೋಡು: ಮೆಣಸಿನಕಾಯಿ ಬೆಳೆಯಲ್ಲಿ ಬ್ಲಾಕ್ ಥ್ರಿಪ್ಸ್ ಹಾವಳಿ ಹೆಚ್ಚಾಗಿದ್ದು, ರೈತರು ದುಬಾರಿ ಔಷಧದ ಮೊರೆ ಹೋಗುತ್ತಿದ್ದಾರೆ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ.

ತಾಲೂಕಿನಲ್ಲಿ ವಾಣಿಜ್ಯ ಬೆಳೆಯಲ್ಲಿ ಒಂದಾದ ಮೆಣಸಿನಕಾಯಿಯನ್ನು ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದಾರೆ. ಸದ್ಯ ನಾಟಿ ಮಾಡಿ 2 ರಿಂದ 3 ತಿಂಗಳಾಗಿದ್ದು, ಹೂ ಬಿಡುವ ಹಂತಕ್ಕೆ ತಲುಪಿದೆ. ಕುರುಗೋಡು ತಾಲೂಕಿನಲ್ಲಿ ಕಲ್ಲುಕಂಬ, ಬಾದನಹಟ್ಟಿ, ವದ್ದಟ್ಟಿ, ಮದಿರೆ, ಸಿದ್ದಮ್ಮನಹಳ್ಳಿ, ಕೋಳೂರು, ದಮ್ಮೂರು ವದ್ದಟ್ಟಿ, ಲಕ್ಷ್ಮೀಪುರ, ಯಲ್ಲಾಪುರ, ಸೇರಿ ಇತರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆ ಮತ್ತು ವಾತಾವರಣದಲ್ಲಿನ ಬದಲಾವಣೆಯಿಂದ ಫಸಲಿನ ಬೆಳವಣಿಗೆ ಕುಂಠಿತಗೊಂಡಿದೆ.

ಕಪ್ಪು ರಸ ಹೀರುವ ಕೀಟದ ಉಪಟಳ ರೈತರ ನಿದ್ದೆ ಕಸಿಯುತ್ತಿದೆ. ಎಲೆಯ ಹಿಂಭಾಗ ಮತ್ತು ಹೊಸ ಚಿಗುರಿನ ಮೇಲೆ ಬ್ಲಾಕ್ ಥ್ರಿಪ್ಸ್ ದಾಳಿ ಮಾಡುತ್ತಿದೆ. ಇದರಿಂದ ಸುಳಿ ಮುಟುರು ರೋಗದ ಜತೆಗೆ ಕಂದು ಬಣ್ಣಕ್ಕೆ ತಿರುಗಿ ಬೆಳೆ ಕಳೆಹೀನವಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಔಷಧ ಮೊರೆ ಹೋಗುತ್ತಿರುವ ರೈತರು ಒಮ್ಮೆ ಔಷಧ ಸಿಂಪಡಣೆಗೆ ಎಕರೆಗೆ ಎರಡರಿಂದ ಮೂರು ಸಾವಿರ ಖರ್ಚು ಮಾಡುತ್ತಿದ್ದಾರೆ. ಒಂದು ವಾರದಲ್ಲಿ ಕನಿಷ್ಠ ಎರಡು ಬಾರಿ ಸಿಂಪಡಣೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ.

ನಿರ್ದಿಷ್ಟ ಔಷಧ ಕೊರತೆ:

ಬ್ಲಾಕ್ ಥ್ರಿಪ್ಸ್ ಗೆ ನಿರ್ದಿಷ್ಟ ಔಷಧ ಈವರೆಗೂ ಮಾರುಕಟ್ಟೆಯಲ್ಲಿ ಇಲ್ಲದ ಪರಿಣಾಮ ರೈತರು ತರಾವರಿ ಔಷಧ ಖರೀದಿಸುತ್ತಿದ್ದಾರೆ. ಅದರಲ್ಲೂ ಫಿಪ್ರೊನಿಲ್, ಇಮಿಡಾಕ್ಲೋಪ್ರಿಡ್, ಬ್ರೊಫ್ಲಾನಿಲೈಡ್, ಫ್ಲುಕ್ಸಮೆಟಾಮೈಡ್, ಪ್ರೊಫೆನೊಫೋಸ್, ಥಿಯಾಮೆಥಾಕ್ಸಮ್ ಸೇರಿ ಇತರ ಔಷಧ ಹೆಚ್ಚಾಗಿ ಸಂಪಡಿಸುತ್ತಿದ್ದಾರೆ.

ಕೀಟಕ್ಕೆ ರೋಗ ನಿರೋಧಕ ಶಕ್ತಿ:

ಸಿಂಪಡಿಸಿದ ಔಷಧವನ್ನೇ ಮರು ಸಂಪಡಣೆ ಹಾಗೂ ಎಕರೆಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಬಳಕೆ ಮತ್ತು ಮೂರು ಬಾರಿಗೆ ನಾಲ್ಕು ಔಷಧ ಮಿಶ್ರಣ ಮಾಡಿ ಸಿಂಪಡಿಸುವ ಅವೈಜ್ಞಾನಿಕತೆ ರೈತರಲ್ಲಿ ಹೆಚ್ಚಿದೆ. ಇದರಿಂದ ಕೀಟಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ಔಷಧ ತನ್ನ ಕ್ಷಮತೆ ಕಳೆದುಕೊಳ್ಳುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ:

ರೈತರಿಗೆ ಸಕಾಲಕ್ಕೆ ಮಾಹಿತಿ ನೀಡಬೇಕಾದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೆಪ ಮಾತ್ರಕ್ಕೆ ಒಂದಿಬ್ಬರು ರೈತರ ಜಮೀನಿಗೆ ಭೇಟಿ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ.

ಈಗಾಗಲೇ ಎಕರೆಗೆ ₹85 ಸಾವಿರದಿಂದ ₹95 ಸಾವಿರ ಖರ್ಚು ಮಾಡಲಾಗಿದೆ. ವಾರದಲ್ಲಿ ಎರಡು ಅಥವಾ ಮೂರು ಬಾರಿ ದುಬಾರಿ ಔಷಧ ಸಿಂಪಡಿಸಿದರೂ ಬ್ಲಾಕ್ ಥ್ರಿಪ್ಸ್ ಹತೋಟಿಗೆ ಬರುತ್ತಿಲ್ಲ. ಇದರಿಂದ ಸಾಲದ ಪ್ರಮಾಣ ಹೆಚ್ಚಾಗುತ್ತಿದೆ. ನೂರೆಂಟು ಹೊಸ ಔಷಧ ಬದಲು ಕಪ್ಪು ನುಸಿಗೆ ಮೊದಲು ಕಂಡುಹಿಡಿದರೆ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಕಲ್ಲುಕಂಬ ರೈತ ವಿರೂಪಾಕ್ಷಿ.

ರೈತರು ನರ್ಸರಿ ಹಂತದಿಂದ ಗುಣಮಟ್ಟದ ಸಸಿ ಪಡೆಯಬೇಕು. ಜತೆಗೆ ಸಕಾಲಕ್ಕೆ ಬೆಳೆಗೆ ನಿಗದಿತ ಔಷಧ ಸಿಂಪಡಣೆ ಮಾಡುವುದರಿಂದ ಹತೋಟಿ ಸಾಧ್ಯ ಇದೆ. ಜತೆಗೆ ಮೆಣಸಿನಕಾಯಿ ಬೆಳೆ ಬದಲು ಪರ್ಯಾಯ ಬೆಳೆಯ ಬಗ್ಗೆಯೂ ರೈತರು ಆಸಕ್ತಿ ವಹಿಸಿಬೇಕು. ಇದರಿಂದ ರೋಗ ನಿಯಂತ್ರಣದ ಜತೆಗೆ ಭೂಮಿ ಫಲವತ್ತತೆ ಹೆಚ್ಚುತ್ತದೆ ಎನ್ನುತ್ತಾರೆ ಎಸ್‌ಎಡಿಎಚ್ ತೋಟಗಾರಿಕೆ ಇಲಾಖೆ ಬಳ್ಳಾರಿ ಜೆ.ಶಂಕರ್.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು