ಸೆಗಣಿ ಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : Apr 22, 2024, 02:21 AM IST
ಪೋಟೊ19ಕೆಎಸಟಿ1: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಸಗಣಿ ಗೊಬ್ಬರವನ್ನು ಟ್ರ್ಯಾಕ್ಟರನಲ್ಲಿ ತುಂಬುತ್ತಿರುವದು. | Kannada Prabha

ಸಾರಾಂಶ

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಕಾರಣಕ್ಕೆ ಗ್ರಾಮೀಣ ಭಾಗದ ರೈತರು ಸೆಗಣಿ ಗೊಬ್ಬರದತ್ತ ಒಲವು ತೋರುತ್ತಿದ್ದಾರೆ.

ಮುಂಗಾರು ಬಿತ್ತನೆಗೆ ಸಿದ್ಧತೆ, ರೈತರಿಂದ ಕೊಟ್ಟಿಗೆ ಗೊಬ್ಬರಕ್ಕೆ ಭಾರೀ ಬೇಡಿಕೆ, ಬೆಲೆ ಏರಿಕೆಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಕಾರಣಕ್ಕೆ ಗ್ರಾಮೀಣ ಭಾಗದ ರೈತರು ಸೆಗಣಿ ಗೊಬ್ಬರದತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ ಸೆಗಣಿ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ.

ತಾಲೂಕಿನಾದ್ಯಂತ ಸಾವಯವ ಕೃಷಿ ಪದ್ಧತಿ ಅಳವಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ ಸೆಗಣಿ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ ರೈತರು ತಿಪ್ಪೆ ಗೊಬ್ಬರವನ್ನು ಖರೀದಿಸಿ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಹೊಲ, ತೋಟಗಳಿಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.

ಬೆಲೆ ಏರಿಕೆಗೆ ಕಾರಣ:

ರೈತರಲ್ಲಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಅರಿವು ಮೂಡಿದ್ದು, ಸಾವಯವ ಕೃಷಿ ಪದ್ಧತಿ ಅಳವಡಿಕೆಯಾಗುತ್ತಿದ್ದಂತೆ ಮತ್ತೆ ರೈತರು ಸಾಂಪ್ರದಾಯಿಕವಾಗಿ ಸೆಗಣಿ ಗೊಬ್ಬರದತ್ತ ಗಮನ ನೀಡುತ್ತಿದ್ದಾರೆ. ಆದರೆ ಹಿಂದಿನಂತೆ ಹಳ್ಳಿಗಳಲ್ಲಿ ಈಗ ಜಾನುವಾರುಗಳಿಲ್ಲ. ಹೀಗಾಗಿ ಸೆಗಣಿ ಗೊಬ್ಬರದ ಕೊರತೆ ಉಂಟಾಗುತ್ತಿದೆ.

ಭೂಮಿ ಸಿದ್ಧತೆ:

ಯುಗಾದಿ ಸಂದರ್ಭದಲ್ಲಿ ಕೊಟ್ಟಿಗೆ ಗೊಬ್ಬರ ತೆಗೆಸಿ ಹೊಲಕ್ಕೆ ಹಾಕುವುದು ಸಂಪ್ರದಾಯ. ಸದ್ಯ ತಾಲೂಕಿನಲ್ಲಿ ಸ್ವಲ್ಪ ಮಳೆಯಾದ ಪರಿಣಾಮ ರೈತರು ತಮ್ಮ ಹೊಲಗಳನ್ನು ಹದಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಹೀಗಾಗಿ ಸಗಣಿ ಗೊಬ್ಬರಕ್ಕೆ ಒಮ್ಮೇಲೆ ಬೇಡಿಕೆ ಹೆಚ್ಚಿದೆ.

ಬೆಳೆಗಳ ಬಿತ್ತನೆಯ 3ರಿಂದ 4 ವಾರದ ಮುಂಚೆಯೇ ಕೊಟ್ಟಿಗೆಯ ಗೊಬ್ಬರವನ್ನು ಹೊಲಕ್ಕೆ ಹಾಕಬೇಕು. ಕೊಟ್ಟಿಗೆ ಗೊಬ್ಬರವು ತೇವಾಂಶಯುತ ಮಣ್ಣಿನಲ್ಲಿ ಚೆನ್ನಾಗಿ ಕೊಳೆಯುತ್ತದೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಬಿತ್ತನೆ ಮಾಡಿದ ಸಸಿಗಳು ಹುಲುಸಾಗಿ ಬೆಳೆಯುತ್ತದೆ. ಕೊಟ್ಟಿಗೆ ಗೊಬ್ಬರವು ಗಿಡಗಳ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ರೈತರು ಸೆಗಣಿ ಗೊಬ್ಬರ ಹೆಚ್ಚು ಬಳಸಲಾರಂಭಿಸಿದ್ದಾರೆ.

ಜಮೀನಿಗೆ ಜಾನುವಾರುಗಳ ಹಿಂಡು:

ರಾಸಾಯನಿಕ ಗೊಬ್ಬರಗಳ ಹಾವಳಿಯಿಂದಾಗಿ ಸೆಗಣಿ ಗೊಬ್ಬರ ಮರೆತ ರೈತರು ಮತ್ತೆ ಹಳೆಯ ಸಂಪ್ರದಾಯ ಅಳವಡಿಸಲು ಮುಂದಾಗುತ್ತಿದ್ದಾರೆ. ರೈತರು ಜಮೀನುಗಳಲ್ಲಿ ಕುರಿ ಅಥವಾ ಹಸುಗಳ ಹಿಂಡುಗಳನ್ನು ನಿಲ್ಲಿಸುವ ಮೂಲಕ ಸಗಣಿ ಗೊಬ್ಬರ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಹಸು, ಕುರಿಗಳ ಮಾಲೀಕರಿಗೆ ಹಣ ಅಥವಾ ಧಾನ್ಯ ನೀಡುತ್ತಾರೆ. ಕೆಲವರು ಸಾವಿರಾರು ರುಪಾಯಿಯನ್ನು ಖರ್ಚು ಮಾಡಿ ಸಗಣಿ ಗೊಬ್ಬರ ಖರೀದಿಸುತ್ತಿದ್ದಾರೆ.

1 ಟ್ರ್ಯಾಕ್ಟರ್‌ಗೆ ₹5 ಸಾವಿರ:

ಒಂದು ಟ್ರ್ಯಾಕ್ಟರ್ ಸೆಗಣಿ ಗೊಬ್ಬರ ಮೊದಲು ₹2-3 ಸಾವಿರಕ್ಕೆ ಸಿಗುತ್ತಿತ್ತು. ಆದರೆ, ಈ ಬಾರಿ ಅದರ ಬೆಲೆ ₹5-6 ಸಾವಿರಕ್ಕೆ ಏರಿದೆ. ಆದರೂ ಲಭ್ಯತೆ ಕಡಿಮೆ ಇದೆ. ರೈತರು ಗೊಬ್ಬರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!