ತೊಗರಿ ಬೀಜಕ್ಕೆ ಹೆಚ್ಚಿದ ಬೇಡಿಕೆ!

KannadaprabhaNewsNetwork |  
Published : Jun 12, 2024, 12:31 AM IST
೧ಬಿಎಸ್ವಿ೦೧- ಬಸವನಬಾಗೇವಾಡಿಯಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಚಿದಾನಂದ ಹಿರೇಮಠ ಅವರು ರೈತರಿಗೆ ಶನಿವಾರ ಬೀಜ ವಿತರಿಸಿದರು.  | Kannada Prabha

ಸಾರಾಂಶ

ಮುಂಗಾರು ಮಳೆ ಉತ್ತಮವಾಗಿ ಆರಂಭಗೊಂಡಿರುವ ಕಾರಣಕ್ಕೆ ಅಖಂಡ ತಾಲೂಕಿನಲ್ಲಿ ಬಹುತೇಕ ರೈತರು ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ತೊಗರಿ ಬೀಜಕ್ಕೆ ಬಹು ಬೇಡಿಕೆ ಕಂಡು ಬರುತ್ತಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇಡಿ

ಮುಂಗಾರು ಮಳೆ ಉತ್ತಮವಾಗಿ ಆರಂಭಗೊಂಡಿರುವ ಕಾರಣಕ್ಕೆ ಅಖಂಡ ತಾಲೂಕಿನಲ್ಲಿ ಬಹುತೇಕ ರೈತರು ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ತೊಗರಿ ಬೀಜಕ್ಕೆ ಬಹು ಬೇಡಿಕೆ ಕಂಡು ಬರುತ್ತಿದೆ. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೀಜ ಪಡೆಯಲು ಸರದಿಯಲ್ಲಿ ನಿಂತು ಮೊದಲು ಟೋಕನ್ ಪಡೆದುಕೊಂಡ ನಂತರ ತಮ್ಮ ಆಧಾರ್‌ ಕಾರ್ಡ್ ನೀಡಿ ತಮಗೆ ಅಗತ್ಯವಿರುವ ಬೀಜಗಳಿಗೆ ರಸೀದಿ ಮಾಡಿಸಿಕೊಂಡು ಹಣ ಪಾವತಿ ಮಾಡಿದ ನಂತರ ಬೀಜ ವಿತರಣೆ ಕಾರ್ಯ ಮಾಡುತ್ತಿರುವುದು ಕಂಡುಬಂದಿತ್ತು.ಒಣಬೇಸಾಯಕ್ಕೆ ಟಿಎಸ್‌ತ್ರಿಆರ್ ತೊಗರಿ ಬೀಜ ರೈತರು ಖರೀದಿ ಮಾಡುತ್ತಿದ್ದಾರೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ ಬೀಜ ಸದ್ಯ ದಾಸ್ತಾನು ಇದೆ. ಬೀಜಕ್ಕೆ ತೊಂದರೆಯಾಗಿಲ್ಲ. ಅಗತ್ಯವಿರುವ ಗೊಬ್ಬರ ಗೊಬ್ಬರ ಮಳಿಗೆಗಳಲ್ಲಿ ದಾಸ್ತಾನು ಇದೆ.

ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ೨.೫೦ ಕ್ವಿಂಟಲ್ ಸಜ್ಜೆ, ೩೦೦ ಕ್ವಿಂಟಲ್ ಗೋವಿನಜೋಳ, ೩೫೦ಕ್ವಿಂಟಲ್ ತೊಗರಿ, ೨ ಕ್ವಿಂಟಲ್ ಹೆಸರು, ೨ ಕ್ವಿಂಟಲ್ ಉದ್ದು, ೧.೫೦ ಕ್ವಿಂಟಲ್ ಸೂರ್ಯಕಾಂತಿ ಸೇರಿ ೬೫೮ ಕ್ವಿಂಟಲ್ ಬೀಜಗಳ ಬೇಡಿಕೆಯಿದ್ದರೆ, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೧ ಕ್ವಿಂಟಲ್ ನವಣೆ, ೫ ಕ್ವಿಂಟಲ್ ಸಜ್ಜೆ, ೨೫೦ ಕ್ವಿಂಟಲ್ ಗೋವಿನಜೋಳ, ೪೫೦ ಕ್ವಿಂಟಲ್ ತೊಗರಿ, ೫ ಕ್ವಿಂಟಲ್ ಹೆಸರು, ೨ ಕ್ವಿಂಟಲ್ ಉದ್ದು, ೨೦ ಕ್ವಿಂಟಲ್ ಶೇಂಗಾ, ೫ ಕ್ವಿಂಟಲ್ ಸೂರ್ಯಕಾಂತಿ ಸೇರಿ ೭೩೮ ಕ್ವಿಂಟಲ್ ಬೀಜ ಬೇಡಿಕೆಯಿದೆ.

ಕೊಲ್ಹಾರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ೧೦ ಕ್ವಿಂಟಲ್ ಸಜ್ಜೆ, ೮೫೦ ಕ್ವಿಂಟಲ್ ಗೋವಿನಜೋಳ, ೨೫೦ ಕ್ವಿಂಟಲ್ ತೊಗರಿ, ೫ ಕ್ವಿಂಟಲ್ ಹೆಸರು, ೨ ಕ್ವಿಂಟಲ್ ಸೂರ್ಯಕಾಂತಿ ಸೇರಿ ೧೧೧೭ ಕ್ವಿಂಟಲ್ ಬೀಜದ ಬೇಡಿಕೆಯಿದೆ. ಮನಗೂಳಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೫ ಕ್ವಿಂಟಲ್ ಸಜ್ಜೆ, ೫೦೦ ಕ್ವಿಂಟಲ್ ಗೋವಿನಜೋಳ, ೧೦೦೦ ಕ್ವಿಂಟಲ್ ತೊಗರಿ, ೫ ಕ್ವಿಂಟಲ್ ಹೆಸರು, ೫ ಕ್ವಿಂಟಲ್ ಉದ್ದು, ೧೦ ಕ್ವಿಂಟಲ್ ಶೇಂಗಾ, ೫ ಕ್ವಿಂಟಲ್ ಸೂರ್ಯಕಾಂತಿ ಸೇರಿ ೧೫೩೦ ಕ್ವಿಂಟಲ್ ಬೀಜದ ಬೇಡಿಕೆಯಿದೆ. ನಿಡಗುಂದಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೬೦೦ ಕ್ವಿಂಟಲ್ ಗೋವಿನಜೋಳ, ೧೫೦ ಕ್ವಿಂಟಲ್ ತೊಗರಿ, ೫ ಕ್ವಿಂಟಲ್ ಹೆಸರು, ೨ ಕ್ವಿಂಟಲ್ ಸೂರ್ಯಕಾಂತಿ ಸೇರಿ ೭೫೭ ಕ್ವಿಂಟಲ್ ಬೀಜದ ಬೇಡಿಕೆಯಿದೆ. ಅಖಂಡ ತಾಲೂಕಿಗೆ ಎಲ್ಲ ಬೀಜಗಳು ಸೇರಿ ಒಟ್ಟು 4,800 ಕ್ವಿಂಟಲ್ ಬೇಡಿಕೆಯಿದೆ.

ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ೩೦.೭೨ ಕ್ವಿಂಟಲ್ ಗೋವಿನ ಜೋಳ ಬಂದಿದೆ.

--

ಕೋಟ್‌

ರೈತರಿಂದ ತೊಗರಿ ಬೀಜಕ್ಕೆ ಬೇಡಿಕೆ ಜಾಸ್ತಿ ಬರುತ್ತಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ೫೭೮೮.೨೫ ಕ್ವಿಂಟಲ್ ಬೀಜವನ್ನು ಸ್ವೀಕರಿಸಿದ್ದು, ೪೦೯೫.೬೭ ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ೧೭೦೨.೫೮ ಕ್ವಿಂಟಲ್‌ನಷ್ಟು ತೊಗರಿ ಬೀಜ ಲಭ್ಯತೆಯಿದೆ. ಮುಂದೆ ರೈತರ ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಬೀಜವನ್ನು ದಾಸ್ತಾನು ಮಾಡುವುದಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

-ರಾಜಶೇಖರ ವಿಲಿಯಮ್ಸ್, ಜಂಟಿ ಕೃಷಿ ನಿರ್ದೇಶಕ

---

ಕೆಲ ದಿನಗಳ ಹಿಂದೆ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಬೀಜ ಖಾಲಿಯಾದರೆ ತೊಂದರೆಯಾಗುತ್ತದೆ. ಅದಕ್ಕಾಗಿ ಈಗಲೇ ಬೀಜ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ. ಬಿತ್ತನೆ ಅಗತ್ಯವಿರುವ ಮಳೆಯಾದ ನಂತರ ಬಿತ್ತನೆ ಕಾರ್ಯ ಮಾಡಲಾಗುವುದು. ಈ ಸಲ ಬೀಜದ ದರ ಹೆಚ್ಚಳವಾಗಿದೆ. ಇದು ಹೊರೆಯಾಗಿದೆ.

-ಇಬ್ರಾಹಿಂ ಹಳ್ಳಿ, ಬಸವನಹಟ್ಟಿಯ ರೈತ

---

ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಎಲ್ಲ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ಬೀಜಗಳು ದಾಸ್ತಾನು ಇದೆ. ಬೀಜ ವಿತರಣೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಈಗಾಗಲೇ 400-500 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

-ಎಂ.ಎಚ್.ಯರಝರಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

---

ತೊಗರಿ ಬೀಜಕ್ಕೆ ಯಾಕೆ ಬೇಡಿಕೆ ಹೆಚ್ಚಳ

ಮುಂಗಾರು ಮಳೆ ಬೇಗ ಪ್ರವೇಶವಾಗಿರುವುದು, ಈ ಬಾರಿ ಗುಣಮಟ್ಟದ ಹಾಗೂ ರೋಗ ತಡೆಗಟ್ಟುವ ತೊಗರಿ ಬೀಜ ಬಂದಿರುವುದರಿಂದ ತೊಗರಿ ಬೀಜಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಟ್ಟಿಗೆ ಪ್ರಸ್ತುತ್‌ ತೊಗರಿ ಬೆಳೆಯ ಬೆಲೆ ಏರಿಕೆ ಕಾಣುತ್ತಿದೆ. ಮುಂದೆಯೂ ಹೆಚ್ಚಾಗುವ ಸಂಭವ ಇರುವ ಕಾರಣಕ್ಕೆ ತೊಗರಿ ಬೀಜ ಖರೀದಿಗೆ ರೈತರು ಮುಂದಾಗುತ್ತಿದ್ದಾರೆ.

---

ಕುಡಿ ಚುಟುವುದರಿಂದ ತೊಗರಿ ಬೆಳೆಯ ಇಳುವರಿ ಹೆಚ್ಚಳ

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ತೊಗರಿ ಬೆಳೆಯುವ ರೈತರು ಕೆಲವು ಉತ್ಪಾದನಾ ತಾಂತ್ರಿಕತೆಗಳನ್ನು ಕೃಷಿಯಲ್ಲಿ ಅಳವಡಿಸಿ ಕೊಂಡರೆ ಹೆಚ್ಚಿನ ಇಳುವರಿ ಪಡೆಯಲು ಸಹಾಯಕವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ತಿಳಿಸಿದರು.

ಅಧಿಕ ಇಳುವರಿ ನೀಡುವ ಬೆಳೆಯ ತಳಿಗಳಾದ ಜಿ.ಆರ್.ಜಿ-೮೧೧, ಜಿ. ಆರ್. ಜಿ. ೮೧೧ ಗಳಂತಹ ತಳಿಗಳನ್ನು ಬಿತ್ತನೆ ಮಾಡಬೇಕು. ತೊಗರಿ ಬೆಳೆಗೆ ಇಳುವರಿ ಹೆಚ್ಚಿಸಲು ರೈತರು ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜಗಳನ್ನು ಶೇ.೨ ರಷ್ಟು ಕ್ಲೋರೈಡ್ ದ್ರಾವಣದಲ್ಲಿ ಒಂದು ತಾಸು ನೆನಸಿ, ನಂತರ ನೆರಳಿನಲ್ಲಿ ಕನಿಷ್ಠ ೭ ತಾಸು ಒಣಗಿಸಬೇಕು. ನಂತರ ಪ್ರತಿ ಕಿಗ್ರಾಂ ಬೀಜಕ್ಕೆ ೩ ಗ್ರಾಂ ಶಿಲೀಂದ್ರ ಮಿಶ್ರಣವಾದ ಕಬೆಂಡಜಿಂ, ಮ್ಯಂಕೋಜೆಬ್ ಅಥವಾ ಜೈವಿಕ ಗೊಬ್ಬರವಾದ ಟ್ರೈಕೊಡರ್ಮ, ರೈಜೋಬಿಯಮ್ ಗಳಿಂದ ಬೀಜೋಪಚಾರ ಮಾಡಿಕೊಳ್ಳಬೇಕು ಎಂದರು.

ಬೆಳವಣಿಗೆ ಹಂತದಲ್ಲಿ ಅಂದರೆ ಬೆಳೆಯ ೪೫-೫೫ನೇ ದಿನಗಳಲ್ಲಿ ತಪ್ಪದೇ ಕುಡಿ ಚುಟುವುದರಿಂದ ಹೆಚ್ಚಿನ ಪ್ರಮಾಣದ ಇಳುವರಿ ಪಡೆಯಲು ಸಹಾಯಕವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ನಗರದಲ್ಲಿ ಬೀದಿ ನಾಯಿಗೆ ಶೆಲ್ಟರ್‌ : ಸರ್ಕಾರದೊಂದಿಗೆ ಚರ್ಚಿಸಿ ಕ್ರಮ
ಒಳಮೀಸಲಡಿ 101 ಜಾತಿಗೂ ನ್ಯಾಯ : ತಂಗಡಗಿ