ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೆವಿಕೆ ಪಾತ್ರ ಪ್ರಮುಖ: ಸ್ಫೂರ್ತಿ ಜಿ.ಎಸ್.

KannadaprabhaNewsNetwork | Published : Jun 12, 2024 12:31 AM

ಸಾರಾಂಶ

ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ ಎಂದು ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದತ್ತು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಆ ಗ್ರಾಮಗಳ ರೈತರಿಗೆ ಅರಿವು ಮೂಡಿಸುವುದು, ಹೊಸ ತಂತ್ರಜ್ಞಾನ, ಪರಿಕರ ಸೌಲಭ್ಯ, ವಿಸ್ತರಣಾ ಸೇವೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ ಎಂದು ಕೃಷಿ ಉಪನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಹೇಳಿದರು.ತಾಲೂಕಿನ ಹುಲಕೋಟಿ ಗ್ರಾಮದ ಕೆವಿಕೆ ಸಭಾಂಗಣದಲ್ಲಿ ಐ.ಸಿ.ಎ.ಆರ್., ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆದ ಆದಾಯ ದ್ವಿಗುಣಗೊಂಡ ರೈತರಿಗೆ ಶ್ರೇಷ್ಠ ಕೃಷಿಕರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರ ಪ್ರೋತ್ಸಾಹ, ಪ್ರಯತ್ನ ಮತ್ತು ಸಹಕಾರದಿಂದ ಇಂದು ಗದಗ ಜಿಲ್ಲೆಯ ರೈತರಿಗೆ ಶ್ರೇಷ್ಠ ಕೃಷಿಕರು ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ಮಾಡಲಾಯಿತು ಎಂದರು.

ಪ್ರಸಕ್ತ ವರ್ಷ ಕೇಂದ್ರ ಸರಕಾರ ಎಣ್ಣೆಕಾಳು ಬೆಳೆಗಳ ಉತ್ಪಾದನೆ ಹೆಚ್ಚಿಸುವ ನಿಟ್ಟನಲ್ಲಿ ಕೃಷಿ ಇಲಾಖೆಯಿಂದ ಸೂರ್ಯಕಾಂತಿ ಬೀಜಗಳನ್ನು ಹಾಗೂ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದು ಮತ್ತು ರೈತರು ಗುಂಪಾಗಿ ಬಿತ್ತನೆ ಮಾಡಲು ತಯಾರಿದ್ದರೆ ತಾವೇ ಖುದ್ದಾಗಿ ಬೀಜ ವಿತರಿಸಿ, ಸೂರ್ಯಕಾಂತಿ ಬೇಸಾಯ ಹಾಗೂ ಕೀಟ ರೋಗದ ಕುರಿತು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಮಂಗಳಾ ನೀಲಗುಂದ ಮಾತನಾಡಿ, ಕೃಷಿಯ ಜೊತೆಗೆ ಕೃಷಿಯೇತರ ಉಪಕಸುಬುಗಳಾದ ಹೈನುಗಾರಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಆಹಾರ ಪದಾರ್ಥಗಳ ಮೌಲ್ಯವರ್ಧನೆ, ಎರೆಗೊಬ್ಬರ ತಯಾರಿಕೆ ಹೀಗೆ ಕೃಷಿಯ ಜೊತೆಗೆ ಹಲವಾರು ಉದ್ದಿಮೆಗಳನ್ನು ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.

ಎ.ಎಸ್.ಎಫ್. ಕಾರ್ಯದರ್ಶಿ ಡಾ. ಎಲ್.ಜಿ. ಹಿರೇಗೌಡರ, ನಿವೃತ್ತ ವಿಜ್ಞಾನಿ ಎಸ್.ಎಚ್. ಆದಾಪೂರ ಹಾಗೂ ಎಸ್.ಕೆ. ಮುದ್ಲಾಪೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಒಟ್ಟು 85 ಜನ ರೈತರಿಗೆ ಶ್ರೇಷ್ಠ ಕೃಷಿಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ವಿಜ್ಞಾನಿ ಡಾ. ಸುಧಾ ಮಂಕಣಿ ಸೇರಿದಂತೆ ಇತರರು ಇದ್ದರು. ಎನ್.ಎಚ್. ಭಂಡಿ ವಂದಿಸಿದರು. ಡಾ. ವಿನಾಯಕ ನಿರಂಜನ ನಿರೂಪಿಸಿದರು.

Share this article