- ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿತ್ತು- ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಪರಿಹಾರ ನೀಡದೇ ನಿರಂತರ ಸತಾವಣೆ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಬಳ್ಳಾರಿ ಜಿಲ್ಲೆಯ ಕುಡುತಿನಿ ಇತರೆ ಭಾಗಗಳಲ್ಲಿ ಕೈಗಾರಿಕಾ ಕಾರಿಡಾರ್‌ಗಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ನ್ಯಾಯಾಲಯ ಆದೇಶದ ಹೊರತಾಗಿಯೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ದಾವಣಗೆರೆ ಕೆಐಎಡಿಬಿ ಕಚೇರಿಯನ್ನು ಸ್ವತಃ ರೈತರೇ ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.ನಗರದ ಕೆಐಎಡಿಬಿ ಕಚೇರಿಗೆ ಧಾವಿಸಿದ್ದ ರೈತರು ಬಳ್ಳಾರಿ ಜಿಲ್ಲೆ ಕುಡುತಿನಿ ಇತರೆ ಭಾಗಗಳಲ್ಲಿ ಕೈಗಾರಿಕಾ ಕಾರಿಡಾರ್ ಗಾಗಿ 2010ರಲ್ಲಿ ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿತ್ತು. ಜಮೀನು ಕಳೆದುಕೊಂಡಿದ್ದ ರೈತರು ಕಡಿಮೆ ಪರಿಹಾರ ನಿಗದಿಪಡಿಸಿರುವುದಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಭೂ ಸ್ವಾಧೀನಪಡಿಸಿಕೊಂಡಿದ್ದ ಕೆಐಎಡಿಬಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಬಳ್ಳಾರಿ ಜಿಲ್ಲಾ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ಆದರೆ, ಕೆಐಎಡಿಬಿ ಅಧಿಕಾರಿಗಳು ರೈತರಿಗೆ ಪರಿಹಾರವನ್ನು ನೀಡಿರಲಿಲ್ಲ.
ಇದೀಗ ನ್ಯಾಯಾಲಯದ ಆದೇಶದಂತೆ ಕೆಐಎಡಿಬಿ ಕಚೇರಿಯನ್ನು ಜಪ್ತಿ ಮಾಡಿ, ಕಚೇರಿಯ ಕುರ್ಚಿ, ಟೇಬಲ್, ಗಾಡ್ರೆಜ್ ಅಲ್ಮೆರಾ ಸೇರಿದಂತೆ ಕಚೇರಿ ಪೀಠೋಪಕರಣ, ವಸ್ತುಗಳನ್ನು ಲಾರಿಯಲ್ಲಿ ತುಂಬಿಕೊಂಡ ರೈತರು ಬಳ್ಳಾರಿ ಜಿಲ್ಲೆಯತ್ತ ಪಯಣ ಬೆಳೆಸಿದರು.