ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ತಗ್ಗು ಪ್ರದೇಶದ ಜನರಲ್ಲಿ ಆತಂಕ ಮೂಡಿದೆ. ಈಗಾಗಲೇ ಮಹಾನಗರ ಪಾಲಿಕೆಯಿಂದ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ.ನಗರದಲ್ಲಿ ನೆರೆ ಆಂತಕ:
ತುಂಗಾ ಜಲಾಶಯದಿಂದ ಪ್ರಸ್ತುತ 83 ಸಾವಿರ ಕ್ಯುಸೆಕ್ ನೀರು ಹೊಳೆಗೆ ಹರಿಸಲಾಗುತ್ತಿದೆ. ನದಿಪಾತ್ರದಲ್ಲಿರುವ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಆತಂಕ ಮೂಡಿದೆ. ಸೀಗೆಹಟ್ಟಿ ಭಾಗದಲ್ಲಿ ಹಲವು ಮನೆಗಳಿಗೆ ಈಗಾಗಲೇ ನೀರು ನುಗ್ಗಿದೆ. ಮತ್ತೊಂದೆಡೆ ಪ್ರತಿಷ್ಠಿತ ಬಡಾವಣೆಗಳಿಗೆ ನೆರೆ ಭೀತಿ ಉಂಟಾಗಿದೆ.ಶಾಂತಮ್ಮ ಲೇಔಟ್, ರಾಜೀವ್ ಗಾಂಧಿ ಬಡಾವಣೆ, ವಿದ್ಯಾನಗರದ 13 ಮತ್ತು 14ನೇ ಕ್ರಾಸ್, ಕಂಟ್ರಿ ಕ್ಲಬ್ ರಸ್ತೆ, ಜ್ಞಾನ ವಿಹಾರ ಬಡಾವಣೆ, ಆರ್.ಟಿ.ನಗರ, ನಿಸರ್ಗ ಬಡಾವಣೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ಕಸದ ವಾಹನಗಳಲ್ಲಿ ಮೈಕ್ ಮೂಲಕ ಕಳೆದ ರಾತ್ರಿಯಿಂದಲೇ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ನದಿ ಪಾತ್ರದ ಬಡಾವಣೆಗಳ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸೂಚಿಸಲಾಗುತ್ತಿದೆ.
ಶಾಸಕರಿಂದ ನಗರ ಪರ್ಯಾಟನೆ:ಭಾರಿ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ನೆರೆ ಭೀತಿ ಉಂಟಾಗಿರುವ ಹಿನ್ನೆಲೆ ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತರು ಪ್ರತ್ಯೇಕವಾಗಿ ಸಿಟಿ ರೌಂಡ್ಸ್ ನಡೆಸಿದರು. ಇನ್ನು, ಶಿವಮೊಗ್ಗ ಪಂಪ್ ಹೌಸ್ ಮತ್ತು ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಇತ್ತ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುಂಗಾ ನದಿ ತೀರದಲ್ಲಿರುವ ಬಡಾವಣೆಗಳಿಗೆ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ರಾತ್ರಿ ತೆರಳಿ, ಪರಿಶೀಲಿಸಿದರು. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ವಿವಿಧೆಡೆಗೆ ಭೇಟಿ ನೀಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಸೀಗೆಹಟ್ಟಿಯ ಐದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ಕಾಳಜಿ ಕೇಂದ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕಳೆದ 2 ವಾರದಿಂದ ಬಿಸಿಲು ಮರೆಯಾಗಿತ್ತು. ಇವತ್ತು ಬೆಳಗೆಯಿಂದ ಆಗಸದಲ್ಲಿ ಮೋಡಗಳು ಮರೆಯಾಗಿವೆ. ಪುನಃ ಬಿಸಿಲು ಕಾಣಿಸಿಕೊಂಡಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಮುಗ್ಗಲು ಹಿಡಿದ ಬಟ್ಟೆಗಳನ್ನು ಒಣಗಿಸುತ್ತಿದ್ದಾರೆ.
ಮನೆಗಳಿಗೆ ನುಗ್ಗಿದ ಪ್ರವಾಹದ ನೀರುಹೊಳೆಹೊನ್ನೂರು: ತುಂಗಾಭದ್ರಾ ನದಿಗಳು ತುಂಬಿ ಹರಿಯುವತ್ತಿರುವುದರಿಂದ ಪಟ್ಟಣ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಎಡಿ ಕಾಲೋನಿಯಲ್ಲಿ 13ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದ ಪರಿಣಾಮ ತಡರಾತ್ರಿಯಲ್ಲಿ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ವಡೇರಪುರದ ಎಡಿ ಕಾಲೋನಿಯಲ್ಲಿ 4 ಮನೆಗಳು ಜಲಾವೃತವಾಗಿವೆ. ವಡೇರಪುರದ ಎಕೆ ಕಾಲೋನಿಯ ನಿವಾಸಿ ಮನೆಗಳ ಸಮೀಪ ನದಿ ನೀರು ಬಂದಿದು ಕೆಲವರನ್ನು ಅಕ್ಕಪಕ್ಕದ ಅಡಿಕೆ ಮನೆ ಹಾಗೂ ಸಂಬಂದಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಪಟ್ಟಣದ ಎಡಿ ಕಾಲೋನಿಯ 10 ಕುಟುಂಬಗಳನ್ನು ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.ಪಟ್ಟಣ, ವಡೇರಪುರ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಉಪ ವಿಭಾಗಧಿಕಾರಿ ಸತ್ಯನಾರಾಯಣ ಭೇಟಿ ನೀಡಿ, ಕಾಳಜಿ ಕೇಂದ್ರದಲ್ಲಿನ ಜನರಿಗೆ ಸಾಂತ್ವನ ಹೇಳಿದರು. ಸಮೀಪದ ವಡೇರಪುರದ ಎಡಿ ಕಾಲೋನಿಗೆ ತೆರಳಿ ನದಿಪಾತ್ರವನ್ನು ವೀಕ್ಷಿಸಿದರು. ವಡೇರಪುರ ಎಡಿ ಕಾಲೋನಿ ಬಳಿ ನದಿ ದಂಡೆಯಲ್ಲಿ ನಿರ್ಮಾಣ ಮಾಡಿರುವ ಚಿಕ್ಕ ತಡೆಗೋಡೆಯಿಂದ ಯಾವುದೇ ಪ್ರಯೋಜನವಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಸ್ಥಳ ಪರೀಶಿಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ನದಿಪಾತ್ರದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ವಡೇರಪುರ ಹಾಗೂ ಪಟ್ಟಣದ ಎಡಿ ಕಾಲೋನಿ ನಿವಾಸಿಗಳ ಸಂಕಷ್ಠಕ್ಕೆ ಸೂಕ್ತ ಶಾಶ್ವತ ಪರಿಹಾರ ನೀಡಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಜಸ್ವ ನೀರಿಕ್ಷಕ ರವಿಕುಮಾರ್, ಉಪ ತಹಸಿಲ್ದಾರ್ ವಿಜಯ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಷ್ಪ, ಗ್ರಾಮಲೆಕ್ಕಿಗ ವಿಜಯ್ ಕುಮಾರ್, ಸ್ನೇಹ, ಹಾಲಸಿದ್ದಪ್ಪ, ಅಣ್ಣಪ್ಪ, ಪ್ರಕಾಶ್, ನಂದೀಶ್, ಬಸವನಗೌಡ ಇತರರಿದ್ದರು.ಕಾಲು ಜಾರಿ ಹಳ್ಳಕ್ಕೆ ಬಿದ್ದು ರೈತನ ಸಾವುತೀರ್ಥಹಳ್ಳಿ: ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ದೇವಂಗಿಯ ಉಂಟೂರು ಗ್ರಾಮದಲ್ಲಿ ನಡೆದಿದೆ.ಕೃಷ್ಣಮೂರ್ತಿ ನಾಯ್ಕ್ (55) ಮೃತಪಟ್ಟ ರೈತ ಎಂದು ಗುರುತಿಸಲಾಗಿದೆ. ತುಂಗಾ ನದಿಯ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಉಂಟೂರು ಹಳ್ಳದಲ್ಲೂ ಭಾರೀ ನೀರು ಹರಿಯುತ್ತಿದ್ದು, ಮಂಗಳವಾರ ಸಂಜೆ ದೇವಂಗಿಗೆ ಕೂಲಿ ಕೆಲಸಕ್ಕೆ ಹೋಗಿ ಸಂಜೆ ಬರುವಾಗ ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು. ಮನೆಯವರೆಲ್ಲ ರಾತ್ರಿ ಇಡೀ ಹುಡುಕಿದರೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ ಶವ ಪತ್ತೆಯಾಗಿದೆ.ಕೃಷ್ಣಮೂರ್ತಿ ನಾಯ್ಕ್ ಇವರು ಮಂದಾರ್ತಿ ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಆಗಲಿದ್ದಾರೆ. ಸ್ಥಳಕ್ಕೆ ಪೊಲೀಸರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಶಾಲತಾ, ಕಂದಾಯ ಇಲಾಖೆ ಅಧಿಕಾರಿ ಸಂತೋಷ್ ಕುಮಾರ್, ಆರ್‌ಐ ಸುಗುಣೇಶ್, ಪಟ್ಟಣ ಪಂಚಾಯತ್ ಸದಸ್ಯ ಬಿ. ಗಣಪತಿ ಸೇರಿ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.