ಮಳೆಯಿಂದ ಹಾನಿಯಾದ ಮನೆಗಳ ನಿರ್ಮಾಣಕ್ಕೆ ಹೊಸ ಮಾರ್ಗಸೂಚಿ: ಶಿವಾನಂದ ಪಾಟೀಲ

KannadaprabhaNewsNetwork | Published : Aug 1, 2024 12:15 AM

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ ಅತಿವೃಷ್ಟಿಗೆ ಜೀವ ಹಾನಿ, ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಕೊಳ್ಳಲಾಗಿದೆ. ಹಾನಿಗೊಳಗಾದ ಮನೆಗಳಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾನಗಲ್ಲ: ಅತಿವೃಷ್ಟಿಯಿಂದ ಸಂಪೂರ್ಣ ಹಾನಿಯಾದ ಮನೆಗಳ ನಿರ್ಮಾಣ ಕುರಿತು ಹೊಸ ಮಾರ್ಗಸೂಚಿಗಳ ಬಗ್ಗೆ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಹಾನಗಲ್ಲದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಅನಾವೃಷ್ಟಿಯಾಗಿತ್ತು. ಈ ವರ್ಷ ಅತಿವೃಷ್ಟಿಯಿಂದ ರಾಜ್ಯದಲ್ಲಿ ಹಾನಿಯಾಗಿದೆ. ಜಿಲ್ಲೆಯಲ್ಲಿ ಜೀವಹಾನಿ, ಮನೆಹಾನಿ ಹಾಗೂ ಬೆಳೆಹಾನಿ ಸಂಭವಿಸಿದೆ. ಜೀವಹಾನಿಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಶಿಥಾಲಾವಸ್ಥೆಯ ಮಣ್ಣಿನ ಮನೆಗಳಲ್ಲಿ ವಾಸಿಸುವವರಿಗೆ ಶಾಲೆ-ಅಂಗನವಾಡಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಲಾಗಿದೆ. ಮಳೆಯ ಸಂದರ್ಭದಲ್ಲಿ ಶಿಥಿಲಾವಸ್ಥೆ ಮಣ್ಣಿನ ಮನೆಗಳಲ್ಲಿ ಸಾರ್ವಜನಿಕರು ವಾಸಿಸಬಾರದು ಎಂದು ಹೇಳಿದರು.

ಅತಿವೃಷ್ಟಿಯಿಂದ ಆಗಿರುವ ಶೇ. ೫೩ರಷ್ಟು ಬೆಳೆಹಾನಿ ಸರ್ವೇ ಮಾಡಲಾಗಿದೆ. ಮಳೆ ನಿಂತ ಆನಂತರ ಸಂಪೂರ್ಣ ಸರ್ವೇ ಮಾಡಲಾಗುವುದು. ನಾಗನೂರ-ಕೂಡಲ ಸೇತುವೆ ಭೂಸ್ವಾಧೀನ ಪ್ರಕರಣ ಬಾಕಿ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಶೇ. ೬೫ರಿಂದ ೭೦ರಷ್ಟು ಕೆರೆಗಳನ್ನು ತುಂಬಿಸಲಾಗಿದೆ. ಬರುವ ದಿನಗಳಲ್ಲಿ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ತಡಸ, ಆನೂರ ಹಾಗೂ ಹಂಸಭಾವಿ ನೀರಾವರಿ ಯೋಜನೆಗಳು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ. ಇದರಿಂದ ೪೪೦ ಗ್ರಾಮಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದರು.

ಹಾವೇರಿ ತಹಸೀಲ್ದಾರ್ ಕಚೇರಿ ಮೇಲ್ಛಾವಣಿ ಸೋರುತ್ತಿರುವ ಕಾರಣ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಜಿಲ್ಲಾ ಆಸ್ಪತ್ರೆಗೆ ಶೀಘ್ರದಲ್ಲೇ ಹೊಸ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಬರಲಿದೆ ಎಂದು ತಿಳಿಸಿದರು.

ಮನೆಹಾನಿ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ಐದು ಮನೆಗಳು ಸಂಪೂರ್ಣ, ೧೧ ಮನೆಗಳಿಗೆ ತೀವ್ರಹಾನಿ, ೧೪೪೪ ಮನೆಗಳಿಗೆ ಭಾಗಶಃ ಹಾನಿ ಸೇರಿ ೧೪೬೦ ಮನೆಗಳಿಗೆ ಹಾನಿಯಾಗಿದೆ. ೧೫ ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ ಹಾಗೂ ೧೩ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಆರು ಮಾನವ ಜೀವಹಾನಿ ಹಾಗೂ ಮೂರು ಜಾನುವಾರು ಹಾನಿ ಸಂಭವಿಸಿದೆ. ಜೀವಹಾನಿಗಳಿಗೆ ತಲಾ ಐದು ಲಕ್ಷದಂತೆ ₹೩೦ ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಂದಾಜು ₹೨೮೦ ಲಕ್ಷ ಮೊತ್ತದ ೩೮೨೮ ರೈತರ ೩೩೦೪ ಹೆಕ್ಟೇರ್ ಕೃಷಿ ಬೆಳೆ ಹಾಗೂ ₹೪೫೧ ಲಕ್ಷ ಮೊತ್ತದ ೧೧೮೯ ರೈತರ ೪೭೪ ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಕೃಷಿ ಬೆಳೆಗೆ ₹೨೮೦.೪೮ ಲಕ್ಷ ಹಾಗೂ ತೋಟಗಾರಿಕೆ ಬೆಳೆಗೆ ₹೭೨.೭೮ ಲಕ್ಷ ಸಹಾಯಧನ ಅಂದಾಜಿಸಲಾಗಿದೆ ಎಂದು ತಿಳಿಸಿದರು.

ವಿದ್ಯುತ್‌ ಸಮಸ್ಯೆ: ಹಾನಗಲ್ಲ ಪಟ್ಟಣದಲ್ಲಿನ ವಿದ್ಯುತ್ ವ್ಯವಸ್ಥೆ ತೀರ ಹದಗೆಟ್ಟಿದೆ. ದಿನಕ್ಕೆ ಹಲವು ಬಾರಿ ವಿದ್ಯುತ್ ಸ್ಥಗಿತವಾಗುತ್ತಿದೆ ಎಂಬ ವಿಷಯಕ್ಕೆ, ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರಿಗೆ ಕೂಡಲೇ ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು. ಹಾನಗಲ್ಲ ಪುರಸಭೆ ಆರ್ಥಿಕ ಸಂಕಷ್ಟದಲ್ಲಿ ಇರುವುದರಿಂದ ನಗರದ ಸ್ವಚ್ಛತೆಗೆ ಸಮಸ್ಯೆಯಾಗಿದೆ. ಅಲ್ಲಿ ಸ್ವಚ್ಛತಾ ಸಿಬ್ಬಂದಿಯ ಕೊರತೆ ಇದೆ ಎಂಬ ವಿಷಯ ಗಮನ ಸೆಳೆದಾಗ, ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಸಿಬ್ಬಂದಿ ನೇಮಕಕ್ಕೆ ಕ್ರಮ ಜರುಗಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ ಹಾಗೂ ಯಾಸಿರ್‌ಖಾನ್ ಪಠಾಣ ಇದ್ದರು.

Share this article