ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (ಶಿಮುಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದ ಚುನಾವಣೆಗೆ ಎಂಎಡಿಬಿ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ, ಜಿಪಂ ಮಾಜಿ ಸದಸ್ಯ ಕೆಂಚನಹಳ್ಳಿ ಕುಮಾರ್ ಮತ್ತು ಕುಂಚೇನಹಳ್ಳಿ ಕೆ.ಎಲ್. ಜಗದೀಶ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು.ಶಿವಮೊಗ್ಗ, ಸಾಗರ, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಒಟ್ಟು 4 ವಿಭಾಗಗಳ 14 ನಿರ್ದೇಶಕ ಸ್ಥಾನಕ್ಕೆ ಆಗಸ್ಟ್ 14ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ.
ಒಕ್ಕೂಟದ 1406 ಸಂಘಗಳಲ್ಲಿ 1171 ಸಂಘಗಳು ಮತದಾನದ ಹಕ್ಕು ಪಡೆದಿವೆ. ವಿವಿಧ ಕಾರಣಗಳಿಂದಾಗಿ 235 ಸಂಘಗಳಿಗೆ ಮತದಾನದ ಹಕ್ಕು ಲಭಿಸಿಲ್ಲ. ಸಂಘಗಳ ಸಂಖ್ಯೆಗೆ ಅನುಗುಣವಾಗಿ ಒಕ್ಕೂಟವನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ವಿಭಾಗಕ್ಕೆ ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕು ಸೇರಿವೆ. ಸಾಗರ ವಿಭಾಗಕ್ಕೆ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲೂಕು ಸೇರ್ಪಡೆಗೊಂಡಿವೆ.ದಾವಣಗೆರೆ ವಿಭಾಗಕ್ಕೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ತಾಲೂಕುಗಳು ಮತ್ತು ಚಿತ್ರದುರ್ಗ ವಿಭಾಗಕ್ಕೆ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕುಗಳು ಸೇರ್ಪಡೆಗೊಂಡಿವೆ.
ಬುಧವಾರ ಆರ್.ಎಂ.ಮಂಜುನಾಥ್ ಗೌಡ, ಕೆಂಚನಹಳ್ಳಿ ಕುಮಾರ್ ಮತ್ತು ಕುಂಚೇನಹಳ್ಳಿ ಕೆ.ಎಲ್. ಜಗದೀಶ್ ನಾಮಪತ್ರ ಸಲ್ಲಿಕೆಯ ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕೆ.ಪಿ.ದುಗ್ಗಪ್ಪ ಗೌಡ, ಮಹಾಲಿಂಗಯ್ಯ ಶಾಸ್ತ್ರಿ, ಮಾಜಿ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್, ಕುರುವಳ್ಳಿ ನಾಗರಾಜ್, ಹೊನ್ನವಿಲೆ ಶಶಿಕುಮಾರ್, ಕಾಟಿಕೆರೆ ನೀಲವತಮ್ಮ, ಮಾಳೂರು ಪೂರ್ಣೇಶ್ ಗೌಡ, ಸಾಲೂರು ರಾಜು, ಲೋಕೇಶ್ ಕರಕುಚ್ಚಿ, ಆರ್.ಸಿ. ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಆ.6 ನಾಮಪತ್ರ ಸಲ್ಲಿಕೆಗೆ ಕಡೆ ದಿನ:ನಾಮಪತ್ರ ಸಲ್ಲಿಕೆ ಜುಲೈ 30ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 6 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಆ.7ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ವಾಪಸ್ ಪಡೆಯಲು ಆ.8 ಕಡೆಯ ದಿನವಾಗಿದೆ. ಒಟ್ಟು 4 ವಿಭಾಗಗಳ 14 ನಿರ್ದೇಶಕ ಸ್ಥಾನಕ್ಕೆ ಆಗಸ್ಟ್ 14ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ.