ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೃಷಿಯ ವಿವಿಧ ಕ್ಷೇತ್ರಗಳ ಕುರಿತಾದ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಈ ಕೇಂದ್ರವು ರೈತರು ಮತ್ತು ಕೃಷಿ ವಿಜ್ಞಾನದ ನಡುವಿನ ಜ್ಞಾನ ಸೇತುವೆಯಾಗಿ ಕಾರ್ಯನಿರ್ವಹಿಸುವ ಆಶಯ ಹೊಂದಿದೆ. ಕೃಷಿ ಮಾಹಿತಿ ಕೇಂದ್ರದಲ್ಲಿ ಮಣ್ಣಿನ ಆರೋಗ್ಯ, ಉತ್ತಮ ಬೀಜ, ಸಮಗ್ರ ಕೃಷಿ ಪದ್ಧತಿ , ನೀರಿನ ಸಂರಕ್ಷಣೆ, ಹನಿ ನೀರಾವರಿ, ಸಾವಯವ ಕೃಷಿ, ಜೈವಿಕ ಗೊಬ್ಬರಗಳು, ಕೀಟ ಮತ್ತು ರೋಗ ನಿರ್ವಹಣೆ, ಹಸಿರುಮನೆ, ಜಲಕೃಷಿ, ರೇಷ್ಮೆ ಕೃಷಿ, ಜೇನುಸಾಕಣೆ, ಪಶುಸಂಗೋಪನೆ, ಕಾಂಪೋಸ್ಟ್ ತಯಾರಿಕೆ, ಮಳೆನೀರು ಕೊಯ್ಲು ಹಾಗೂ ಕೃಷಿ ಯಾಂತ್ರೀಕರಣ ಮುಂತಾದ ವಿಷಯಗಳ ಕುರಿತು ಮಾದರಿಗಳು, ಚಾರ್ಟ್‌ಗಳು, ಪೋಸ್ಟರ್‌ಗಳು ಮತ್ತು ಕ್ಯೂಆರ್ ಕೋಡ್‌ಗಳ ಮೂಲಕ ಮಾಹಿತಿಯನ್ನು ಪ್ರದರ್ಶಿಸಲಾಯಿತು.
‘ಕೃಷಿ ಜ್ಞಾನಧಾರೆ’ ಎಂಬ ಕಾರ್ಯಕ್ರಮದ ಥೀಮ್ ಅನ್ನು ಡಾ. ನಾಗೇಶ ಅವರು ಬಿಡುಗಡೆಗೊಳಿಸಿದರು. ರೈತರಿಗೆ ಅಗತ್ಯವಿರುವ ಕೃಷಿ ಮಾಹಿತಿಯನ್ನು ಸರಳವಾಗಿ, ವೈಜ್ಞಾನಿಕವಾಗಿ ಹಾಗೂ ಪ್ರಾಯೋಗಿಕವಾಗಿ ತಲುಪಿಸುವಲ್ಲಿ ಇಂತಹ ಮಾಹಿತಿ ಕೇಂದ್ರಗಳ ಮಹತ್ವವನ್ನು ತಿಳಿಸಿದರು.ಸಹಾಯಕ ಪ್ರಾಧ್ಯಾಪಕ ಡಾ. ದೇವರಾಜು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕೃಷಿಯ ಜೊತೆಗೆ ಪಶುಸಂಗೋಪನೆ, ಹೈನುಗಾರಿಕೆ, ರೇಷ್ಮೆ ಕೃಷಿ ಹಾಗೂ ಇತರ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಸಮಗ್ರ ಕೃಷಿ ಪದ್ಧತಿಯ ಮಹತ್ವವನ್ನು ವಿವರಿಸಿದರು.
ಮಣ್ಣಿನ ಆರೋಗ್ಯದ ಕಾಳಜಿ ಬಗ್ಗೆ ಕೆ.ಎನ್. ರಾಜೇಂದ್ರಸ್ವಾಮಿ ಅವರು ಮಾತನಾಡಿ, ಮಣ್ಣಿನ ಆರೋಗ್ಯದ ಕಡೆಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕು. ಆಗಾಗ್ಗೆ ಮಣ್ಣಿನ ಪರೀಕ್ಷೆ ನಡೆಸಿ, ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ಸ್ಥಿತಿ ತಿಳಿದುಕೊಂಡು ಸೂಕ್ತ ಬೆಳೆ ಹಾಗೂ ಸೂಕ್ತ ಗೊಬ್ಬರವನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ರೈತರಿಗೆ ತಾಂತ್ರಿಕ ಜ್ಞಾನ, ಸೂಕ್ತ ಮಾರ್ಗದರ್ಶನ ಹಾಗೂ ಸಮಯೋಚಿತ ಮಾಹಿತಿ ದೊರೆತಾಗ ಕೃಷಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವೆಂದು ತಿಳಿಸಿದರು.
ರೇಷ್ಮೆ ಕೃಷಿಗೆ ಉತ್ತೇಜನ ಕುರಿತಂತೆ ಕೆವಿಕೆ ರೇಷ್ಮೆ ವಿಜ್ಞಾನಿ ಡಾ. ಚಂದ್ರಶೇಖರ್ ಕಳ್ಳಿಮನಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೇಷ್ಮೆ ಕೃಷಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಉತ್ತಮ ಇಳುವರಿ ಹಾಗೂ ಗುಣಮಟ್ಟದ ರೇಷ್ಮೆ ಉತ್ಪಾದನೆಗಾಗಿ ರೈತರು ಸುಧಾರಿತ ರೇಷ್ಮೆ ತಳಿಗಳನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಗಣ್ಯರು ಕೃಷಿ ಮಾಹಿತಿ ಕೇಂದ್ರದಲ್ಲಿನ ವಿವಿಧ ಮಾದರಿಗಳು, ಚಾರ್ಟ್‌ಗಳು, ಕೃಷಿ ತಂತ್ರಜ್ಞಾನ ಪ್ರದರ್ಶನಗಳು ಮತ್ತು ಮಾಹಿತಿಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಪ್ರಯತ್ನವನ್ನು ಪ್ರಶಂಸಿಸಿದರು.