ಅರ್ಥವಿಲ್ಲದೆ ಭಾವವಿಲ್ಲ. ಸಾವಿರಾರು ಕವಿತೆ ಬರೆದರೇನು ಪ್ರಯೋಜನ, ಅರ್ಥಪೂರ್ಣವಾದ ಸತ್ವಯುತ ಹಾಗೂ ಕಳಕಳಿಯ ಒಂದೇ ಒಂದು ಕವಿತೆ ಸಾಹಿತ್ಯ ಕ್ಷೇತ್ರದಲ್ಲಿ ಸಾವೇ ಇರದ ಕವಿತೆಯಾಗಿ ಉಳಿಯಬಲ್ಲದೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮತಿ ಜಯಪ್ಪ ತಿಳಿಸಿದ್ದಾರೆ.

- ರಾಜಶೇಖರ ಗುಂಡಗಟ್ಟಿ, ಕೆ.ಎನ್.ಸ್ವಾಮಿ ಸ್ಮರಣಾರ್ಥ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸುಮತಿ ಜಯಪ್ಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅರ್ಥವಿಲ್ಲದೆ ಭಾವವಿಲ್ಲ. ಸಾವಿರಾರು ಕವಿತೆ ಬರೆದರೇನು ಪ್ರಯೋಜನ, ಅರ್ಥಪೂರ್ಣವಾದ ಸತ್ವಯುತ ಹಾಗೂ ಕಳಕಳಿಯ ಒಂದೇ ಒಂದು ಕವಿತೆ ಸಾಹಿತ್ಯ ಕ್ಷೇತ್ರದಲ್ಲಿ ಸಾವೇ ಇರದ ಕವಿತೆಯಾಗಿ ಉಳಿಯಬಲ್ಲದೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮತಿ ಜಯಪ್ಪ ತಿಳಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಬೆಣ್ಣೆ ನಗರಿ ಸಾಹಿತ್ಯ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಸಾಹಿತಿಗಳಾದ ದಿ: ರಾಜಶೇಖರ ಗುಂಡಗಟ್ಟಿ, ದಿ: ಕೆ.ಎನ್.ಸ್ವಾಮಿ ಸ್ಮರಣಾರ್ಥ ಆಯೋಜಿಸಿದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕವಿಗಳಿಗೆ ಕಾವ್ಯದ ತತ್ವ, ಧರ್ಮವನ್ನು ಮಾರ್ಗದರ್ಶನ ಮಾಡಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ, ಸಾಹಿತಿ ತೆಲಗಿ ವೀರಭದ್ರಪ್ಪ ಮಾತನಾಡಿ, ಅಹಂಮಿಕೆ ಮತ್ತು ಕ್ರೂರತೆಯನ್ನು ಕಟ್ಟಿಕೊಂಡು ಸಮಾಜಕ್ಕೆ ಘಾತುಕವಾದ ನೀಚತನ ಮಾಡುವ ವ್ಯಾದನು ವೇದವನ್ನು ಕಲಿತದ್ದು, ಮರ ಮರ ಎನ್ನುವ ಶಬ್ಧವನ್ನು ಸ್ಮರಣೆ ಮಾಡುತ್ತಲೇ ಅದು ರಾಮ ರಾಮ ನಾಮವಾಗಿ ವ್ಯಾದನಿಗೆ ತತ್ವದರ್ಶನ ದಾರ್ಶನಿಕತ್ವ ಒದಗಿ ಬಂದು ಮಹಾಕಾವ್ಯವನ್ನು ರಚಿಸಿದ ವಾಲ್ಮೀಕಿ ಪರಿವರ್ತನೆಗೊಂಡರು. ಜ್ಞಾನವಂತರಾದ ಕೆಲವರು ಅಜ್ಞಾನವನ್ನು ಮತ್ತೆ ಅಹಂಮಿಕೆಯನ್ನು ಕ್ರೂರಿತನವನ್ನು ತೋರಿಕೊಂಡು ಇಂದಿಗೂ ಸಮಾಜದಲ್ಲಿ ಪಟ್ಟಭದ್ರರಾಗಿ ಸಮಾಜವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವಂತಹವರು. ಇವರು ಪರಿವರ್ತನೆ ಆಗಬೇಕಾದರೆ ಕಾವ್ಯದ ಮಹತ್ವ ಅರಿಯಬೇಕು, ಕವಿತೆ ಸಮಾಜವನ್ನು ತಿದ್ದುವಂತಿರಬೇಕು. ಗುಡಿಯೊಳಗಿನ ಮೂರ್ತಿಯಂತೆ, ತಾಯಿಯೊಳಗಿನ ಗರ್ಭದೊಳಗಿನ ಪಿಂಡದಂತೆ ಅದು ಬ್ರಹ್ಮಾಂಡ ದರ್ಶನ ಮಾಡುವಂತಿರಬೇಕು ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಜೆ.ಸಿ.ಜಗದೀಶ್ ಕೂಲಂಬಿ ಮಾತನಾಡಿ, ಸಾಹಿತ್ಯಿಕ ಕಾರ್ಯಗಳು ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವರ್ಷಪೂರ್ಣ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಪ್ರಶಂಸಿಸಿದರು.

ಸಿಜಿಕೆ ಪ್ರಶಸ್ತಿ ಪುರಸ್ಕೃತ ಸ್ಫೂರ್ತಿ ಪ್ರಕಾಶನದ ಎಂ.ಬಸವರಾಜ ಅವರಿಗೆ ಗೌರವಿಸಲಾಯಿತು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಕೃಷ್ಣಮೂರ್ತಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಎಸ್.ರಾಜು, ಬೆಣ್ಣೆ ನಗರಿ ಸಾಹಿತ್ಯ ಸಂಘದ ಸಂಚಾಲಕ ಬಿಎಂಜಿ ವೀರೇಶ, ಅಣಬೇರು ಕೆ.ಪಿ.ತಾರೇಶ್, ಫಕೀರೇಶ ಆದಾಪುರ, ಸುನಿತಾ ಪ್ರಕಾಶ, ಮೋಹನ್ ಕೆ.ಗಂಗೂರ್, ನಿಂಗಮ್ಮ, ಮಾಲತೇಶ ಬಬ್ಬಜ್ಜಿ, ಎಚ್.ನಾಗರತ್ನ, ಕವಿ ಕವಯತ್ರಿಯರು ಇದ್ದರು.

ಸಮಾರಂಭದಲ್ಲಿ ಇಂದಿರಾ ಸಿದ್ದೇಶ್ ಪ್ರಾರ್ಥಿಸಿ, ಮಹೇಶ್ ಸ್ವಾಗತಿಸಿದರು. ಎಚ್.ಟಿ.ರಾಧ ವಂದಿಸಿದರು. ನಂತರ ಕವಿಗೋಷ್ಠಿ ನಡೆಯಿತು.

- - -

-6ಕೆಡಿವಿಜಿ37: ದಾವಣಗೆರೆಯಲ್ಲಿ ಭಾನುವಾರ ಬೆಣ್ಣೆನಗರಿ ಸಾಹಿತ್ಯ ಸಂಘದಿಂದ ನಡೆದ ಕವಿಗೋಷ್ಠಿಯನ್ನು ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉದ್ಘಾಟಿಸಿದರು.