ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2026–27ರ ಅಂಗವಾಗಿ ರೈತರು, ಗ್ರಾಮಸ್ಥರು ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಆಧುನಿಕ ಮತ್ತು ವೈಜ್ಞಾನಿಕ ಕೃಷಿ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ‘ಕೃಷಿ ಜ್ಞಾನಧಾರೆ’ ಕೃಷಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2026–27ರ ಅಂಗವಾಗಿ ರೈತರು, ಗ್ರಾಮಸ್ಥರು ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಆಧುನಿಕ ಮತ್ತು ವೈಜ್ಞಾನಿಕ ಕೃಷಿ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ‘ಕೃಷಿ ಜ್ಞಾನಧಾರೆ’ ಕೃಷಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಯಿತು.

ಕೃಷಿಯ ವಿವಿಧ ಕ್ಷೇತ್ರಗಳ ಕುರಿತಾದ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ಈ ಕೇಂದ್ರವು ರೈತರು ಮತ್ತು ಕೃಷಿ ವಿಜ್ಞಾನದ ನಡುವಿನ ಜ್ಞಾನ ಸೇತುವೆಯಾಗಿ ಕಾರ್ಯನಿರ್ವಹಿಸುವ ಆಶಯ ಹೊಂದಿದೆ. ಕೃಷಿ ಮಾಹಿತಿ ಕೇಂದ್ರದಲ್ಲಿ ಮಣ್ಣಿನ ಆರೋಗ್ಯ, ಉತ್ತಮ ಬೀಜ, ಸಮಗ್ರ ಕೃಷಿ ಪದ್ಧತಿ , ನೀರಿನ ಸಂರಕ್ಷಣೆ, ಹನಿ ನೀರಾವರಿ, ಸಾವಯವ ಕೃಷಿ, ಜೈವಿಕ ಗೊಬ್ಬರಗಳು, ಕೀಟ ಮತ್ತು ರೋಗ ನಿರ್ವಹಣೆ, ಹಸಿರುಮನೆ, ಜಲಕೃಷಿ, ರೇಷ್ಮೆ ಕೃಷಿ, ಜೇನುಸಾಕಣೆ, ಪಶುಸಂಗೋಪನೆ, ಕಾಂಪೋಸ್ಟ್ ತಯಾರಿಕೆ, ಮಳೆನೀರು ಕೊಯ್ಲು ಹಾಗೂ ಕೃಷಿ ಯಾಂತ್ರೀಕರಣ ಮುಂತಾದ ವಿಷಯಗಳ ಕುರಿತು ಮಾದರಿಗಳು, ಚಾರ್ಟ್‌ಗಳು, ಪೋಸ್ಟರ್‌ಗಳು ಮತ್ತು ಕ್ಯೂಆರ್‌ ಕೋಡ್‌ಗಳ ಮೂಲಕ ಮಾಹಿತಿಯನ್ನು ಪ್ರದರ್ಶಿಸಲಾಯಿತು.

‘ಕೃಷಿ ಜ್ಞಾನಧಾರೆ’ ಎಂಬ ಕಾರ್ಯಕ್ರಮದ ಥೀಮ್ ಅನ್ನು ಡಾ. ನಾಗೇಶ ಅವರು ಬಿಡುಗಡೆಗೊಳಿಸಿದರು. ರೈತರಿಗೆ ಅಗತ್ಯವಿರುವ ಕೃಷಿ ಮಾಹಿತಿಯನ್ನು ಸರಳವಾಗಿ, ವೈಜ್ಞಾನಿಕವಾಗಿ ಹಾಗೂ ಪ್ರಾಯೋಗಿಕವಾಗಿ ತಲುಪಿಸುವಲ್ಲಿ ಇಂತಹ ಮಾಹಿತಿ ಕೇಂದ್ರಗಳ ಮಹತ್ವವನ್ನು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕ ಡಾ. ದೇವರಾಜು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕೃಷಿಯ ಜೊತೆಗೆ ಪಶುಸಂಗೋಪನೆ, ಹೈನುಗಾರಿಕೆ, ರೇಷ್ಮೆ ಕೃಷಿ ಹಾಗೂ ಇತರ ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಸಮಗ್ರ ಕೃಷಿ ಪದ್ಧತಿಯ ಮಹತ್ವವನ್ನು ವಿವರಿಸಿದರು.

ಒಂದೇ ಕೃಷಿ ಚಟುವಟಿಕೆಯ ಮೇಲೆ ಅವಲಂಬಿತರಾಗುವುದಕ್ಕಿಂತ ವಿವಿಧ ಕೃಷಿ ಉದ್ಯಮಗಳನ್ನು ಪರಸ್ಪರ ಜೋಡಿಸಿಕೊಂಡು ನಡೆಸುವುದರಿಂದ ಆದಾಯದ ಮೂಲಗಳನ್ನು ಹೆಚ್ಚಿಸಬಹುದು, ಕೃಷಿ ತ್ಯಾಜ್ಯವನ್ನು ಮರುಬಳಕೆ ಮಾಡಬಹುದು ಹಾಗೂ ರೈತರ ಆರ್ಥಿಕ ಸ್ಥಿರತೆ ಹೆಚ್ಚಿಸಬಹುದು ಎಂದು ತಿಳಿಸಿದರು.

ಮಣ್ಣಿನ ಆರೋಗ್ಯದ ಕಾಳಜಿ ಬಗ್ಗೆ ಕೆ.ಎನ್. ರಾಜೇಂದ್ರಸ್ವಾಮಿ ಅವರು ಮಾತನಾಡಿ, ಮಣ್ಣಿನ ಆರೋಗ್ಯದ ಕಡೆಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕು. ಆಗಾಗ್ಗೆ ಮಣ್ಣಿನ ಪರೀಕ್ಷೆ ನಡೆಸಿ, ಮಣ್ಣಿನ ಫಲವತ್ತತೆ ಮತ್ತು ಪೋಷಕಾಂಶಗಳ ಸ್ಥಿತಿ ತಿಳಿದುಕೊಂಡು ಸೂಕ್ತ ಬೆಳೆ ಹಾಗೂ ಸೂಕ್ತ ಗೊಬ್ಬರವನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಚಾಮುಲ್‌ನ ಡಾ. ರಾಚಪ್ಪ ಅವರು ಮಾತನಾಡಿ, “ಅನ್ನದಾತ ರೈತನ ಕಷ್ಟಗಳಿಗೆ ನಾವು ಸ್ಪಂದಿಸಬೇಕು. ರೈತರಿಗೆ ಅಗತ್ಯವಿರುವ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಒದಗಿಸುವ ಮೂಲಕ ಅವರ ಕೃಷಿ ಚಟುವಟಿಕೆಗಳಿಗೆ ನೆರವಾಗೋಣ” ಎಂದು ಹೇಳಿದರು.

ರೈತರಿಗೆ ತಾಂತ್ರಿಕ ಜ್ಞಾನ, ಸೂಕ್ತ ಮಾರ್ಗದರ್ಶನ ಹಾಗೂ ಸಮಯೋಚಿತ ಮಾಹಿತಿ ದೊರೆತಾಗ ಕೃಷಿಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವೆಂದು ತಿಳಿಸಿದರು.

ರಾಸಾಯನಿಕ ಗೊಬ್ಬರದ ಮಿತ ಬಳಕೆ ಕುರಿತು ಎಂಸಿಎಫ್‌ ವ್ಯವಸ್ಥಾಪಕ ಅಮರನಾಥ್ ಅವರು ಮಾತನಾಡಿ, ಮಣ್ಣಿನ ಆರೋಗ್ಯವನ್ನು ಕಾಪಾಡುವುದು ಇಂದಿನ ಕೃಷಿಯ ಪ್ರಮುಖ ಸವಾಲಾಗಿದೆ ಎಂದು ತಿಳಿಸಿದರು. ರೈತರು ರಾಸಾಯನಿಕ ಗೊಬ್ಬರಗಳನ್ನು ಮಿತವಾಗಿ ಹಾಗೂ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಬಳಸಬೇಕು. ಸಮತೋಲಿತ ಪೋಷಕಾಂಶ ನಿರ್ವಹಣೆಯ ಮೂಲಕ ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆಯನ್ನು ದೀರ್ಘಕಾಲ ಕಾಪಾಡಿ ಕೊಳ್ಳಬಹುದು ಎಂದು ಸಲಹೆ ನೀಡಿದರು.

ರೇಷ್ಮೆ ಕೃಷಿಗೆ ಉತ್ತೇಜನ ಕುರಿತಂತೆ ಕೆವಿಕೆ ರೇಷ್ಮೆ ವಿಜ್ಞಾನಿ ಡಾ. ಚಂದ್ರಶೇಖರ್ ಕಳ್ಳಿಮನಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ರೇಷ್ಮೆ ಕೃಷಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಉತ್ತಮ ಇಳುವರಿ ಹಾಗೂ ಗುಣಮಟ್ಟದ ರೇಷ್ಮೆ ಉತ್ಪಾದನೆಗಾಗಿ ರೈತರು ಸುಧಾರಿತ ರೇಷ್ಮೆ ತಳಿಗಳನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ವಾಸುಪಾಲ್ ಪಂಡಿತ್ ಅವರು ಉದ್ಘಾಟಿಸಿದರು. ರೈತರು, ಗ್ರಾಮಸ್ಥರು ಹಾಗೂ ಕೃಷಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗಣ್ಯರು ಕೃಷಿ ಮಾಹಿತಿ ಕೇಂದ್ರದಲ್ಲಿನ ವಿವಿಧ ಮಾದರಿಗಳು, ಚಾರ್ಟ್‌ಗಳು, ಕೃಷಿ ತಂತ್ರಜ್ಞಾನ ಪ್ರದರ್ಶನಗಳು ಮತ್ತು ಮಾಹಿತಿಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳ ಪ್ರಯತ್ನವನ್ನು ಪ್ರಶಂಸಿಸಿದರು.