ಸೋಮರಡ್ಡಿ ಅಳವಂಡಿ
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಒಳಹರಿವು ಹೆಚ್ಚಿದೆ. ಇದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜನರು ಹಾಗೂ ಸರ್ಕಾರಕ್ಕೆ ಭಯ ಶುರುವಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಪರಿಸ್ಥಿತಿ ಎದುರಿಸುವುದು ಹೇಗೆ ಎಂಬು ಆತಂಕವೂ ಮನೆಮಾಡಿದೆ.
ಜಲಾಶಯದ 33 ಕ್ರಸ್ಟ್‌ಗೇಟ್ ಪೈಕಿ ಮುರಿದು ಹೋಗಿದ್ದ 19ನೇ ಕ್ರಸ್ಟ್‌ಗೇಟ್ (ಸ್ಟಾಪ್‌ಲಾಗ್ ಗೇಟ್ ಅಳವಡಿಸಲಾಗಿದೆ) ಸೇರಿದಂತೆ 7 ಕ್ರಸ್ಟ್‌ಗೇಟ್ ಬಾಗಿದೆ. ಆಪರೇಟ್ ಮಾಡಲು ಬರುತ್ತಿಲ್ಲ. ಹೀಗಾಗಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 105.855 ಟಿಎಂಸಿ ಇದ್ದರೂ ಅದನ್ನು 80ಕ್ಕೆ ಇಳಿಸಲಾಗಿದೆ. ಇದೀಗ ಜಲಾಶಯಕ್ಕೆ ಒಳಹರಿವು ಹೆಚ್ಚಿದ ಪರಿಣಾಮ ಜಲಾಶಯದಿಂದ ನದಿಗೆ 22 ಗೇಟ್ ಮೂಲಕ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡಲಾಗುತ್ತಿದೆ. ಉಳಿದ 11 ಕ್ರಸ್ಟ್‌ಗೇಟ್ ತೆರೆಯಬೇಕಾಗಿದೆ. ಈ ಪೈಕಿ 7 ಕ್ರಸ್ಟ್‌ಗೇಟ್ ಬಾಗಿದ್ದು, ಕಾರ್ಯನಿರ್ವಹಿಸುವುದು ಕಷ್ಟ. ಹೀಗಾಗಿ ಅಧಿಕಾರಿಗಳಿಗೆ ಆತಂಕ ಎದುರಾಗಿದೆ.ಜಲಾಶಯಕ್ಕೆ 1 ಲಕ್ಷ ಕ್ಯುಸೆಕ್ ವರೆಗೆ ನೀರು ಹರಿದು ಬಂದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ಇದಕ್ಕಿಂತ ಹೆಚ್ಚಿನ ಒಳ ಹರಿವು ಬಂದರೆ ಇರುವ 26 ಗೇಟ್ ಮೂಲಕ ನದಿಗೆ ನೀರು ಹರಿಸಲು ಕಷ್ಟವಾಗುತ್ತದೆ. ಒಂದು ವೇಳೆ ಬಿಟ್ಟರೆ ಕ್ರಸ್ಟ್‌ಗೇಟ್ ಮೇಲೆ ಒತ್ತಡ ಹೆಚ್ಚಾಗಲಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಜಲಾಶಯದ ಕ್ರಸ್ಟ್‌ಗೇಟ್ ಸರ್ವೇ ಮಾಡಿರುವ ತಜ್ಞರ ಸಮಿತಿ ಪ್ರಕಾರ 33 ಕ್ರಸ್ಟ್‌ಗೇಟ್‌ಗಳ (75 ವರ್ಷ) ಸಾಮರ್ಥ್ಯ ಮುಗಿದಿದ್ದು ಬದಲಾಯಿಸಬೇಕು. ಈಗಾಗಲೇ ಗೇಟ್‌ಗಳು ಶೇ. 40ರಿಂದ 50ರಷ್ಟು ಸವಕಳಿಯಾಗಿವೆ. ಈ ನಡುವೆ ಗೇಟ್ ನಂ. 11, 18, 20, 24, 27, 28 ಬಹುತೇಕ ಬೆಂಡಾಗಿವೆ. ಹೀಗಾಗಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಆತಂಕ ಶುರುವಾಗಿದೆ. ಸರ್ಕಾರವು ಎಚ್ಚೆತ್ತುಕೊಂಡಿದ್ದು ಜಲಾಶಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವಿಶೇಷ ನಿಗಾ ಇರಿಸುವಂತೆ ಸೂಚಿಸಿದೆ.
ದಿನದಿಂದ ದಿನಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಈಗಾಗಲೇ ಜಲಾಶಯದಿಂದ 1.07 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿರುವುದಾಗಿ ಜಿಲ್ಲಾಡಳಿತವೇ ಪ್ರಕಟಣೆಯಲ್ಲಿ ತಿಳಿಸಿದೆ. ನದಿ ಪಾತ್ರದಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಆರೋಪ, ಪ್ರತ್ಯಾರೋಪ: