ಐತಿಹಾಸಿಕ ಹಂಪಿ ಹೆಸರಿನಲ್ಲಿ ಸಣಾಪುರ, ಆನೆಗೊಂದಿ ಭಾಗದಲ್ಲಿ ನಾಯಿಕೊಡೆಯಂತೆ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ತಲೆ ಎತ್ತಿವೆ. ಅಮಲಿನ ಈ ಜಗತ್ತಿಗೆ ಮಾಮೂಲೇ ಮೂಲಮಂತ್ರ!.
ಕೃಷ್ಣ ಲಮಾಣಿ
ಹೊಸಪೇಟೆ : ಐತಿಹಾಸಿಕ ಹಂಪಿ ಹೆಸರಿನಲ್ಲಿ ಸಣಾಪುರ, ಆನೆಗೊಂದಿ ಭಾಗದಲ್ಲಿ ನಾಯಿಕೊಡೆಯಂತೆ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ತಲೆ ಎತ್ತಿವೆ. ಅಮಲಿನ ಈ ಜಗತ್ತಿಗೆ ಮಾಮೂಲೇ ಮೂಲಮಂತ್ರ!. ಇಲ್ಲಿನ ಅಕ್ರಮ ಚಟುವಟಿಕೆ, ಡ್ರಗ್ಸ್ ದಂಧೆಗೆ ಪೊಲೀಸರು ಜಾಣ ಕುರುಡರಾಗಿದ್ದಾರೆ. ರೇಪ್, ಕೊಲೆಗೆ ಈ ಕಾವಲುಗಾರರ ಮೌನವೇ ಕಾರಣ ಎಂಬ ಆರೋಪ ಇದೀಗ ಬಲವಾಗಿ ಕೇಳಿ ಬರುತ್ತಿದೆ!
ಸಣಾಪುರ ಬಳಿಯ ರಂಗಾಪುರ ಪ್ರದೇಶದ ಗಂಗಮ್ಮನಗುಡಿ ಬಳಿ ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮತ್ತು ಓರ್ವ ಪ್ರವಾಸಿಗನ ಮರ್ಡರ್ ಪ್ರಕರಣದ ಬಳಿಕ ಪೊಲೀಸರ ನಿರ್ಲಕ್ಷ್ಯ ಹಾಗೂ ಸಂಪನ್ಮೂಲ ಕ್ರೋಡೀಕರಣದ ಹೂರಣ ಬಿಚ್ಚಿಕೊಳ್ಳುತ್ತಿದೆ.
ಎಲ್ಲೆಲ್ಲಿವೆ ಹೋಂ ಸ್ಟೇಗಳು? :
ಕೊಪ್ಪಳ ತಾಲೂಕಿನ ಬಸಾಪುರ, ರಾಜಾರಾಮಪೇಟೆ, ಗಂಗಾವತಿ ತಾಲೂಕಿನ ತಿರುಮಲಾಪುರ, ಸಣಾಪುರ, ರಂಗಾಪುರ, ಅಂಜನಹಳ್ಳಿ, ಚಿಕ್ಕರಾಂಪುರ, ಹನುಮನಹಳ್ಳಿ, ವಿರುಪಾಪುರ ಗಡ್ಡಿ, ಆನೆಗೊಂದಿ, ಕಡೇಬಾಗಿಲು, ಸಂಗಾಪುರ ಪ್ರದೇಶಗಳಲ್ಲಿ ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳು ತಲೆ ಎತ್ತಿವೆ. ನೂರಾರು ಹೋಂ ಸ್ಟೇ, ರೆಸಾರ್ಟ್, ಹೋಟೆಲ್‌ಗಳಿವೆ. ಈ ಪೈಕಿ ಬೆರಳೆಣಿಕೆಯಷ್ಟೇ ಅಧಿಕೃತವಾಗಿದ್ದು, ಉಳಿದವು ಅನಧಿಕೃತವಾಗಿಯೇ ನಡೆಯುತ್ತಿವೆ.
ಮಾಮೂಲು ಫಿಕ್ಸ್:
ಸಣಾಪುರ, ಆನೆಗೊಂದಿ ಭಾಗದಲ್ಲಿ ನಾಯಿಕೊಡೆಯಂತೆ ತಲೆ ಎತ್ತಿರುವ ಹೋಂ ಸ್ಟೇ, ರೆಸಾರ್ಟ್‌ಗಳಿಂದ ಪೊಲೀಸರು ಮಾಮೂಲು ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ. ಹಾಗಾಗಿ, ರಾಜಾರೋಷವಾಗಿಯೇ ಗಾಂಜಾ, ಚರಸ್ ದೊರೆಯುತ್ತದೆ. ಇದಕ್ಕೆ ಕಡಿವಾಣ ಹಾಕುವವರೇ, ಹೋಂ ಸ್ಟೇ, ರೆಸಾರ್ಟ್, ಹೋಟೆಲ್ ಮಾಲೀಕರ ಜೊತೆಗೆ ಪಾರ್ಟಿ ಮಾಡುತ್ತಾರೆ. ಪೊಲೀಸರ ಸಲಿಗೆಯಿಂದಲೇ, ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹಾಗಾಗಿ ನಾವು ದೂರು ನೀಡಲು ಹೆದರುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹೋಂ ಗಾರ್ಡ್‌ಗಳ ದರ್ಬಾರ್:
ಅಂಜನಾದ್ರಿ ಬಳಿ ಇಬ್ಬರು, ಆನೆಗೊಂದಿ ಬಳಿ ಇಬ್ಬರು, ಪಂಪಾ ಸರೋವರ ಬಳಿ ಒಬ್ಬ ಹೋಂ ಗಾರ್ಡ್ ಬಿಟ್ಟರೆ ಗಂಗಾವತಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಡ್ಯೂಟಿ ಮಾಡುವುದೇ ಇಲ್ಲ. ಇನ್ನು, ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸಾಪುರ ಭಾಗದಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ಹೋಂ ಗಾರ್ಡ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣಾಪುರ, ಆನೆಗೊಂದಿ ಭಾಗದಲ್ಲಿ ಬೀಟ್ ಪೊಲೀಸರ ಮುಖವನ್ನೇ ನೋಡಿಲ್ಲ. ಗಸ್ತು ಎಂಬುದು ಈ ಭಾಗದಲ್ಲಿ ಮಾಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಲೀಸ್ ಪಡೆದು ರೆಸಾರ್ಟ್ ಆರಂಭ:
ಕೇರಳ, ಹೈದರಾಬಾದ್, ಬೆಂಗಳೂರು, ಗೋವಾ, ತಮಿಳುನಾಡಿನಿಂದ ಬಂದವರು ಇಲ್ಲಿ ರೈತರಿಗೆ ಹಣ ಕೊಟ್ಟು ಜಮೀನನ್ನು ಲೀಸ್‌ಗೆ ಪಡೆದು ಅನಧಿಕೃತವಾಗಿ ಹೋಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್ ನಡೆಸುತ್ತಿದ್ದಾರೆ. ಹಂಪಿ ಟೂರಿಸ್ಂ ಹೆಸರಿನಲ್ಲಿ "ರಿಪಬ್ಲಿಕ್ ಆಫ್ ರೆಸಾರ್ಟ್ಸ್ " ಜಗತ್ತು ಶುರುವಾಗಿದೆ. ಇಲ್ಲೀಗ ಸ್ಥಳೀಯ ಸಂಸ್ಕೃತಿ, ಪರಂಪರೆಯೇ ಮಾಯವಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.
ವಿದೇಶಿ ಮಹಿಳೆ ಕೊಲೆ:
1996-97ರಲ್ಲಿ ಇಟಲಿ ಮಹಿಳೆ ಮಿಲ್ವಿಯಾ ಮತ್ತು ಅರ್ಚಕ ರಾಮಚಂದ್ರ ದಾಸ್ ಎಂಬುವರ ಜೋಡಿ ಕೊಲೆ ಹನುಮನಹಳ್ಳಿಯಲ್ಲಿ ನಡೆದಿತ್ತು. ಆ ಬಳಿಕ ಸಣಾಪುರ ಕೆರೆ, ಆನೆಗೊಂದಿ ಭಾಗದಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿವೆ. ರೀಲ್ಸ್ ಮಾಡಲು ಹೋಗಿ ವೈದ್ಯೆಯೊಬ್ಬರು ಮೃತಪಟ್ಟ ಘಟನೆ ಹೊರತುಪಡಿಸಿದರೆ, ಈಗ ನಡೆದಿರುವುದೇ ದೊಡ್ಡ ಘಟನೆ ನಡೆದಿದೆ ಎಂದು ಸ್ಥಳೀಯರು ಹಿಂದಿನ ಕಹಿ ಘಟನೆಗಳು ಮೆಲುಕು ಹಾಕುತ್ತಿದ್ದಾರೆ.
ಮಡ್ಡಿ ನಾಗೇಂದ್ರನ ಹಾವಳಿ:
ಹಂಪಿ, ಗಂಗಾವತಿ ಪೊಲೀಸರಿಗೆ ಆನೆಗೊಂದಿಯ ಮಡ್ಡಿ ನಾಗೇಂದ್ರ ಕಾಡುಗಳ್ಳ ವೀರಪ್ಪನ್‌ನಂತೇ ಸತಾಯಿಸಿದ್ದ. ಒಂಟಿ ವಿದೇಶಿ ಮಹಿಳೆಯರೇ ಈತನ ಟಾರ್ಗೆಟ್ ಆಗಿತ್ತು. ವಿದೇಶಿ ಮಹಿಳೆಯರಿಗೆ ಲೈಂಗಿಕ ಹಲ್ಲೆ ನಡೆಸುವುದೇ ಈತನ ಖಯಾಲಿ ಆಗಿತ್ತು. ಆಗ ಪೊಲೀಸರು ಈತನ ಬೆನ್ನು ಬಿದ್ದು ಅರೆಸ್ಟ್ ಮಾಡಿದ್ದರು. ಈತ ಕೋರ್ಟ್‌ನಲ್ಲಿ ಪೊಲೀಸರ ವಿರುದ್ಧವೇ ಸಾಕ್ಷ್ಯ ನುಡಿದಿದ್ದ. ಹೀಗಾಗಿ, ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು. ಆನೆಗೊಂದಿ ಕೇಂದ್ರೀಕರಿಸಿ ಒಂದು ಹೊಸ ಪೊಲೀಸ್ ಠಾಣೆ ಸ್ಥಾಪನೆ ಆಗಬೇಕು ಎಂದು ಹಿರಿಯರೊಬ್ಬರು ಹಿಂದಿನ ಕಹಿ ಘಟನೆ ನೆನಪು ಮಾಡಿಕೊಂಡರು.