ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗುತ್ತಿದ್ದು, ಮುಂಜಾಗ್ರತೆಯ ಕ್ರಮವಾಗಿ ಶುಕ್ರವಾರ ಸಂಜೆಯಿಂದ ಹೊರಹರಿವನ್ನು 6000 ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ. ಜೂನ್ ಎರಡನೇಯ ವಾರದಲ್ಲಿಯೇ ಆಲಮಟ್ಟಿ ಜಲಾಶಯದಲ್ಲಿ 62.3 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 12,134 ಕ್ಯುಸೆಕ್ ಒಳಹರಿವಿದ್ದು, ಜಲಾಶಯದ ಮಟ್ಟ 514.91 ಮೀ ಇದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಿಲ್ಲ. ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರ ರಾಜಾಪುರ ಬಳಿ ಕೃಷ್ಣೆಯ ಹರಿವು 9000 ಕ್ಯುಸೆಕ್ ಇದ್ದು, ದೂಧಗಂಗಾ ನದಿ ಬಂದು ಸೇರುವ ಕಲ್ಲೋಳ ಬ್ಯಾರೇಜ್ ಬಳಿ 16,000 ಕ್ಯುಸೆಕ್ ನದಿಯ ಹರಿವಿದೆ.
ಶುಕ್ರವಾರ ಕೊಯ್ನಾದಲ್ಲಿ 15 ಮಿ.ಮೀ, ನವಜಾದಲ್ಲಿ 10 ಮಿ.ಮೀ, ಮಹಾಬಳೇಶ್ವರದಲ್ಲಿ 12 ಮಿ.ಮೀ.ಮಳೆಯಾಗಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಂಗಾರು ಮಳೆ ಆರಂಭಗೊಂಡಿಲ್ಲ. ಹೀಗಾಗಿ ಸದ್ಯ ಯಾವುದೇ ನೆರೆಯ ಆತಂಕವಿಲ್ಲ.ಕಾಲುವೆಗಳ ದುರಸ್ತಿಗೆ ಆಗ್ರಹ: ಇನ್ನೂ ಕೆಲ ದಿನಗಳಲ್ಲಿ ಕಾಲುವೆಗೂ ನೀರು ಹರಿವು ಆರಂಭಗೊಳ್ಳುತ್ತದೆ. ಹೀಗಾಗಿ ಕೆಬಿಜೆಎನ್‌ಎಲ್ ಅಧಿಕಾರಿಗಳು ತ್ವರಿತವಾಗಿ ಕಾಲುವೆಗಳನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛಗೊಳಿಸಬೇಕಯ ಎಂದು ಕೃಷ್ಣಾ ಕಾಡಾದ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.