ಎಸ್.ಜಿ. ತೆಗ್ಗಿನಮನಿ
ನರಗುಂದ: ನರೇಗಾ ಯೋಜನೆಯಡಿ ಸಾಮೂಹಿಕ ಕಾಮಗಾರಿಗಳಲ್ಲಿ ಮಹಿಳಾ ಕೂಲಿಕಾರರು ಪುರುಷ ಕೂಲಿಕಾರರಿಗಿಂತ ಹೆಚ್ಚು ಪ್ರಮಾಣದಲ್ಲಿ ಭಾಗವಹಿಸುತ್ತಿದ್ದಾರೆ.ತಾಲೂಕಿನಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿರದ ಸಾಧನೆ ಈ ವರ್ಷ ಆಗಿದೆ. ಈ ಆರ್ಥಿಕ ವರ್ಷದಲ್ಲಿ ಮಹಿಳಾ ಕೂಲಿಕಾರರ ಭಾಗವಹಿಸುವಿಕೆ ಪ್ರಮಾಣ ಶೇ. 50.36 ಆಗಿದೆ. ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ನರೇಗಾ ಕಾಮಗಾರಿಯಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳಾ ಕಾರ್ಮಿಕರಿಗೂ ₹349 ಕೂಲಿ ಮೊತ್ತ ನೀಡುತ್ತಿದೆ.
ಗ್ರಾಪಂ ವ್ಯಾಪ್ತಿಗಳಲ್ಲಿ ಯುವಕ ಮಂಡಲಗಳ ಸಭೆ, ಕೂಲಿಕಾರರ ಸಭೆ, ಮಹಿಳಾ ಸ್ತ್ರೀ ಶಕ್ತಿ ಸಭೆ ನಡೆಸಿ, ನರೇಗಾ ಯೋಜನೆ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ ಎಂದು ತಾಪಂ ಅಧಿಕಾರಿಗಳು ಹೇಳಿದರು.
ನರೇಗಾ ಗುರಿ: 2024-25ನೇ ಸಾಲಿನಲ್ಲಿ ತಾಲೂಕಿನ 13 ಗ್ರಾಪಂಗಳ ವ್ಯಾಪ್ತಿಯಲ್ಲಿ ಒಟ್ಟು 2,29,798 ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿತ್ತು. ಗುರಿಗೆ ಅನುಗುಣವಾಗಿ ಸದ್ಯ ಒಟ್ಟು 1,85,496 ಮಾನವ ದಿನಗಳ ಕೆಲಸ ಮಾಡಲಾಗಿದೆ. ಈ ಪೈಕಿ 93,420 ಮಾನವ ದಿನಗಳಲ್ಲಿ ಮಹಿಳಾ ಕೂಲಿಕಾರರು ಕೆಲಸ ಮಾಡಿದ್ದಾರೆ.ವಿವರ: ನರೇಗಾ ಕಾಮಗಾರಿ ಮಾನವ ದಿನಗಳ ಸೃಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ 2020-21ನೇ ಸಾಲಿನಲ್ಲಿ ಶೇ. 41.48ರಷ್ಟಿದ್ದರೆ, 2021-22ನೇ ಸಾಲಿನಲ್ಲಿ 41.39ರಷ್ಟಿತ್ತು. 2022-23ನೇ ಸಾಲಿನಲ್ಲಿ 45.47 ರಷ್ಟಿದ್ದರೆ 2023-24ರಲ್ಲಿ 48.77ರಷ್ಟಿತ್ತು. ಸದ್ಯ 2024-25ರ ಆರ್ಥಿಕ ವರ್ಷ ಆರಂಭವಾಗಿ ಮೂರು ತಿಂಗಳು ಕಳೆಯುವುದರೊಳಗೆ ತಾಲೂಕಿನ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ. 50.36ರಷ್ಟಾಗಿದೆ.ಈ ವರ್ಷ ಪ್ರಾರಂಭದಲ್ಲಿ ದುಡಿಯೋಕೆ ಕೆಲಸ ಇಲ್ಲ ಎಂಬ ಚಿಂತೆ ಇತ್ತು. ಆದರೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಿದರು. ಒಡ್ಡಿನ (ಬದು ನಿರ್ಮಾಣ) ಕೆಲಸಕ್ಕೆ ಹೋಗಿದ್ದರಿಂದ ನಮಗೆ ಗುಳೆ ಹೋಗುವುದು ತಪ್ಪಿತು. ಕೆಲಸ ಮಾಡಿ ಬಂದಿರುವ ಹಣದಿಂದ ಮಕ್ಕಳ ಶಾಲೆ ಖರ್ಚು, ಕುಟುಂಬ ನಿರ್ವಹಣೆ ಮಾಡಿಕೊಂಡಿದ್ದೇವೆ ಎಂದು ಬೆನಕನಕೊಪ್ಪ ಗ್ರಾಮದ ಕೂಲಿಕಾರ ಮಹಿಳೆ ಮಂಜುಳಾ ಗೊಬ್ಬರಗುಂಪಿ ಹೇಳಿದರು.
ನರಗುಂದ ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮನೆ-ಮನೆಗೆ ಹೋಗಿ ಯೋಜನೆಯ ಉದ್ದೇಶ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮಹಿಳಾ ಕೂಲಿಕಾರರಿಗೆಂದೇ ಪ್ರತ್ಯೇಕವಾಗಿ ಸಮುದಾಯ ಕಾಮಗಾರಿ ಆರಂಭಿಸಲಾಯಿತು. ಕಾಯಕಬಂಧುಗಳ ನೇಮಕದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಯಿತು. ಕಾಯಕಬಂಧುಗಳಿಗೆ ಸೂಕ್ತ ತರಬೇತಿ ನೀಡಿ, ಯೋಜನೆಯಡಿ ಮಹಿಳಾ ಕೂಲಿಕಾರರನ್ನು ಸಂಘಟಿಸಿ, ನರೇಗಾ ಕೆಲಸದಲ್ಲಿ ಮಹಿಳೆಯರನ್ನು ತೊಡಗಿಸಿಕೊಂಡಿದ್ದು, ಮಹಿಳಾ ಕೂಲಿಕಾರರ ಪ್ರಮಾಣ ಹೆಚ್ಚಳಕ್ಕೆ ಸಹಾಯಕವಾಯಿತು ಎಂದು ಗ್ರಾಮೀಣ ಉದ್ಯೋಗ ತಾಪಂ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಹೇಳಿದರು.