ಬದುಕಲ್ಲಿ ಶ್ರದ್ಧೆ, ಶಿಸ್ತು ಮೈಗೂಡಿಸಿಕೊಳ್ಳಿ: ಶ್ರೀ

KannadaprabhaNewsNetwork |  
Published : Jul 09, 2025, 12:18 AM IST
8ಎಚ್ಎಸ್ಎನ್14 :  | Kannada Prabha

ಸಾರಾಂಶ

ಹಾಸನ: ಶಿಕ್ಷಣ ಭವಿಷ್ಯವನ್ನು ರೂಪಿಸುವ ಅಡಿಗಲ್ಲು. ಇದರಿಂದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಹಾಗೆಯೇ ಉತ್ತಮ ಸಾಧನೆಗಳನ್ನು ಮಾಡಲು ಶಿಕ್ಷಣ ಸಹಕಾರಿ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡಶ್ರೀ ಬಾ. ನಂ. ಲೋಕೇಶ್‌ ನುಡಿದರು.

ಹಾಸನ: ಶಿಕ್ಷಣ ಭವಿಷ್ಯವನ್ನು ರೂಪಿಸುವ ಅಡಿಗಲ್ಲು. ಇದರಿಂದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಹಾಗೆಯೇ ಉತ್ತಮ ಸಾಧನೆಗಳನ್ನು ಮಾಡಲು ಶಿಕ್ಷಣ ಸಹಕಾರಿ ಎಂದು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡಶ್ರೀ ಬಾ. ನಂ. ಲೋಕೇಶ್‌ ನುಡಿದರು.

ವಿದ್ಯಾನಗರದ ಅಧ್ಯಯನ ಪದವಿಪೂರ್ವ ಕಾಲೇಜು ವತಿಯಿಂದ ಶುಭೋದಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ನವಪಲ್ಲವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನ್ನಾಡುತ್ತಾ, ಈಗಾಗಲೇ ಪ್ರೌಢ ಶಿಕ್ಷಣ ಮುಗಿಸಿಕೊಂಡು ಕಾಲೇಜು ಶಿಕ್ಷಣ ಪಡೆಯುತ್ತಿದ್ದೀರಿ. ಈ ಹಂತದಲ್ಲಿ ಅಧ್ಯಯನ ಮತ್ತು ಅಧ್ಯಾಪನ ಎರಡೂ ಅಂತರ್ಗತವಾಗಿ ರೂಪುಗೊಳ್ಳಬೇಕು. ಭವಿಷ್ಯದ ರಹದಾರಿಗೆ ಬುನಾದಿ ಈ ಹಂತದಲ್ಲಿ ಹಾಕಬೇಕು. ಭವಿಷ್ಯದಲ್ಲಿ ತಾನು ಏನಾಗಬೇಕು ಎಂಬುದು ಈ ಹಂತದಲ್ಲಿ ನಿರ್ಧಾರವಾಗುತ್ತದೆ. ಶ್ರದ್ಧೆ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಿ.

ಒಂದು ಉತ್ತಮ ವಿದ್ಯಾ ಸಂಸ್ಥೆಯನ್ನು ಕಟ್ಟುವುದು ಸುಲಭವಲ್ಲ. ಬಿಳಿ ಆನೆಯನ್ನು ಸಾಕಿದಷ್ಟೇ ಕ್ಲಿಷ್ಟಕರವಾಗುತ್ತದೆ. ನಾಡಿನ ಪ್ರಸಿದ್ದ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಅಧ್ಯಯನ ಪದವಿ ಪೂರ್ವ ಕಾಲೇಜು ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿದೆ. ತೃತೀಯ ದರ್ಜೆಯ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವಂತೆ ತರಭೇತಿಗೊಳಿಸುತ್ತಿರುವುದು ಈ ಕಾಲೇಜಿನ ಹಿರಿಮೆ. ಇಂತಹ ಒಳ್ಳೆಯ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೇ ಧನ್ಯರು ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಚರಣ್ ಕುಮಾರ್ ಮಾತನಾಡುತ್ತಾ ಹೆಚ್ಚು ಸುಶಿಕ್ಷಿತರಿರುವ ದೇಶ ವಿಶ್ವ ಗುರುವಾಗಿ ಪರಿಗಣಿತವಾಗುತ್ತದೆ. ದಾನ ದಾನಕ್ಕಿಂತ ವಿದ್ಯಾದಾನ ಮೇಲೆಂಬುದನ್ನರಿತ ನಾವು ಸುಶಿಕ್ಷಿತರನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಹೆಚ್.ವಿ. ಚೇತನ್ ಮಾತನಾಡುತ್ತಾ ಜನಿಸಿದ ಪ್ರತಿಯೊಬ್ಬರೂ ಸಮಾಜಕ್ಕೆ ಏನಾದರೊಂದು ಕೊಡುಗೆಯನ್ನು ನೀಡಬೇಕು. ಆಗ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಶಿಕ್ಷಣದ ಮೂಲಕ ಸಮಾಜದ ಅಭ್ಯೋದಯಕ್ಕೆ ಪೂರಕವಾಗುವ ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡಬೇಕೆಂದು ವಿದ್ಯಾ ಸಂಸ್ಥೆಯನ್ನು ತೆರೆಯಲಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಹೇಮಂತ್ ಕುಮಾರ್ ಎಚ್. ಎಸ್ ಮಾತನಾಡುತ್ತಾ, ಒಂದು ಒಳ್ಳೆಯ ಸಮಾಜಮುಖಿ ಕೆಲಸ ಮಾಡುತ್ತಿರುವಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಎಲ್ಲಾ ಸವಾಲುಗಳನ್ನು ಎದುರಿಸಿ ಮೇಲೆ ಬಂದಾಗ ಜೀವನ ಸಾಕ್ಷಾತ್ಕಾರವಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪ ಪ್ರಾಂಶುಪಾಲರಾದ ಮೋಹನ್ ಕುಮಾರ್ ಎಚ್. ಜಿ. ವಿದ್ಯಾರ್ಥಿ ಜೀವನ ಒಂದು ತಪಸ್ಸಿದ್ದಂತೆ. ಗುರಿಯನ್ನು ತಲುಪುವುದಷ್ಟೇ ಧ್ಯೇಯವಾಗಬೇಕು ಎಂದು ಮಾರ್ಮಿಕವಾಗಿ ನುಡಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನ ಮನ ಗೆದ್ದಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

PREV

Recommended Stories

ಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್ ರೇವಣ್ಣಗೆ ತಿಂಗಳಿಗೆ 5 ಸಾವಿರ ರೂ. ಸಂಬಳದ ಕೆಲಸ
ಇಂದು ದೇಶಾದ್ಯಂತ ಖಗ್ರಾಸ ಚಂದ್ರ ಗ್ರಹಣ - ರಾತ್ರಿ 9.57ಕ್ಕೆ ಆರಂಭ, ತಡರಾತ್ರಿ 1.26ಕ್ಕೆ ಮುಕ್ತಾಯ