ಕನ್ನಡಪ್ರಭ ವಾರ್ತೆ ಮಂಡ್ಯ
‘ವಿದ್ಯಾರ್ಥಿಗೊಂದು ಮರ’ ಪರಿಕಲ್ಪನೆಯಡಿ ಹೊಸದಾಗಿ ಆರನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರು. ತಾವು ನೆಟ್ಟ ಗಿಡವನ್ನು ಪ್ರತಿದಿನ ವಿದ್ಯಾರ್ಥಿಗಳೇ ನೀರೆರೆದು ಪೋಷಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸುವ ವೇಳೆ ಈ ಗಿಡ ಮರವಾಗಿ ಬೆಳೆದು ನಿಲ್ಲುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಏಕ್ ಪೇಡ್ ಮಾ ಕೇ ನಾಮ್ ಉಪಕ್ರಮದಿಂದ ಪ್ರೇರಿತರಾಗಿ ಸತ್ಯಸಾಯಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ. ಗೌರವ್ ಈ ಪರಿಕಲ್ಪನೆಗೆ ಚಾಲನೆ ನೀಡಿದರು.ಹೊಂಗೆ, ಮಾವು, ಹಲಸು, ತೇಗ ಸೇರಿದಂತೆ ಹತ್ತಾರು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರನ್ನು ಎರೆಯಲಾಯಿತು. ಈ ಗಿಡಗಳು ಮಕ್ಕಳ ಜತೆ ಬೆಳೆದು ನೆರಳು, ಹಣ್ಣುಗಳನ್ನು ನೀಡುತ್ತಾ ಜನೋಪಯೋಗಿಯಾಗುತ್ತವೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಗುರುಕುಲ ಲೋಕಸೇವಾ ಸಂಸ್ಥೆಯ ಅಧೀನದ ಈ ಶಾಲೆಯಲ್ಲಿ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಶಾರದಾ ನಿಕೇತನ ಗುರುಕುಲದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ರಾಜು, ಚೇತನ್, ಹರ್ಷವರ್ಧನ್, ಶಿಕ್ಷಕ ಸಿಬ್ಬಂದಿ ಎಂ.ಕಾರ್ತಿಕ್‌ಗೌಡ, ಎಂ.ಸಿ.ಮನು ಭಾಗವಹಿಸಿದ್ದರು.