ಮಿಮ್ಸ್‌ಗೆ ಸೇರಿದ ಒತ್ತುವರಿ ಜಾಗ ತೆರವಿಗಾಗಿ ಆಮರಣಾಂತ ಉಪವಾಸ 2ನೇ ದಿನಕ್ಕೆ

KannadaprabhaNewsNetwork |  
Published : Sep 09, 2026, 01:45 AM IST
8ಕೆಎಂಎನ್ ಡಿ14 | Kannada Prabha

ಸಾರಾಂಶ

1941, 47 ಹಾಗೂ 48ರ ಅವಧಿಯಲ್ಲಿ ಅಂದಿನ ಮೈಸೂರು ಮಹಾರಾಜರು ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ರೈತರಿಂದ 78.17 ಎಕರೆ ಜಮೀನನ್ನು ಭೂಸ್ವಾನ ಮಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈ ಜಾಗವನ್ನು ಅತಿಕ್ರಮ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಜಮೀನು ತೆರವುಗೊಳಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್‍ಯಕರ್ತ ಕೆ.ಆರ್. ರವೀಂದ್ರ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರ ಬೆಂಬಲದೊಂದಿಗೆ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸುವ ಮೂಲಕ ಬೆಂಬಲ ಸೂಚಿಸಿದರು.

ಹೋರಾಟಗಾರ ಕೆ.ಆರ್.ರವೀಂದ್ರ ಮಾತನಾಡಿ, 1941, 47 ಹಾಗೂ 48ರ ಅವಧಿಯಲ್ಲಿ ಅಂದಿನ ಮೈಸೂರು ಮಹಾರಾಜರು ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ರೈತರಿಂದ 78.17 ಎಕರೆ ಜಮೀನನ್ನು ಭೂಸ್ವಾನ ಮಾಡಿಕೊಂಡಿದ್ದರು. ನಂತರದ ದಿನಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈ ಜಾಗವನ್ನು ಅತಿಕ್ರಮ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ತಮಿಳು ಕಾಲೋನಿ ಸಹ ನಿರ್ಮಾಣವಾಯಿತು. ಈ ಎಲ್ಲ ಜಾಗವನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಜಾಗವನ್ನು ತೆರವುಗೊಳಿಸುವಂತೆ ನಾವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದೇವು. ಅದರಂತೆ ನ್ಯಾಯಾಲಯ ತಮಿಳುಕಾಲೋನಿ ನಿವಾಸಿಗಳನ್ನು ತೆರವುಗೊಳಿಸುಂತೆ ಆದೇಶ ನೀಡಿತ್ತು. 16 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಂಡ್ಯ ಬಳಿ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಅಲ್ಲಿಗೆ ನಿವಾಸಿಗಳನ್ನು ಸ್ಥಳಾಂತರ ಮಾಡುವಲ್ಲಿ ಜಿಲ್ಲಾಡಳಿತ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ವಿಫಲವಾಗಿದೆ ಎಂದು ಕಿಡಿಕಾರಿದರು.

ಈ ಮಧ್ಯೆ ತಮಿಳುಕಾಲೋನಿ ನಿವಾಸಿಗಳು ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ. ಆದರೆ, ಅದನ್ನು ತೆರವುಗೊಳಿಸುವಲ್ಲೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ಇಚ್ಚಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾರ್ಣವಾಗಿದೆ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ಮಾರಕ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಎಷ್ಟೋ ಮಂದಿ ಸಾಯುವಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಇಷ್ಟಾದರೂ ಕೇವಲ ತಮಿಳುನಿವಾಸಿಗಳ ಒಂದು ಸಾವಿರ ಮತಗಳಿಗಾಗಿ ಈ ಜಾಗವನ್ನು ತೆರವು ಮಾಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸ್ವಾಸ್ತ್ಯ ಸುರಕ್ಷಾ ಆರೋಗ್ಯ ಯೋಜನೆಯಡಿ 311 ಕೋಟಿ ಹಾಗೂ ಸೂಪರ್ ಸ್ಪೆಷಾಲಿಟಿ ಹಾಗೂ ಟ್ರಾಮಾಕೇರ್‌ಗಾಗಿ 111 ಕೋಟಿ ಮಂಜೂರಾಗಿದೆ. ಇದಕ್ಕೆ 10 ಎಕರೆ ಜಮೀನು ಬೇಕಾಗಿದೆ. ಮಿಮ್ಸ್ ನಿರ್ದೇಶಕರೂ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಜಾಗದ ಕೊರತೆಯಿಂದ ಈ ಹಣ ವಾಪಸ್ಸು ಹೋಗುವ ಸಾಧ್ಯತೆಗಳಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನಾವು 6 ಬೇಡಿಕೆಗಳಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ. ತಮಿಳುಕಾಲೋನಿ ಜಾಗ ತೆರವಿಗೆ ಇರುವ ನ್ಯಾಯಾಲಯದ ತಡೆಯಾಜ್ಞೆ ತೆರವು ಮಾಡಿಸಬೇಕು. ಮಿಮ್ಸ್‌ನವರು ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿದ್ದು, ಇದಕ್ಕೆ ವಿಶೇಷ ವಕೀಲರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸ್ಲಂಬೋರ್ಡ್ ಹಾಗೂ ನಗರಸಭೆ ವಕೀಲರನ್ನು ಬದಲಾವಣೆ ಮಾಡಬೇಕು. ಮಂಡ್ಯ ತಹಸೀಲ್ದಾರ್ ಹಾಗೂ ಮಂಡ್ಯ ನಗರಸಭೆ ಆಯುಕ್ತರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ 2ನೇ ದಿನವೂ ಧರಣಿ ಮುಂದುವರಿಸಿದರು.

ಡೀಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ದೂರವಾಣಿ ಕರೆ ಮಾಡಿ ಧರಣಿ ಕೈಬಿಡುವಂತೆ ಮನವಿ ಮಾಡಿದ್ದು, ನಮ್ಮ ಬೇಡಿಕೆ ಈಡೇರಿಸಿದರಷ್ಟೇ ಸತ್ಯಾಗ್ರಹ ಕೈಬಿಡುವುದಾಗಿ ಸ್ಪಷ್ಟವಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ. ನಾಗಣ್ಣಗೌಡ, ಎಚ್.ಡಿ.ಜಯರಾಂ, ಕೃಷ್ಣ, ಪುರುಷೋತ್ತಮ್, ಜೈಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್ ಸೇರಿದಂತೆ ಆಟೋ ಚಾಲಕರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತ ಸಮುದಾಯದ ನೌಕರರು ಸಂಘಟಿತರಾಗಬೇಕು: ಕೆ.ಶೇಷಾದ್ರಿ
ಹನೂರು: ಹಳ್ಳದ ದಂಡೆಯಲ್ಲೇ ಅಂತ್ಯಸಂಸ್ಕಾರ