ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಬಿ.ಎಸ್.ಸುರೇಶ್, 2020ರ ಡಿಸೆಂಬರ್ ಮತ್ತು 2021ರ ಏಪ್ರಿಲ್ ಮುಷ್ಕರಕ್ಕೆ ಸಂಬಂಧಿಸಿ ಕಾರ್ಮಿಕರ ವಿರುದ್ಧ ಕೈಗೊಂಡ ಎಲ್ಲಾ ಶಿಸ್ತಿನ ಕ್ರಮ, ದಾಖಲಾದ 60ಕ್ಕೂ ಹೆಚ್ಚು ಪ್ರಕರಣವನ್ನು ರದ್ದು ಮಾಡಬೇಕು. ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ನಿಯೋಜಿಸಬೇಕು ಎಂದು ಒತ್ತಾಯಿಸಿದರು.
2020ರ ಜ.1ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿ ಪಾವತಿ, ಮುಖ್ಯವಾಗಿ 2020ರಿಂದ ನಿವೃತ್ತಿಯಾದ ನೌಕರರಿಗೆ ವೇತನ ವಿಮರ್ಶೆ ಮಾಡಿ ಬಾಕಿ ಹಣ ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದರು.ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ಮತ್ತು ಸೌಲಭ್ಯವನ್ನು ಸಾರಿಗೆ ನೌಕರರಿಗೂ ವಿಸ್ತರಿಸಬೇಕು. ಕಾರ್ಮಿಕರ ಸಂಸ್ಥೆಗೆ ಕೂಡಲೇ ಚುನಾವಣೆ ನಡೆಸಿ, ಮಾನ್ಯತೆ ಪ್ರಶ್ನೆ ಇತ್ಯರ್ಥ ಮಾಡಬೇಕು. ಜತೆಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತಕ್ಷಣ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ಚಾಲನೆ, ತಾಂತ್ರಿಕ, ಭದ್ರತಾ ಸಿಬ್ಬಂದಿ ನೇಮಕಾತಿ ಪದ್ಧತಿ ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ಧರಣಿ ನಡೆಸುವುದಾಗಿ ತಿಳಿಸಿದರು.