ಕನ್ನಡಪ್ರಭವಾರ್ತೆ ಸಾಗರ
ಜನಾಂದೋಲನ ಜಾಥಾಕ್ಕೆ ಚಾಲನೆ ನೀಡಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಹೋರಾಟದ ಮೂಲಕ ಭೂಮಿಯ ಹಕ್ಕು ದಕ್ಕಿಸಿಕೊಳ್ಳುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಹೋರಾಟ, ಜೈಲು, ಅನ್ಯಾಯ ಬಯಲು ಎನ್ನುವುದೇ ನಮ್ಮ ಹೋರಾಟದ ಬದುಕಿನ ಘೋಷವಾಕ್ಯವಾಗಿತ್ತು. ಭೂ ಮಂಜೂರಾತಿಗಾಗಿ ಈ ನೆಲದಲ್ಲಿ ಅನೇಕ ಹೋರಾಟಗಳು ನಡೆದಿವೆ. ರೈತರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ಧ್ವನಿ ಎತ್ತುವ ರೈತರಿಗೆ ತಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಸಿಗಂಧೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿ, ರೈತರು ಭೂಮಿಯ ಹಕ್ಕು ದೊರಕಿಸಿಕೊಳ್ಳಲು ಪಕ್ಷಾತೀತ ಹೋರಾಟ ಅಗತ್ಯ. ಇದು ನಮ್ಮ ಜೀವನದ ಹೋರಾಟ, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈಗಾಗಲೆ ಚಳವಳಿ ಮೂಲಕ ಗೇಣಿಹಕ್ಕು ಪಡೆದಿದ್ದೇವೆ. ಬಗರ್‌ಹುಕುಂ ಭೂಮಿ ಪಡೆಯಲು ಇನ್ನೊಂದು ದೊಡ್ಡಮಟ್ಟದ ಹೋರಾಟದ ಅಗತ್ಯವಿದ್ದು, ಅದಕ್ಕೆ ಶೀಘ್ರ ಚಾಲನೆ ಸಿಗಲಿದೆ ಎಂದು ತಿಳಿಸಿದರು.ನಾವು 64 ವರ್ಷಗಳಿಂದ ಉಳಿಸಿಕೊಂಡು ಬಂದ ಜಮೀನು ವಜಾ ಮಾಡುತ್ತಾರೆ ಎಂದರೆ ಸರ್ಕಾರದವರಿಗೆ ತಲೆ ಇದೆಯಾ ಎಂದು ಪ್ರಶ್ನಿಸಬೇಕಾಗುತ್ತದೆ. ನಾವೇನು ಬ್ರಿಟಿಷರ ಸರ್ಕಾರದಲ್ಲಿ ಇಲ್ಲ. ನಮ್ಮವರದ್ದೇ ಸರ್ಕಾರವಾಗಿದ್ದು, ರೈತರ ಭೂಹಕ್ಕು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಮಲೆನಾಡಿನ ರೈತರು ಸಂಕಷ್ಟದ ನಡುವೆ ಸಂಘರ್ಷದ ಬದುಕು ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಶರಾವತಿ ಮುಳುಗಡೆ ಸಂತ್ರಸ್ತರು ಸೇರಿದಂತೆ ಜಿಲ್ಲೆಯ ಅನೇಕ ವಿದ್ಯುತ್ ಯೋಜನೆಗಳಿಗೆ ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಬಗರ್‌ಹುಕುಂಗೆ ಅರ್ಜಿ ಸಲ್ಲಿಸಿದ್ದರೂ ಈ ತನಕ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೊರಬ ತಾಲೂಕು ಶೀಗೆಹಳ್ಳಿ ಗ್ರಾಮದ 1000ಕ್ಕೂ ಹೆಚ್ಚು ಕುಟುಂಬಗಳಿಗೆ ಒಕ್ಕಲೆಬ್ಬಿಸಲು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ರೈತರು ಬಾರುಕೋಲು ಬಾರಿಸಿಕೊಳ್ಳತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಗಣಪತಿ ದೇವಸ್ಥಾನ ಆವರಣದಲ್ಲಿ ರೈತ ಜಾಥಾಕ್ಕೆ ಕಾಗೋಡು ತಿಮ್ಮಪ್ಪ ಚಾಲನೆ ನೀಡಿ ಮಾತನಾಡಿದರು. ನಂತರ ಸಿಗಂದೂರು ಧರ್ಮದರ್ಶಿ ಡಾ. ರಾಮಪ್ಪ ಮಾತನಾಡಿದರು. ಸಂಘಟಕರು ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಭಾಷಣ ಮಾಡಲು ಮೈಕ್ ಕೊಟ್ಟಾಗ ಸಿಗಂದೂರು ರಾಮಪ್ಪ ಸಿಡಿದು ನಿಂತರು. ಸಂಘಟಕರ ಕೈಯಿಂದ ಮೈಕ್ ಕಿತ್ತುಕೊಂಡು ಎಸೆದು ಮೆರವಣಿಗೆ ಪ್ರಾರಂಭ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘಟಕರು ಎಲ್ಲರನ್ನೂ ಶಾಂತಗೊಳಿಸಿ ಮೆರವಣಿಗೆಯಲ್ಲಿ ಕರೆದೊಯ್ದ ಘಟನೆ ನಡೆಯಿತು.