ಗ್ರಾಮೀಣ ಅಂಚೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork | Published : Dec 15, 2023 1:30 AM

ಸಾರಾಂಶ

ಗ್ರಾಮೀಣ ಅಂಚೆ ನೌಕರರಿಂದ ಅನಿರ್ದಿಷ್ಟಾವಧಿ ಧರಣಿವೇತನ ಭತ್ಯೆ ಹೆಚ್ಚಳ, ಆರೋಗ್ಯ ವಿಮೆ ನೀಡುವುದಾಗಿ ಹೇಳಿ ವಂಚನೆ

ವೇತನ ಭತ್ಯೆ ಹೆಚ್ಚಳ, ಆರೋಗ್ಯ ವಿಮೆ ನೀಡುವುದಾಗಿ ಹೇಳಿ ವಂಚನೆಕನ್ನಡಪ್ರಭ ವಾರ್ತೆ ಮಂಡ್ಯ

ಅಂಚೆ ಇಲಾಖೆ ನೌಕರರಿಗೆ ನೀಡುತ್ತಿರುವ ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮೀಣ ಅಂಚೆ ನೌಕರರು ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ನಗರದ ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ನೌಕರರು ದಿನವಿಡಿ ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ನೀಡುತ್ತಿರುವ ಸಾಮಾಜಿಕ ಭದ್ರತಾ ಯೋಜನೆಗಳನ್ನು ಭಾರತದ ಮೂಲೆ ಮೂಲೆಗಳಲ್ಲಿರುವ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಗಳಿಗೂ ತಲುಪಿಸುತ್ತಿರುವ ೧.೩೦ ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳನ್ನು ನಿರ್ವಹಿಸುತ್ತಿರುವ ಜೆಡಿಎಸ್ ನೌಕರರಿಗೆ ಇಲಾಖಾ ನೌಕರರಿಗೆ ಸಮನಾಂತರವಾಗಿ ಸವಲತ್ತುಗಳನು ನೀಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೦೧೮ರಲ್ಲಿ ೧೬ ದಿನಗಳ ಕಾಲ ಮುಷ್ಕರ ನಡೆಸಿದ್ದು, ೨೦೨೨ರಲ್ಲಿ ದೆಹಲಿಯ ರಾಜ್‌ಘಾಟ್‌ನಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಇಲಾಖೆಯ ಉನ್ನತಾಧಿಕಾರಿಗಳು ನೀಡಿದ ಭರವಸೆಯ ಆಧಾರದ ಮೇಲೆ ಹೋರಾಟವನ್ನು ಹಿಂದೆ ಪಡೆಯಲಾಗಿತ್ತು. ಆ ಸಂದರ್ಭದಲ್ಲಿ ೧, ೨೪, ೩೬ ವರ್ಷಗಳ ಸೇವಾ ಹಿರಿತನದ ಮೇಲೆ ಹೆಚ್ಚುವರಿ ಇಂಕ್ರಿಮೆಂಟ್, ಆರೋಗ್ಯ ವಿಮೆ ಗ್ರೂಪ್ ಇನ್ಷೂರೆನ್ಸ್ ಮತ್ತಿತರ ಬೇಡಿಕೆಗಳ ಕುರಿತು ಸದ್ಯದಲ್ಲೇ ಆದೇಶ ನೀಡಲಾಗುವುದು ಎಂಬ ಆಶ್ವಾಸನೆಯನ್ನೂ ನೀಡಿ ನಮ್ಮನ್ನು ವಂಚಿಸಲಾಯಿತು ಎಂದು ಆರೋಪಿಸಿದರು.

ನಮ್ಮ ನ್ಯಾಯಯುತ ಬೇಡಿಕೆಗಳ ಕುರಿತು ಸೂಕ್ಷ್ಮ ಸ್ಪಂದನೆ ನೀಡಿದಿದ್ದರಿಂದ ಅಂತಿಮವಾಗಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲೇಬೇಕಾದ ಅನಿವಾರ್ಯತೆ ಇದೆ. ಇನ್ನಾದರೂ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಮಂಡ್ಯ ಅಂಚೆ ವಿಭಾಗದ ಎಐಜಿಡಿಎಸ್‌ಯು ಅಧ್ಯಕ್ಷ ಎನ್.ಕೆ. ಸತೀಶ್‌ಚಂದ್ರ, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಎಂ.ಕೆ. ಶಿವಲಿಂಗಯ್ಯ, ಎನ್‌ಯುಜಿಡಿಎಸ್ ಅಧ್ಯಕ್ಷ ಎಸ್.ರಮೇಶ್, ಕಾರ್ಯದರ್ಶಿ ಎ.ಆರ್.ಹರೀಶ್, ಖಜಾಂಚಿ ಎನ್.ಜೆ. ಹರಿಣಿ ಇತರರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Share this article