ಮನೆಗಳನ್ನು ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork | Published : May 22, 2025 1:09 AM
ಕಿಕ್ಕೇರಿಯ ಹಳೇ ಸಂತೇಮಾಳದ ಪಕ್ಕದಲ್ಲಿ ಮಾದಿಗ ಬಡಾವಣೆ ಇದ್ದು, ಇಲ್ಲಿ ದಲಿತ ಕುಟುಂಬಗಳು ಹಲವಾರು ವರ್ಷಗಳಿಂದ ವಾಸವಾಗಿದ್ದಾರೆ. ಅವರವರ ಮನೆಗಳು ಅವರವರ ತಾತ, ಮುತ್ತಾನ ಹೆಸರಿನಲ್ಲಿ ಖಾತೆಯಾಗಿವೆ.
Follow Us

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿಯ ಹಳೇ ಸಂತೇಮಾಳದ ಪಕ್ಕದಲ್ಲಿರುವ ಮಾದಿಗ ಬಡಾವಣೆಯಲ್ಲಿ ವಾಸವಾಗಿರುವ ದಲಿತ ಕುಟುಂಬಗಳ ವಾರಸುದಾರರಿಗೆ ಮನೆಗಳ ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಹಾಗೂ ಸ್ವಚ್ಛತಾ ಕಾರ್ಯಕರ್ತರು ಬುಧವಾರ ನಗರದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿ ಧರಣಿ ಆರಂಭಿಸಿದ ಕಾರ್ಯಕರ್ತರು, ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಕಿಕ್ಕೇರಿಯ ಹಳೇ ಸಂತೇಮಾಳದ ಪಕ್ಕದಲ್ಲಿ ಮಾದಿಗ ಬಡಾವಣೆ ಇದ್ದು, ಇಲ್ಲಿ ದಲಿತ ಕುಟುಂಬಗಳು ಹಲವಾರು ವರ್ಷಗಳಿಂದ ವಾಸವಾಗಿದ್ದಾರೆ. ಅವರವರ ಮನೆಗಳು ಅವರವರ ತಾತ, ಮುತ್ತಾನ ಹೆಸರಿನಲ್ಲಿ ಖಾತೆಯಾಗಿವೆ. ಅವರೆಲ್ಲರೂ ಕಾಲವಾಗಿದ್ದು, ಸದ್ಯ ವಾಸವಾಗಿರುವ ಅವರ ಮಕ್ಕಳು, ಮೊಮ್ಮಕ್ಕಳ ಹೆಸರಿಗೆ ಮನೆಗಳನ್ನು ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಹಲವಾರು ಬಾರಿ ಅಧಿಕಾರಿಗಳು, ಸಂಬಂಧಿಸಿದ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಖಾತೆ ಮಾಡಿಕೊಡುವ ಭರವಸೆ ನೀಡಿದ್ದರು. ಆದರೆ, ಈವರೆವಿಗೂ ಖಾತೆ ಮಾಡಿಕೊಟ್ಟಿಲ್ಲ. ತಕ್ಷಣವೇ ಮನೆಗಳಲ್ಲಿ ವಾಸವಾಗಿರುವ ವಾರಸುದಾರರ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದೇವೆ ಎಂದರು.

ದಸಂಸ ಮುಖಂಡರಾದ ನಂಜುಂಡಮೌರ್ಯ, ದದ್ದಮ್ಮ, ಮಂಗಳಗೌರಿ, ನಾಗರಾಜು, ಚಲುವಯ್ಯ, ಸೋಮಶೇಖರ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಾಳೆ ಜಗಜ್ಯೋತಿ ಬಸವೇಶ್ವರರ 892ನೇ ಜಯಂತ್ಯುತ್ಸವ

ಪಾಂಡವಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಮೇ 23 ರಂದು ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ 892ನೇ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು. ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಘನ ಉಪಸ್ಥಿತಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸುವರು. ಬೇಬಿಮಠ ಚಂದ್ರವನ ಆಶ್ರಮದ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮಿ, ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮಿ ದಿವ್ಯ ನೇತೃತ್ವ, ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಕಂದೂರು ಮಠದ ಶ್ರೀ ಶರತ್ ಚಂದ್ರಸ್ವಾಮಿ ದಿವ್ಯ ಸಮ್ಮುಖ ವಹಿಸುವರು.

ವೀರಶೈವ ಲಿಂಗಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ , ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಇಂದ್ರೇಶ್ , ಬಿಜೆಪಿ ಮುಖಂಡ ಸಚ್ಚಿದಾನಂದ ಸೇರಿದಂತೆ ಹಲವರು ಭಾಗವಹಿಸುವರು.