ಇ ಸ್ವತ್ತಿಗೆ ಅಕ್ರಮ ಹಣ ವಸೂಲಿ ತಡೆಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮನವಿ

KannadaprabhaNewsNetwork | Published : May 22, 2025 1:09 AM
ತಾಲೂಕಿನ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರು ಮನೆಯ ಇ- ಸ್ವತ್ತು ಮಾಡಿಸಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಅವರನ್ನು ಸತಾಯಿಸಲಾಗುತ್ತಿದೆ.
Follow Us

ರಾಣಿಬೆನ್ನೂರು: ತಾಲೂಕಿನ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಇ- ಸ್ವತ್ತಿಗೆ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದು, ಅವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ನಗರದಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಪಂ ಇಒ ಪರಮೇಶ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ ಮಾತನಾಡಿ, ಇತ್ತೀಚೆಗೆ ತಾಲೂಕಿನ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸ್ಥರು ಮನೆಯ ಇ- ಸ್ವತ್ತು ಮಾಡಿಸಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಅವರನ್ನು ಸತಾಯಿಸಲಾಗುತ್ತಿದೆ. ಆದರೆ ಅರ್ಜಿ ಜತೆ ಹಣ ಕೊಟ್ಟರೆ ಒಂದು ತಿಂಗಳಲ್ಲಿ ಕೆಲಸ ಮಾಡಿ ಕೊಡುತ್ತಾರೆ. ಹಣ ಕೊಡದಿದ್ದರೆ ಆರು ತಿಂಗಳುಗಳಿಂದ ಒಂದು ವರ್ಷದವರೆಗೆ ಸತಾಯಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ಅದು ಸರಿ ಇಲ್ಲ, ಇದು ಸರಿಯಲ್ಲ ಎಂಬ ಹಾರಿಕೆ ಉತ್ತರ ಕೊಡುತ್ತಾರೆ. ಆದ್ದರಿಂದ ಅಕ್ರಮವಾಗಿ ಹಣ ವಸೂಲಿ ಮಾಡುವ ಅಧಿಕಾರಿಗಳ ಮೇಲೆ ಆದಷ್ಟು ಶೀಘ್ರ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ಒಂದು ಮನೆಯ ಇ- ಸ್ವತ್ತು ಮಾಡಿಕೊಡಲು ಗ್ರಾಪಂ ಅಧಿಕಾರಿಗಳು ನಾಲ್ಕರಿಂದ ಐದು ಸಾವಿರ ರು. ಲಂಚದ ಹಣ ಪಡೆಯುತ್ತಾರೆ. ಇಂಥವರ ವಿರುದ್ಧ ಕ್ರಮ ಜರುಗಿಸಬೇಕು. ಹಣವಿಲ್ಲದೆ ಇ- ಸ್ವತ್ತು ನೀಡುವಂತೆ ಮನವಿ ಮಾಡಿದರು. ರಾಜ್ಯ ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ಪರಶುರಾಮ ಕುರುವತ್ತಿ, ಸಿದ್ಧಾರೂಢ ಗುರುಂ, ಸಂಜೀವ್ ಕನವಳ್ಳಿ, ರಿಯಾಜ್ ದೊಡ್ಡಮನಿ, ಮರಡೆಪ್ಪ ಚಳಗೇರಿ, ಶೋಭಾ ಮುದೇನೂರು, ಮೃತುಂಜಯ ಕರಿಯಜ್ಜಿ, ರಮೇಶ ಪೂಜಾರ, ಮಾಲತೇಶ ಮ್ಯಾಗೇರಿ, ಅಣ್ಣಪ್ಪ ಜೆ.ಸಿ., ಮಂಜುನಾಥ ಶಂಭೋಜಿ, ಹನುಮಂತಗೌಡ ಪಾಟೀಲ, ತಿಪ್ಪೇಶ ಮಾದಾಪುರ, ಪರಶುರಾಮ ಕೋಲಕಾರ ಮತ್ತಿತರರಿದ್ದರು.ದೇಸಿ ತಳಿಗಳ ಸಂರಕ್ಷಣೆ, ಸಂಗ್ರಹಣೆ

ಹಾವೇರಿ: ದೇಸಿ ತಳಿಗಳ ಸಂರಕ್ಷಣೆ ಮಾಡುವುದು, ಉತ್ತೇಜನ ನೀಡುವುದು, ಜಿಲ್ಲೆಯಲ್ಲಿ ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಬೆಳೆಯ ತಳಿಗಳ ಸಂಗ್ರಹಣೆ ಹಾಗೂ ಸಂರಕ್ಷಣೆ ಮಾಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾದ್ಯಂತ ರೈತರ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವ ಮೂಲಕ ಸುಸ್ಥಿರ ಆಹಾರ ವ್ಯವಸ್ಥೆಗಾಗಿ ದೇಸಿ ತಳಿಗಳ ಸಂರಕ್ಷಣೆ ಮತ್ತು ಪ್ರಚಾರ ಕೈಗೊಳ್ಳಲಾಗುತ್ತಿದೆ. ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನೊಳಗೊಂಡಂತೆ ಜಿಲ್ಲೆಯ ಆಯಾ ತಾಲೂಕಿನ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳನ್ನು ಗುರುತಿಸುವುದು ಹಾಗೂ ಸಂರಕ್ಷಣೆ ಮಾಡುವುದು ಯೋಜನೆಯ ಉದ್ದೇಶವಾಗಿದ್ದು, ಗುರುತಿಸಿದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿ ಅವುಗಳ ವ್ಯಾಪ್ತಿ ಹೆಚ್ಚಿಸುವುದು. ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ ಮತ್ತು ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದಾಗಿದೆ.ಜಿಲ್ಲೆಯ ರೈತರು ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ವಿವಿಧ ಪ್ರಭೇದಗಳ ಬೆಳೆಗಳನ್ನು ಬೆಳೆಯುತ್ತಿರಬೇಕು ಮತ್ತು ಅವುಗಳು ಸ್ಥಳೀಯ ಕೃಷಿ ಪದ್ಧತಿ ಮತ್ತು ಆಯಾ ಪ್ರದೇಶಕ್ಕೆ ಹೊಂದಿಕೊಂಡಿರಬೇಕು ದೇಸಿ ತಳಿಗಳು ವಿಶಿಷ್ಟ್ಟವಾದ ಗುಣಲಕ್ಷಣ ಹೊಂದಿದ ಮತ್ತು ತಾವು ಬೆಳೆದ ಬೆಳೆಗಳು ಮುಖ್ಯವಾಗಿ ಅಧಿಸೂಚಿತಗೊಂಡ ತಳಿಗಳಾಗಿರಬಾರದು. ಈ ಎಲ್ಲ ಲಕ್ಷಣಗಳನ್ನು ಒಳಗೊಂಡಿದ್ದರೆ ರೈತರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.